ಗುರುವಾರ , ನವೆಂಬರ್ 21, 2019
27 °C
ಎರಡು ನಿಮಿಷ ವಿಮಾನ ಚಲಾಯಿಸಿದ ರಕ್ಷಣಾ ಸಚಿವರು l ಶಬ್ದಾತೀತ ವೇಗದಲ್ಲಿ ಹಾರಿದ ಫೈಟರ್‌

‘ತೇಜಸ್ಸಿಗೆ’ ವಿಸ್ಮಿತರಾದ ರಾಜನಾಥ್ ಸಿಂಗ್‌

Published:
Updated:
Prajavani

ಬೆಂಗಳೂರು: ದಟ್ಟ ಮೋಡಗಳಿಂದ ಆವರಿಸಿದ್ದ ಆಗಸದಿಂದ ತುಂತುರು ಹನಿಗಳ ಸಿಂಚನವಾಗುತ್ತಿತ್ತು. ಮೋಡಗಳಿಂದ ಹೊರಬಂದು; ಬೆಳಕು ಚೆಲ್ಲುವ ಸ್ಥಿತಿಯಲ್ಲಿಲ್ಲದ ಸೂರ್ಯ ಮರೆಯಲ್ಲೇ ನಿಂತಿದ್ದ. ಮೊದಲ ಬಾರಿಗೆ ದೇಶದ ರಕ್ಷಣಾ ಮಂತ್ರಿಯನ್ನು ಭುಜದ ಮೇಲೆ ಹೊತ್ತು ನಭಕ್ಕೆ ಜಿಗಿಯುವ ಸಂಭ್ರಮದಲ್ಲಿದ್ದ ದೇಶಿ ನಿರ್ಮಿತ ಲಘು ಯುದ್ಧ ವಿಮಾನ ‘ತೇಜಸ್‌’ಗೆ ತನ್ನ ಸಾಹಸ ಮೆರೆಯುವ ಬಾನಂಗಳ ತಿಳಿಯಾಗಲು ಕಾಯಲೇಬೇಕಾಯಿತು.

ಸ್ವದೇಶಿನಿರ್ಮಿತ ಸೂಪರ್‌ ಸಾನಿಕ್‌ ‘ತೇಜಸ್‌’ ಎಂಕೆ1(ಎಲ್‌ಸಿಎ) ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ವಿಶಿಷ್ಟ ಕ್ಷಣ ಅದಾಗಿತ್ತು. ಮೋಡ ಕವಿದ ವಾತಾವರಣದಿಂದಾಗಿ ಹಾರಾಟವನ್ನು ಸುಮಾರು 30 ನಿಮಿಷಗಳಷ್ಟು ತಡವಾಗಿ ಆರಂಭಿಸಬೇಕಾಯಿತು.

ಸ್ವಲ್ಪ ಹೊತ್ತು ಕಳೆದ ಬಳಿಕ ಆಗಸ ತಿಳಿಯಾಗಿ, ಸೂರ್ಯನ ಕಿರಣಗಳು ಎಲ್ಲೆಡೆ ಪಸರಿಸಿದವು. ವಿಮಾನ ಹಾರಾಟಕ್ಕೆ ಬಾನಂಗಳದ ವೇದಿಕೆಯೂ ಸಿದ್ಧವಾಯಿತು. ಪೈಲಟ್‌ಗಳ ಪೋಷಾಕು ತೊಟ್ಟಿದ್ದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ‘ತೇಜಸ್‌’ ಏರಿ ಎರಡು ಸೀಟರ್‌
ಗಳ ಹಿಂದಿನ ಆಸನದಲ್ಲಿ ಕುಳಿತರು. ಏರ್‌ವೈಸ್‌ ಮಾರ್ಷಲ್‌ ಎನ್‌.ತಿವಾರಿ ಅನುಭವಿ ಪೈಲಟ್‌ ಅವರು ‘ತೇಜಸ್‌’ನ್ನು ಬೆಂಗಳೂರಿನ ನೆತ್ತಿಯ ಮೇಲೆ ಹಾರಾಟ ಮಾಡುತ್ತಾ ಅದರ ತಾಂತ್ರಿಕ ವೈಶಿಷ್ಟ್ಯ ವಿವರಿಸುವ ಹೊಣೆಗಾರಿಕೆಯನ್ನೂ ಹೊತ್ತಿದ್ದರು.

ಎಂಜಿನ್‌ ಆನ್ ಮಾಡಿ ಕೆಲವು ನಿಮಿಷಗಳ ಕಾಲ ಭಾರಿ ಸದ್ದು ಮಾಡುತ್ತಾ, ರನ್‌ವೇಯತ್ತ ನಿಧಾನವಾಗಿ ಸಾಗಿತು. ಇದಾದ ಕೆಲವೇ ನಿಮಿಷಗಳಲ್ಲಿ ತೇಜಸ್‌ ಗರ್ಜಿಸುತ್ತಾ ನಭಕ್ಕೆ ಜಿಗಿಯಿತು. ಕೆಳಗಿದ್ದವರು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಮೋಡಗಳ ಒಳಗೆ ತೂರಿ ಕಣ್ಮರೆಯಾಯಿತು. ಇದಾದ ಅರ್ಧ ಗಂಟೆ ಬಳಿಕ ತೇಜಸ್‌ ರನ್‌ವೇಗೆ ಬಂದಿಳಿಯಿತು. ವಿಮಾನದಿಂದ ಇಳಿದ ಬಳಿಕ ಪೈಲಟ್‌ಗಳು ಇತರ ಅಧಿಕಾರಿಗಳ ಕೈಕುಲುಕಿದರು. ಸಚಿವರ ಜತೆ ನಿಂತು ಫೋಟೊಗಳನ್ನು ತೆಗೆಸಿಕೊಂಡರು.

‘ಜೀವನದ ರೋಮಾಂಚನ ಕ್ಷಣಗಳು’: ತೇಜಸ್‌ ಹಾರಾಟ ಏನನ್ನಿಸಿತು ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ‘ಜೀವಮಾನದಲ್ಲೇ ಅತ್ಯಂತ ರೋಮಾಂಚನದ ಕ್ಷಣಗಳು’ ಎಂದು ಸಿಂಗ್‌ ಉಲ್ಲಸಿತರಾಗಿ ವಿವರಿಸಿದರು.

‘ಇದರಲ್ಲಿ ಕುಳಿತು ಹಾರಾಟ ಮಾಡುವಾಗ ನಮ್ಮ ಪೈಲಟ್‌ಗಳು ಎಷ್ಟು ಸಾಹಸ ಮತ್ತು ಚಾಕಚಕ್ಯತೆಯಿಂದ ಯುದ್ಧ ವಿಮಾನ ನಡೆಸುತ್ತಾರೆ ಎಂಬುದು ಗಮನಕ್ಕೆ ಬಂದಿತು. ಅತ್ಯಂತ ಕಠಿಣ ಸ್ಥಿತಿಯಲ್ಲಿ ವಿಮಾನವನ್ನು ಮುನ್ನಡೆಸುತ್ತಾರೆ. ಅವರ ಪರಾಕ್ರಮಗಳಿಗೆ ನಾವು ಶಹಬಾಸ್‌ ಹೇಳಲೇಬೇಕು’ ಎಂದರು.

ಎರಡೂವರೆ ನಿಮಿಷ ಸಿಂಗ್‌ ನಿಯಂತ್ರಣ: ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಪೈಲಟ್‌ ತಿವಾರಿ, ‘ರಕ್ಷಣಾ ಸಚಿವರು ಎರಡೂವರೆ ನಿಮಿಷಗಳಷ್ಟು ಕಾಲ ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಸುಲಭವಾಗಿ, ಆರಾಮದಿಂದ ಮುನ್ನಡೆಸಿದರು’ ಎಂದು ಹೇಳಿದಾಗ, ‘ತಿವಾರಿ ಸಾಹೇಬರು ಹಾಗೇ ಮಾಡಿ, ಹೀಗೆ ಮಾಡಿ ಎಂದರು. ಅವರು ಹೇಳಿದ ಹಾಗೆ ಮಾಡಿದೆ ಅಷ್ಟೇ’ ಎಂದು ರಾಜನಾಥ್‌ ಹಾಸ್ಯದ ಚಟಾಕಿ ಹಾರಿಸಿದರು.

‘ಈ ಯುದ್ಧ ವಿಮಾನದ ಏವಿಯಾನಿಕ್ಸ್‌ ವಿಶೇಷತೆ, ಲೇಸರ್ ನಿರ್ದೇಶಿತವಾಗಿ ಸುಮಾರು 20 ರಿಂದ 25 ಕಿ.ಮೀ ದೂರದಲ್ಲಿರುವ ಗುರಿಯನ್ನು ನಾಶ ಪಡಿಸುವ ಸಾಮರ್ಥ್ಯ, ವಿಮಾನದ ಹಗುರ ಸವಾರಿ, ನಯ– ನಾಜೂಕುತನವನ್ನು ವಿವರಿಸಿದೆ. ಒಂದು ಹಂತದಲ್ಲಿ ವಿಮಾನ ಶಬ್ದಾತೀತ ವೇಗದಲ್ಲಿ ಸಾಗಿದ್ದನ್ನು ವಿವರಿಸಿದೆ. ಅದು ಅವರ ಗಮನಕ್ಕೆ ಬರಲಿಲ್ಲ. ವೇಗವನ್ನು ಸ್ಪೀಡೋ ಮೀಟರ್‌ ಮೂಲಕ ತೋರಿಸಿದೆ’ ಎಂದು ತಿವಾರಿ ಮಾಧ್ಯಮದ ಮುಂದೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಪ್ರತಿಕ್ರಿಯಿಸಿ (+)