ಶನಿವಾರ, ನವೆಂಬರ್ 23, 2019
17 °C
ಅಭ್ಯಾಸ ನಡೆಸಿದ ಭಾರತ–ದಕ್ಷಿಣ ಆಫ್ರಿಕಾ ತಂಡಗಳ ಆಟಗಾರರು

ವಿರಾಟ್ ಬಳಗಕ್ಕೆ ‘ದ್ರಾವಿಡ’ ಪಾಠ

Published:
Updated:
Prajavani

ಬೆಂಗಳೂರು: ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಕೆ.ಎಲ್. ರಾಹುಲ್, ರಿಷಭ್ ಪಂತ್, ಶಿಖರ್ ಧವನ್‌ ಅವರಿಗೆ ಶುಕ್ರವಾರ ರಾಹುಲ್ ದ್ರಾವಿಡ್‌ ಅವರ ‘ಪಾಠ’ ಕೇಳುವ ಅವಕಾಶ ಒದಗಿತು.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಪಂದ್ಯವನ್ನು ಆಡಲಿರುವ ವಿರಾಟ್ ಕೊಹ್ಲಿ ಬಳಗವು ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿತು. ಈ ಸಂದರ್ಭದಲ್ಲಿ ಎನ್‌ಸಿಎ ನಿರ್ದೇಶಕರೂ ಆಗಿರುವ ರಾಹುಲ್ ದ್ರಾವಿಡ್ ಆಟಗಾರರೊಂದಿಗೆ ಮಾತನಾಡಿದರು. ಎಡಗೈ ಬ್ಯಾಟ್ಸ್‌ಮನ್ ಶಿಖರ್, ಶಿಖರ್ ಮತ್ತು ಕನ್ನಡಿಗ ರಾಹುಲ್ ಅವರೊಂದಿಗೆ ಬಹಳ ಹೊತ್ತು ಚರ್ಚಿಸಿದರು.

ಮುಂದಿನ ವರ್ಷ ಟ್ವೆಂಟಿ–20 ವಿಶ್ವಕಪ್ ನಡೆಯಲಿದೆ. ಆ ಹಿನ್ನೆಲೆಯಲ್ಲಿ ತಂಡವನ್ನು ಕಟ್ಟುವ ಕಾರ್ಯ ಆರಂಭವಾಗಿದೆ. ಆದ್ದರಿಂದ ಈ ಒಂದು ವರ್ಷದಲ್ಲಿ ಯುವ  ಆಟಗಾರರು ತಮಗೆ ಸಿಗುವ 4–5 ಪಂದ್ಯಗಳಲ್ಲಿಯೇ ಸಾಮರ್ಥ್ಯ ಸಾಬೀತುಪಡಿಸಿ ಅವಕಾಶ ಭದ್ರಪಡಿಸಿಕೊಳ್ಳಬೇಕು ಎಂದು ನಾಯಕ ವಿರಾಟ್ ಕೊಹ್ಲಿ ಈಚೆಗೆ ಹೇಳಿದ್ದರು. ಆದ್ದರಿಂದ ವಿಶೇಷವಾಗಿ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ರಿಷಭ್ ಮೇಲೆ ಒತ್ತಡ ಹೆಚ್ಚಿದೆ. ಆದರೆ ಅವರು ಮೊಹಾಲಿಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಪಂದ್ಯದಲ್ಲಿಯೂ ವೈಫಲ್ಯ ಅನುಭವಿಸಿದ್ದರು. ಅವರಿಗೂ ದ್ರಾವಿಡ್ ಕೆಲವು ’‍ಟಿಪ್ಸ್‌’ ಕೊಟ್ಟಿದ್ದಾರೆನ್ನಲಾಗಿದೆ. 

ಈ ಸಂದರ್ಭದಲ್ಲಿ ದ್ರಾವಿಡ್ ಅವರು ತಂಡದ ಮುಖ್ಯಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಶ್ರೀಧರ್ ಮತ್ತು ನಾಯಕ ವಿರಾಟ್ ಕೊಹ್ಲಿಯೊಂದಿಗೂ ಮಾತನಾಡಿದರು. 

ಮೊಹಾಲಿಯಲ್ಲಿ ಏಳು ವಿಕೆಟ್‌ಗಳಿಗೆ ಭಾರತ ತಂಡವು ಗೆದ್ದಿತ್ತು. ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ. ಕೊನೆಯ ಪಂದ್ಯವು ಭಾನುವಾರ ನಡೆಯಲಿದೆ. ಅದರಲ್ಲಿ ಭಾರತವು ಗೆದ್ದರೆ ಸರಣಿಯನ್ನು ತನ್ನದಾಗಿಸಿಕೊಳ್ಳುವುದು. ಆದರೆ, ವಿರಾಟ್ ಬಳಗವನ್ನು ಸೋಲಿಸಿ ಸರಣಿ ಸಮ ಮಾಡಿಕೊಳ್ಳುವ ಛಲದಲ್ಲಿ ಪ್ರವಾಸಿ ಬಳಗವು ಇದೆ. ಮಧ್ಯಾಹ್ನದ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ನಾಯಕತ್ವದ ಬಳಗವು ಅಭ್ಯಾಸ ನಡೆಸಿತು.

ಪ್ರತಿಕ್ರಿಯಿಸಿ (+)