ಸೋಮವಾರ, ಡಿಸೆಂಬರ್ 16, 2019
17 °C

16ನೇ ಪ್ರಕರಣದಲ್ಲೂ ಸೈನೈಡ್‌ ಮೋಹನ್‌ ದೋಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಯುವತಿಯರನ್ನು ಪರಿಚಯಿಸಿಕೊಂಡು ಅತ್ಯಾಚಾರ ನಡೆಸಿ, ಸೈನೈಡ್‌ ನೀಡಿ ಕೊಲೆ ಮಾಡುತ್ತಿದ್ದ ಸರಣಿ ಹಂತಕ ಮೋಹನ್‌ಕುಮಾರ್‌ ಅಲಿಯಾಸ್‌ ಸೈನೈಡ್‌ ಮೋಹನ್‌ 16ನೇ ಪ್ರಕರಣದಲ್ಲೂ ದೋಷಿ ಎಂದು ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶನಿವಾರ ತೀರ್ಮಾನ ಪ್ರಕಟಿಸಿದೆ.

ಮೋಹನ್‌ ವಿರುದ್ಧ ಒಟ್ಟು 20 ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ದಾಖಲಾಗಿದ್ದವು. ಈವರೆಗೆ 16 ಪ್ರಕರಣಗಳ ವಿಚಾರಣೆ ಮುಗಿದಿದೆ. 16ನೇ ಪ್ರಕರಣದಲ್ಲಿ ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

2007ರಲ್ಲಿ ಅಪರಾಧಿಯು ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ಬಸ್‌ ನಿಲ್ದಾಣದಲ್ಲಿ ಅಲ್ಲಿನ ಬೇಕೂರಿನ 33 ವರ್ಷ ವಯಸ್ಸಿನ ಯುವತಿಯೊಬ್ಬರನ್ನು ಪರಿಚಯಿಸಿಕೊಂಡಿದ್ದ. ಸುಧಾಕರ ಆಚಾರ್ಯ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಮೋಹನ್‌, ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿ ಸ್ನೇಹ ಗಿಟ್ಟಿಸಿದ್ದ. ಆಕೆಯನ್ನು ಪ್ರೀತಿಸುವುದಾಗಿ ಹೇಳಿಕೊಂಡು ಯುವತಿಯ ಪೋಷಕರ ವಿಶ್ವಾಸವನ್ನೂ ಗಳಿಸಿದ್ದ.

ಯುವತಿ ಸಂಗೀತ ಶಿಕ್ಷಕಿಯಾಗಿದ್ದು, ಧ್ವನಿ ಸುರುಳಿಗಳನ್ನೂ ಹೊರತರುತ್ತಿದ್ದರು. 2007ರ ಮೇ 28ರಂದು ಧ್ವನಿಮುದ್ರಣದ ಕಾರಣ ನೀಡಿ ಮನೆಯಿಂದ ಹೊರಹೋಗಿದ್ದಳು. ಇಬ್ಬರೂ ಬೆಂಗಳೂರಿಗೆ ಹೋಗಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಮದುವೆಯಾಗುವುದಾಗಿ ನಂಬಿಸಿ ಯುವತಿಯೊಡನೆ ದೈಹಿಕ ಸಂಪರ್ಕ ಬೆಳೆಸಿದ್ದ. ಮರುದಿನ ಪೂಜೆಯ ನೆಪ ಹೇಳಿ ಚಿನ್ನಾಭರಣ ಮತ್ತು ನಗದನ್ನು ಕೊಠಡಿಯಲ್ಲೇ ಇರಿಸುವಂತೆ ಯುವತಿಗೆ ಹೇಳಿದ್ದ.

ಬೆಂಗಳೂರಿನ ಬಸ್‌ ನಿಲ್ದಾಣವೊಂದಕ್ಕೆ ಕರೆದೊಯ್ದು ಗರ್ಭ ನಿರೋಧಕ ಮಾತ್ರೆ ಎಂಬುದಾಗಿ ಹೇಳಿ ಯುವತಿಗೆ ಸೈನೈಡ್‌ ನೀಡಿದ್ದ. ಅದನ್ನು ಸೇವಿಸಿದ್ದ ಯುವತಿ ಶೌಚಾಲಯದಲ್ಲೇ ಮೃತಪಟ್ಟಿದ್ದಳು. ಬಳಿಕ ಕೊಠಡಿಗೆ ವಾಪಸಾಗಿದ್ದ ಮೋಹನ್‌ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. ಮಂಗಳೂರು ನಗರಕ್ಕೆ ಬಂದು ಅವುಗಳನ್ನು ಮಾರಾಟ ಮಾಡಿದ್ದ.

ಯುವತಿ ರಹಸ್ಯವಾಗಿ ಮದುವೆ ಆಗಿರಬಹುದು ಎಂದು ಕುಟುಂಬದವರು ತಿಳಿದಿದ್ದರು. 2009ರಲ್ಲಿ ಮೋಹನ್‌ನನ್ನು ಪೊಲೀಸರು ಬಂಧಿಸಿದ ಬಳಿಕ ಕುಟುಂಬದವರು ಆತನ ಗುರುತು ಪತ್ತೆಮಾಡಿದ್ದರು. ಯುವತಿಯ ಸಹೋದರಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

2009ರ ಅಕ್ಟೋಬರ್‌ನಲ್ಲಿ ಬರಿಮಾರು ಯುವತಿಯ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್‌ ಅಧಿಕಾರಿಗಳ ಬಳಿ ಬೇಕೂರಿನ ಯುವತಿಯನ್ನೂ ಕೊಲೆ ಮಾಡಿರುವುದಾಗಿ ಮೋಹನ್‌ ಒಪ್ಪಿಕೊಂಡಿದ್ದ. ತನಿಖಾಧಿಕಾರಿಗಳಾದಿದ್ದ ಲೋಕೇಶ್ವರ ಮತ್ತು ನಾಗರಾಜ ವಿಚಾರಣೆ ನಡೆಸಿದ್ದರು. ಸಿಐಡಿ ಡಿವೈಎಸ್‌ಪಿ ಶಿವಶರಣಪ್ಪ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

38 ಸಾಕ್ಷಿಗಳ ವಿಚಾರಣೆ ನಡೆಸಿ, 49 ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಮೋಹನ್‌ ಅಪರಾಧಿ ಎಂದು ಸಾರಿದೆ. ಕೊಲೆ, ವಿಷಪ್ರಾಶನ, ಚಿನ್ನಾಭರಣ ಸುಲಿಗೆ, ವಂಚನೆ ಮತ್ತು ಸಾಕ್ಷ್ಯನಾಶದ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ಹೇಳಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು