ಮಂಗಳವಾರ, ನವೆಂಬರ್ 19, 2019
23 °C

ಸಿಎಬಿ: ಗಂಗೂಲಿ ಪುನರಾಯ್ಕೆ ಬಹುತೇಕ ಖಚಿತ

Published:
Updated:
Prajavani

ಕೋಲ್ಕತ್ತ : ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ)ಗೆ ಸೌರವ್ ಗಂಗೂಲಿ ಅವರು ಅಧ್ಯಕ್ಷರಾಗಿ ಪುನರಾಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಅವರು 2020ರವರೆಗೆ ಮಾತ್ರ ಅಧಿಕಾರದಲ್ಲಿರುತ್ತಾರೆ.

ಚುನಾವಣೆಗೆ ಕೊನೆಯ ದಿನಾಂಕವಾಗಿರುವ ಸೆಪ್ಟೆಂಬರ್ 28ರಂದು ಸಿಎಬಿಯ ಸರ್ವಸದಸ್ಯರ ಸಭೆ ನಡೆಸಲಾಗುವುದು. ಅದರಲ್ಲಿ ಗಂಗೂಲಿ ಮತ್ತು ಅವರು ಐವರು ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗಬಹುದು. ಏಕೆಂದರೆ, ಗಂಗೂಲಿ ಗುಂಪಿನ ವಿರುದ್ಧ  ಇದುವರೆಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ.

2014ರಲ್ಲಿ ಗಂಗೂಲಿ ಜಂಟಿ ಕಾರ್ಯದರ್ಶಿಯಾಗಿದ್ದರು. 2015ರಲ್ಲಿ ಜಗಮೋಹನ್ ದಾಲ್ಮಿಯಾ ಅವರು ನಿಧನರಾದ ನಂತರ ಗಂಗೂಲಿ ಅಧ್ಯಕ್ಷರಾದರು. ಅದರಿಂದಾಗಿ ಅವರು ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಪದಾಧಿಕಾರಿಯಾಗಿದ್ದಾರೆ. ಕೂಲಿಂಗ್ ಆಫ್‌ ನಿಯಮದ ಪ್ರಕಾರ ಆರು ವರ್ಷಗಳವರೆಗೆ ಸತತ ಪದಾಧಿಕಾರಿ ಸ್ಥಾನದಲ್ಲಿದ್ದರೆ,  ಅದರ ನಂತರದ ಅವಧಿಯಲ್ಲಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಅವರು ಮುಂದಿನ ವರ್ಷ ಜುಲೈನಲ್ಲಿ ಆರು ವರ್ಷ ಪೂರೈಸುವರು.

ಆಗ ಗಂಗೂಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ, ಸದ್ಯ ಜಂಟಿ ಕಾರ್ಯದರ್ಶಿಯಾಗಿರುವ ಅಭಿಷೇಕ್ ದಾಲ್ಮಿಯಾ (ಜಗಮೋಹನ್ ದಾಲ್ಮಿಯಾ ಪುತ್ರ) ಅವರು ಅಧ್ಯಕ್ಷರಾಗುವ ಸಾಧ್ಯತೆ ನಿಚ್ಚಳವಾಗಿದೆ.

ಸಿಎಬಿಯ ಸಂಭವನೀಯ ಮಂಡಳಿ: ಸೌರವ್ ಗಂಗೂಲಿ (ಅಧ್ಯಕ್ಷ), ನರೇಶ್ ಓಜಾ (ಉಪಾಧ್ಯಕ್ಷ), ಅಭಿಷೇಕ್ ದಾಲ್ಮಿಯಾ (ಕಾರ್ಯದರ್ಶಿ), ದೇವವ್ರತ ದಾಸ್ (ಜಂಟಿ ಕಾರ್ಯದರ್ಶಿ), ದೇವಾಶೀಶ್ ಗಂಗೂಲಿ (ಖಜಾಂಚಿ).

ಪ್ರತಿಕ್ರಿಯಿಸಿ (+)