ಮಂಗಳವಾರ, ಅಕ್ಟೋಬರ್ 22, 2019
21 °C

ಪ್ರಗತಿಯಲ್ಲಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್

Published:
Updated:
Prajavani

ದೇಶಿ ಬ್ಯಾಂಕಿಂಗ್ ಕ್ಷೇತ್ರವು ಮಹಾ ವಿಲೀನ, ವಸೂಲಾಗದ ಸಾಲ (ಎನ್ ಪಿಎ), ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ ಆಪರೇಟಿವ್ (ಪಿಎಂಸಿ) ಬ್ಯಾಂಕ್ ಪ್ರಕರಣದ ತಾಜಾ ಪ್ರಕರಣ ದಲ್ಲಿ  ವಹಿವಾಟಿಗೆ ನಿರ್ಬಂಧ, ಪಟ್ಟಣ ಸಹಕಾರಿ ಬ್ಯಾಂಕ್ ಠೇವಣಿದಾರರು ತಮ್ಮ ಖಾತೆಯಲ್ಲಿನ ಹಣ ಹಿಂದೆ ಪಡೆಯುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿರುವ ಕಡಿವಾಣ, ಲಾಭಾಂಶಕ್ಕೆ ಕತ್ತರಿ ಮತ್ತಿತರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನ ಸಿಟಿ ಕೋ- ಆಪರೇಟಿವ್ ಬ್ಯಾಂಕ್ ಹಲವಾರು ಕಾರಣಗಳಿಗೆ ಭಿನ್ನವಾಗಿ ನಿಂತು ಗಮನ ಸೆಳೆಯುತ್ತದೆ.

ಪಟ್ಟಣ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಯಶಸ್ವಿಯಾಗಿ 113ನೆ ವರ್ಷದಲ್ಲಿ ಮುನ್ನಡೆಯುತ್ತಿದೆ. ತನ್ನ  ದೊಡ್ಡ ಮೊತ್ತದ ವಹಿವಾಟಿನ ಕಾರಣಕ್ಕೆ ರಾಜ್ಯದ ಸಹಕಾರಿ ವಲಯದ ಅಗ್ರಗಣ್ಯ ಬ್ಯಾಂಕ್‌ ಆಗಿ ಗಮನ ಸೆಳೆಯುತ್ತಿದೆ. 2018–19ನೆ ಹಣಕಾಸು ವರ್ಷದಲ್ಲಿ ₹ 23.89 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಇದು ಬ್ಯಾಂಕಿನ ಹಣಕಾಸು ಪರಿಸ್ಥಿತಿಯು ಸದೃಢವಾಗಿರುವುದರ ಸ್ಪಷ್ಟ ಸಂಕೇತವಾಗಿದೆ.

‘ಹಣಕಾಸು ವಹಿವಾಟು, ಲೆಕ್ಕಪತ್ರ, ಗ್ರಾಹಕರ ಸೇವೆ- ಹೀಗೆ ಎಲ್ಲ ಮಾನದಂಡಗಳ ಪ್ರಕಾರ, ಈ ಸಹಕಾರಿ ಬ್ಯಾಂಕ್‌ನ ಆರ್ಥಿಕ ಸ್ಥಿತಿಗತಿ ಸದೃಢವಾಗಿದೆ. ಗ್ರಾಹಕ ಕೇಂದ್ರಿತ ಉತ್ತಮ ಸೇವೆ ಒದಗಿಸುತ್ತಿರುವುದರಿಂದ  ಸದಸ್ಯರ ಅಭಿಮಾನಕ್ಕೆ ಪಾತ್ರವಾಗಿದೆ. ಬ್ಯಾಂಕ್‌ ನಿರಂತರವಾಗಿ ಪ್ರಗತಿಪಥದಲ್ಲಿ ನಡೆಯಲು ಸದಸ್ಯರ ಸಹಕಾರ ಮತ್ತು ಸಿಬ್ಬಂದಿಯ ಪರಿಶ್ರಮ ಮುಖ್ಯವಾಗಿದೆ’ ಎಂದು ಬ್ಯಾಂಕ್‌ ಅಧ್ಯಕ್ಷ ಆವಲಹಳ್ಳಿ ಚಂದ್ರಪ್ಪ ಆರ್‌. ಅವರು ಹೇಳುತ್ತಾರೆ.

74 ಸಾವಿರಕ್ಕಿಂತ ಹೆಚ್ಚಿನ ಸದಸ್ಯರನ್ನು ಹೊಂದಿರುವ ಬ್ಯಾಂಕ್‌, ₹ 2,049 ಕೋಟಿ ಮೊತ್ತದ ಠೇವಣಿ ಹೊಂದಿದೆ. ₹ 1,336 ಕೋಟಿ ಮೊತ್ತದ ಸಾಲ ಮಂಜೂರು ಮಾಡಿದೆ. ಸಾಲ ಮತ್ತು ಠೇವಣಿ ಅನುಪಾತವು (ಸಿ:ಡಿ) ಶೇ 70ರಷ್ಟಿದೆ. ಇತರ ಸಹಕಾರಿ ಬ್ಯಾಂಕ್‌ಗಳಲ್ಲಿ ಇದು ಶೇ 50ರಷ್ಟು ಇದೆ. ಗರಿಷ್ಠ ಪ್ರಮಾಣದ ಸಾಲ ಮಂಜೂರಾತಿ ಮತ್ತು ಕನಿಷ್ಠ ಪ್ರಮಾಣದ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಬ್ಯಾಂಕ್‌ನ ವಿಶೇಷತೆಯಾಗಿದೆ.

ಸಾಲ ಮಂಜೂರಾತಿಯು ಗರಿಷ್ಠ ಪ್ರಮಾಣದಲ್ಲಿ ಇದ್ದರೂ, ಒಟ್ಟು ಮತ್ತು ನಿವ್ವಳ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಬಂದಿದೆ. ಶೇ 15ರಷ್ಟು ಲಾಭಾಂಶ ನೀಡುತ್ತ ಬರಲಾಗಿದೆ. ಸಹಕಾರಿ ಇಲಾಖೆಯ ವಾರ್ಷಿಕ ಲೆಕ್ಕಪತ್ರ ತಪಾಣೆಯಲ್ಲಿ ಮೊದಲಿನಿಂದಲೂ ‘ಎ’ ವರ್ಗೀಕರಣ ಪಡೆಯುತ್ತ ಬಂದಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ. ಆರ್‌ಬಿಐನ ಲೆಕ್ಕಪತ್ರ ತಪಾಸಣೆಯಲ್ಲಿಯೂ ಆರ್ಥಿಕ ಸ್ಥಿತಿಗತಿ ಉತ್ತಮವಾಗಿದೆ.

ಗರಿಷ್ಠ ಪ್ರಮಾಣದಲ್ಲಿ ಸಾಲ ನೀಡಿಕೆ ಮತ್ತು ನಿವ್ವಳ ಎನ್‌ಪಿಎ ಕಡಿಮೆ ಮಟ್ಟದಲ್ಲಿ ಇರುವುದು ದೊಡ್ಡ ಸಾಧನೆಯಾಗಿದೆ. ವರ್ಷದಿಂದ ವರ್ಷಕ್ಕೆ ಎನ್‌ಪಿಎ ಮಟ್ಟ  ಕಡಿಮೆಯಾಗುತ್ತಿದೆ. ಗರಿಷ್ಠ ಪ್ರಮಾಣದಲ್ಲಿ  ಸಾಲ ನೀಡಿದ್ದರೂ, (₹ 1,336 ಕೋಟಿ) ಕನಿಷ್ಠ ಮಟ್ಟದ ನಿವ್ವಳ ‘ಎನ್‌ಪಿಎ’ (ಶೇ 0.36) ಇರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ. ಬ್ಯಾಂಕ್‌ನ ಸಾಲ ವಸೂಲಾತಿ ಪ್ರಮಾಣವೂ ಉತ್ತಮ ಮಟ್ಟದಲ್ಲಿ ಇರುವುದು ಗ್ರಾಹಕರ ವಿಶ್ವಾಸಾರ್ಹತೆಯ ದ್ಯೋತಕವೂ ಹೌದು.

ಬ್ಯಾಂಕ್‌ ಅಸ್ತಿತ್ವಕ್ಕೆ ಬಂದ ದಿನದಿಂದಲೂ ತನ್ನ ಗ್ರಾಹಕರಿಗೆ ಒಂದು ವರ್ಷವೂ ಬಿಡದೆ ನಿರಂತರವಾಗಿ ಗರಿಷ್ಠ ಪ್ರಮಾಣದಲ್ಲಿ ಲಾಭಾಂಶ ವಿತರಿಸುತ್ತ ಬಂದಿದೆ. ಸದಸ್ಯತ್ವ ಮತ್ತು ದುಡಿಯುವ ಬಂಡವಾಳ ವಿಷಯದಲ್ಲಿ ಮೊದಲ ಸ್ಥಾನದಲ್ಲಿ ಇದೆ. 74 ಸಾವಿರಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಇಲ್ಲಿ ಸದಸ್ಯತ್ವವು ಸಮಾಜದ ಎಲ್ಲ ವರ್ಗದವರಿಗೆ ಮುಕ್ತವಾಗಿದೆ. ಸದಸ್ಯತ್ವ ನೀಡಿಕೆಯಲ್ಲಿ ಇಲ್ಲಿ ಯಾರಿಗೂ ತಾರತಮ್ಯ ಮಾಡುವುದಿಲ್ಲ. ಅರ್ಜಿ ಹಾಕಿದವರಿಗೆಲ್ಲ ಸದಸ್ಯತ್ವ ನೀಡಲಾಗುತ್ತಿದೆ. ಈ ವಿಷಯದಲ್ಲಿ ಸಹಕಾರಿ ತತ್ವವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರಲಾಗುತ್ತಿದೆ.

ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿರುವ  ಕ್ಯಾಪಿಟಲ್‌ ಟು ರಿಸ್ಕ್‌ ಅಸೆಟ್‌ ರೇಷಿಯೊ ಶೇ 9ರಷ್ಟಿದ್ದರೆ, ಬ್ಯಾಂಕನ ಈ ಅನುಪಾತವು ಶೇ 14ರಷ್ಟಿದೆ. ಬ್ಯಾಂಕ್‌ನ ಲಾಭವು ಈ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಪೂರ್ವ ₹ 60.04 ಕೋಟಿಗಳಷ್ಟಿತ್ತು. ನಿವ್ವಳ ಲಾಭ ₹ 23.89 ಕೋಟಿಗಳಷ್ಟಿದೆ. ಐದಾರು ಶಾಖೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ ಖರೀದಿಸಿರುವ ನಿವೇಶನಗಳಲ್ಲಿ ಸ್ವಂತ ಬಂಡವಾಳದಲ್ಲಿಯೇ ಸುಸಜ್ಜಿತ ಕಟ್ಟಡ ನಿರ್ಮಿಸುವಷ್ಟು ಬಂಡವಾಳವು ಬ್ಯಾಂಕ್ ಬಳಿ ಇದೆ. ಕೇಂದ್ರೀಯ ಬ್ಯಾಂಕ್ ಕಳೆದ ಎರಡು ಮೂರು ವರ್ಷಗಳಿಂದ ಶಾಖೆ ವಿಸ್ತರಣೆಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಶಾಖೆ ವಿಸ್ತರಣೆ ಉದ್ದೇಶ ನನೆಗುದಿಗೆ ಬಿದ್ದಿದೆ.

ಬ್ಯಾಂಕ್‌ನ ಪ್ರತಿಯೊಂದು ಶಾಖೆಯು ಅತ್ಯಾಧುನಿಕ  ಸೌಲಭ್ಯಗಳಿಂದ ಸುಸಜ್ಜಿತವಾಗಿವೆ. ಇದರ ಯಾವುದೇ ಶಾಖೆಗಳಿಗೆ ಹೋದರೂ ಇತರ ಯಾವುದೇ ಬ್ಯಾಂಕ್‌ಗಳಿಗೆ ಸರಿಸಮನಾದ ಸೌಲಭ್ಯಗಳು ಇರುವುದು ಅನುಭವಕ್ಕೆ ಬರುತ್ತದೆ. 2006–07 ರಿಂದೀಚೆಗೆ ಬ್ಯಾಂಕ್‌ 2018–19ರವರೆಗೆ 91.52 ಕೋಟಿ ಆದಾಯ ತೆರಿಗೆ ಪಾವತಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 17.61 ಕೋಟಿ ತೆರಿಗೆ ಪಾವತಿಸಿದೆ. ಆದಾಯ ತೆರಿಗೆ ಪಾವತಿ ಮತ್ತು ಭವಿಷ್ಯದ ವೆಚ್ಚಗಳಿಗಾಗಿ ನಿಗದಿತ ಮೊತ್ತ  ತೆಗೆದು ಇರಿಸುವ ಮೊದಲು ಇದ್ದ ನಿವ್ವಳ ಲಾಭದ ಮೊತ್ತವು ₹ 60 ಕೋಟಿಗೂ ಹೆಚ್ಚಿಗೆ ಇದೆ.

ಗ್ರಾಹಕ ಕೇಂದ್ರೀತ ಸೇವೆ ನೀಡುವುದೇ ನಮ್ಮ ಮೊದಲ ಆದ್ಯತೆ. ಗ್ರಾಹಕರು ತಲೆಮಾರುಗಳಿಂದ ಬ್ಯಾಂಕಿನ ಸದಸ್ಯರಾಗಿ ಮುಂದುವರೆದಿರುವುದು ಇದರ ಹೆಗ್ಗಳಿಕೆಯಾಗಿದೆ. ವರ್ಷಕ್ಕೆ ಎರಡು ಬಾರಿ ಅತ್ಯುತ್ತಮ ಗ್ರಾಹಕರನ್ನು ಸನ್ಮಾನಿಸುವುದನ್ನು ವ್ರತದಂತೆ ಪಾಲಿಸಿಕೊಂಡು ಬರಲಾಗುತ್ತಿದೆ. ಆಗಸ್ಟ್ 15 ಮತ್ತು ಜನವರಿ 26ರಂದು ನಿಯಮಿತವಾಗಿ ಸಾಲ ಮರುಪಾವತಿಸುವ ಗ್ರಾಹಕರನ್ನು ಸನ್ಮಾನಿಸುವುದನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬರಲಾಗುತ್ತಿದೆ. ಜತೆಗೆ ಬ್ಯಾಂಕ್‌ನ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಗುವುದು.

ಡಿಮ್ಯಾಂಡ್ ಡ್ರಾಫ್ಟ್  (ಡಿಡಿ), ಪೇ ಆರ್ಡರ್‌ಗಳಿಗೆ ಇತರ ಬ್ಯಾಂಕ್‌ಗಳಿಗೆ ಹೋಲಿಸಿದರೆ  ಕಡಿಮೆ ಶುಲ್ಕ ವಿದಿಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಈ ಸೇವೆಗಳನ್ನು ಉಚಿತವಾಗಿ ನೀಡಲಾಗುವುದು. ಎಲ್ಲ ಶಾಖೆಗಳಲ್ಲಿ ಸೇಫ್‌ ಲಾಕರ್‌ ಸೇವೆ ಒದಗಿಸಲಾಗಿದೆ. 1992ರಲ್ಲಿಯೇ ಕಂಪ್ಯೂಟರಿಕರಣ ಮಾಡಲಾಗಿದೆ. 2013ರಲ್ಲಿ ಕೋರ್‌ ಬ್ಯಾಂಕಿಂಗ್‌ ಸೌಲಭ್ಯ ಒದಗಿಸಲಾಗಿದೆ. ಒಟ್ಟು ಲಾಭದಲ್ಲಿನ ಶೇ 1ರಷ್ಟನ್ನು ದಾನ ಧರ್ಮ, ಪರಿಹಾರ ನಿಧಿ ಮತ್ತಿತರ ಉದ್ದೇಶಕ್ಕೆ ತೆಗೆದು ಇರಿಸಲಾಗುತ್ತಿದೆ.

 ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಬೆಳಿಗ್ಗೆಯಿಂದ ಬಂದು ಕುಳಿತುಕೊಂಡಿದ್ದರೂ ಯಾವೊಬ್ಬ ಗ್ರಾಹಕರು ದೂರು ನೀಡಿದ  ಒಂದೇ ಒಂದು ಉದಾಹರಣೆ ಇರುವುದಿಲ್ಲ. ಇದಕ್ಕೆಲ್ಲ ಸಿಬ್ಬಂದಿಯ ದಕ್ಷ ಕಾರ್ಯನಿರ್ವಹಣೆಯೇ ಮುಖ್ಯ ಕಾರಣ ಎಂದು ಅಧ್ಯಕ್ಷ  ಆವಲಹಳ್ಳಿ ಚಂದ್ರಪ್ಪ ಆರ್‌. ಅವರು ಹೆಮ್ಮೆಯಿಂದ ಹೇಳುತ್ತಾರೆ. ಈ ಮಾತು ಬ್ಯಾಂಕ್ ನ ಕಾರ್ಯಕ್ಷಮತೆಗೆ ಮತ್ತು ಸಿಬ್ಬಂದಿಯ ದಕ್ಷ ಕಾರ್ಯನಿರ್ವಹಣೆಗೆ ಕನ್ನಡಿ ಹಿಡಿಯುತ್ತದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)