ಮಂಗಳವಾರ, ಅಕ್ಟೋಬರ್ 22, 2019
21 °C

ಕುದುರೆಯಂತೆ ಓಡುವ ‘ಆಫ್ರಿಕಾ ಕಾಡುಕತ್ತೆ’

Published:
Updated:
Prajavani

ನಮಗೆ ಹೆಚ್ಚು ಚಿರಪರಿಚಿತವಾಗಿರುವ ಪ್ರಾಣಿಗಳಲ್ಲಿ ಕತ್ತೆ ಕೂಡ ಒಂದು. ಕತ್ತೆ ಕುರಿತು ಹಲವು ಕಥೆಗಳೂ ಇವೆ. ಭಾರತದಲ್ಲಿ ಹಲವು ವರ್ಷಗಳಿಂದ ಇದನ್ನು ಸಾಕುಪ್ರಾಣಿಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ನಮ್ಮದೇಶದಲ್ಲಷ್ಟೇ ಅಲ್ಲ, ಆಫ್ರಿಕಾ ಖಂಡದಲ್ಲೂ ಕತ್ತೆ ಪ್ರಭೇದಗಳಿವೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಆಫ್ರಿಕಾದ ಕಾಡುಕತ್ತೆ ಬಗ್ಗೆ ತಿಳಿಯೋಣ.

ಇದನ್ನು ಇಂಗ್ಲಿಷ್‌ನಲ್ಲಿ ಆಫ್ರಿಕನ್ ವೈಲ್ಡ್ ಆ್ಯಸ್‌ (African Wild Ass) ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು ಈಕ್ವಸ್‌ ಆಫ್ರಿಕನಸ್‌ (Equus africanus). ಇದು ಈಕ್ವಿಡೆ (Equidae) ಕುಟುಂಬಕ್ಕೆ ಸೇರಿದ್ದು, ಪೆರಿಸ್ಸೊಡ್ಯಾಕ್ಟಿಲಾ (Perissodactyla) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?

ಬೂದು ಬಣ್ಣದ ನಯವಾದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಸೊಂಟ, ಬೆನ್ನು, ಕತ್ತು, ಕೆನ್ನೆಗಳು ಬೂದು ಬಣ್ಣದಲ್ಲಿರುತ್ತವೆ. ಮೂತಿ, ಎದೆ, ಉದರಭಾಗ ಬಿಳಿ ಬಣ್ಣದಲ್ಲಿರುತ್ತದೆ. ಕಾಲುಗಳು ನೀಳವಾಗಿದ್ದು, ಬೂದು ಬಣ್ಣದಲ್ಲಿರುತ್ತವೆ. ಕಾಲುಗಳ ಕೆಳಭಾಗದಲ್ಲಿ ಹೇಸರಗತ್ತಗೆ ಇರುವಂತೆ ಕಪ್ಪು ಬಣ್ಣದ ಪಟ್ಟಿಗಳಿರುವುದು ವಿಶೇಷ. ಗೊರಸುಗಳು ದೊಡ್ಡದಾಗಿರುತ್ತವೆ. ಬಾಲ ಮಧ್ಯಮಗಾತ್ರದಲ್ಲಿದ್ದು, ತುದಿಯಲ್ಲಿ ಕೂದಲು ಬೆಳೆದಿರುತ್ತವೆ. ಕತ್ತಿನ ಮೇಲೆ ಬಿಳಿ ಮತ್ತು ತಿಳಿಗೆಂಪು ಮತ್ತು ಕಪ್ಪು ಬಣ್ಣದ ನೀಳವಾದ ಕೂದಲು ದಟ್ಟವಾಗಿ ಬೆಳೆದಿರುತ್ತವೆ. ದೊಡ್ಡದಾದ ಎಲೆಯಾಕಾರದ ಕಿವಿಗಳು ಸದಾ ಸೆಟೆದುಕೊಂಡಿರುತ್ತವೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಮೂತಿಯ ಸುತ್ತ ಬಿಳಿಬಣ್ಣದ ಪಟ್ಟಿ ಇರುತ್ತದೆ.

ಎಲ್ಲಿದೆ?

ಉತ್ತರ ಆಫ್ರಿಕಾ ಈ ಕತ್ತೆಯ ಮೂಲ ನೆಲೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಇದು, ಆಫ್ರಿಕಾ ಖಂಡದ ಡಿಜಿಬೌಟಿ, ಎರಿಟ್ರಿಯಾ, ಇಥಿಯೋಪಿಯಾ, ಸೊಮಾಲಿಯಾ, ಸುಡಾನ್ ಮತ್ತು ಈಜಿಪ್ಟ್ ರಾಷ್ಟ್ರಗಳಲ್ಲಿ ಇದು ಹೆಚ್ಚಾಗಿದೆ. ಮರುಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ. ಕುರುಚಲು ಮತ್ತು ಪೊದೆಗಿಡಗಳು ಬೆಳೆಯುವ ಪ್ರದೇಶಗಳಲ್ಲಿ ವಾಸಿಸುತ್ತದೆ. ಹುಲ್ಲು ಬೆಳೆಯುವ ನೀರಿರುವ ಪ್ರದೇಶಗಳಲ್ಲೂ ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಪ್ರಾಣಿ. ಆದರೂ ಸಂದರ್ಭಕ್ಕೆ ತಕ್ಕಂತೆ ಗುಂಪುಗಳನ್ನು ರಚಿಸಿಕೊಳ್ಳುತ್ತಿರುತ್ತದೆ. ಒಂದು ಗುಂಪಿನಲ್ಲಿ ಗರಿಷ್ಠ 50 ಕತ್ತೆಗಳು ಇರುತ್ತವೆ. ಒಮ್ಮೆ ಗಂಡು ಅಥವಾ ಹೆಣ್ಣು ಕತ್ತೆಗಳೇ ಸೇರಿ ಗುಂಪು ರಚಿಸಿಕೊಂಡರೆ, ಹಲವು ಸಂದರ್ಭಗಳಲ್ಲಿ ಹೆಣ್ಣುಕತ್ತೆಗಳು, ಗಂಡು ಕತ್ತೆಗಳು ಮರಿಗಳು ಗುಂಪಿನಲ್ಲಿ ಇರುತ್ತವೆ. ವಯಸ್ಕ ಮತ್ತು ಪ್ರಬಲ ಗಂಡು ಕತ್ತೆಗಳು ಗುಂಪಿನಲ್ಲಿ ಪ್ರಾಬಲ್ಯ ಮೆರೆಯುತ್ತವೆ. ನೀರು ದೊರೆಯುವಂತ ಪ್ರದೇಶಗಳಲ್ಲಿ ಗಡಿ ಗುರುತಿಸಿಕೊಳ್ಳುತ್ತವೆ. ಹೆಣ್ಣು ಕತ್ತೆಗಳನ್ನು ಮಾತ್ರ ತಮ್ಮ ಗಡಿಯೊಳಗೆ ಪ್ರವೇಶಿಸಲು ಅನುಮತಿ ನೀಡುತ್ತವೆ.

ಆಹಾರ ಅರಸಿ ಹಲವು ಪ್ರದೇಶಗಳಿಗೆ ಹೋಗುತ್ತವೆ. ನೀರಿಲ್ಲದೇ ಕೆಲವು ದಿನಗಳ ವರೆಗೆ ಬದುಕುವ ಸಾಮರ್ಥ್ಯ ಇದಕ್ಕಿದೆ. ಮುಂಜಾನೆ ಮತ್ತು ಸಂಜೆಯಲ್ಲಿ ಹೆಚ್ಚು ಚುರುಕಾಗಿರುವ ಈ ಪ್ರಾಣಿ ತಾಪಮಾನ ಹೆಚ್ಚಾಗಿರುವ ಸಮಯದಲ್ಲಿ ನೆರಳು ಇರುವಂತಹ ಪ್ರದೇಶಗಳಲ್ಲಿ ವಿಶ್ರಾಂತಿ ಪಡೆಯುತ್ತವೆ. ವಿವಿಧ ಶಬ್ದಗಳನ್ನು ಹೊರಡಿಸುವ ಮೂಲಕ, ದೇಹದ ಭಂಗಿಗಳು, ಬಾಲದ ಚಲನೆ, ಕಿವಿಗಳ ಚಲನೆ ಮೂಲಕ ಸಂವಹನ ನಡೆಸುತ್ತವೆ. ದೃಷ್ಟಿ ಶಕ್ತಿ ಮತ್ತು ಆಘ್ರಾಣ ಶಕ್ತಿ ಇದಕ್ಕೆ ಹೆಚ್ಚಾಗಿರುತ್ತದೆ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ವಿವಿಧ ಬಗೆಯ ಹುಲ್ಲು ಇದರ ಪ್ರಮುಖ ಆಹಾರ. ಇದಲ್ಲದೇ, ಕುರುಚಲು ಗಿಡಗಳ ಎಲೆಗಳು, ಪೊದೆ ಗಿಡಗಳ ಎಲೆಗಳನ್ನೂ ತಿನ್ನುತ್ತದೆ.

ಸಂತಾನೋತ್ಪತ್ತಿ

ಗುಂಪಿನಲ್ಲಿರುವ ಎಲ್ಲ ಹೆಣ್ಣುಕತ್ತೆಗಳ ಮೇಲೆ ಗಂಡು ಕತ್ತೆ ಪ್ರಾಬಲ್ಯ ಮೆರೆಯುತ್ತದೆ. ಮಳೆ ಬೀಳುವ ಅವಧಿಯಲ್ಲಿ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಅಕ್ಟೋಬರ್‌ನಿಂದ ಫೆಬ್ರುವರಿ ವರೆಗಿನ ಅವಧಿ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಸುಮಾರು 12 ತಿಂಗಳು ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಜನಿಸಿದ ಕೆಲವೇ ಗಂಟೆಗಳಲ್ಲಿ ಮರಿ ಎದ್ದು ಓಡಾಡಲು ಆರಂಭಿಸುತ್ತದೆ. ಕೆಲವು ತಿಂಗಳು ಕಾಲ ಮರಿಗೆ ಹಾಲುಣಿಸಿ ತಾಯಿ ಕತ್ತೆ ಆರೈಕೆ ಮಾಡುತ್ತದೆ. ಘನ ಆಹಾರ ಸೇವಿಸಲು ಆರಂಭಿಸಿದ ನಂತರ ಮರಿ 3ರಿಂದ 4 ವರ್ಷದ ನಂತರ ಮರಿ ವಯಸ್ಕ ಹಂತ ತಲುಪುತ್ತದೆ. ಇದರ ಮರಿಯನ್ನು ಫೋಲ್ಮ ಕೋಲ್ಟ್‌ ಎನ್ನುತ್ತಾರೆ.

ಸ್ವಾರಸ್ಯಕರ ಸಂಗತಿಗಳು

* ಈಕ್ವಿಡೆ ಕುಟುಂಬದಲ್ಲಿ  ಇರುವ ಇತರೆ ಪ್ರಾಣಿಗಳು ಕುದುರೆ ಮತ್ತು ಹೇಸರಗತ್ತರೆ.

* ಇದು ಸುಮಾರು 6 ಸಾವಿರ ವರ್ಷಗಳಿಂದ ಭೂಮಿಯ ಮೇಲೆ ವಾಸಿಸುತ್ತಿದೆ.

* ಕ್ರೈಸ್ತ ಧರ್ಮದ ಪವಿತ್ರಗ್ರಂಥ ಬೈಬಲ್‌ನಲ್ಲಿ ಈ ಕತ್ತೆಯ ಬಗ್ಗೆ ಹಲವು ಬಾರಿ ಉಲ್ಲೇಖಿಸಲಾಗಿದೆ.

* ಸಾಕು ಕತ್ತೆಗಳಿಗೂ ಈ ಕತ್ತೆಯೇ ಮೂಲ ಎಂಬುದು ಸಂಶೋಧಕರ ವಾದ.

* ಇದು ಕಿರುಚಿದರೆ ಸಮಾರು 3 ಕಿ.ಮೀ ವರೆಗೂ ಕೇಳಿಸುತ್ತದೆ.

* ವಿಶ್ವದ ಅತಿ ಅಪರೂಪದ ಜೀವಿಗಳಲ್ಲಿ ಇದು ಕೂಡ ಒಂದು.

* ಗಂಡು ಕತ್ತೆಯನ್ನು ಜ್ಯಾಕ್‌ ಎಂತಲೂ ಹೆಣ್ಣ ಕತ್ತೆಯನ್ನು ಜೆನ್ನೆಟ್ ಎಂತಲೂ ಕರೆಯುತ್ತಾರೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ- 230 ರಿಂದ 275 ಕೆ.ಜಿ,  ದೇಹದ ಉದ್ದ-6 ಅಡಿ, ದೇಹದ ಎತ್ತರ- 4 ರಿಂದ 5 ಅಡಿ,  ಓಡುವ ವೇಗ- 70 ಕಿ.ಮೀ/ಗಂಟೆಗೆ, ಜೀವಿತಾವಧಿ- 25 ರಿಂದ 50 ವರ್ಷ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)