ಗುರುವಾರ , ಅಕ್ಟೋಬರ್ 17, 2019
22 °C

ಒಲಿಂಪಿಕ್ಸ್‌ ಹಾದಿ ಏಕಿಷ್ಟು ಕಷ್ಟ?

Published:
Updated:
Prajavani

ಭಾರತದ ಈಜು ಲೋಕದಲ್ಲಿ ಈಗ ಹೊಸ ಅಲೆ ಎದ್ದಿದೆ. ಭಾರತವು ಈಜು ಕ್ರೀಡೆಯ ‘ಶಕ್ತಿ ಕೇಂದ್ರ’ ವಾಗುವತ್ತ ಭರವಸೆಯ ಹೆಜ್ಜೆ ಇಟ್ಟಿದೆ. ಇತ್ತೀಚೆಗೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ನಡೆದಿದ್ದ ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌ನಲ್ಲಿ ನಮ್ಮವರು 64 ಪದಕಗಳನ್ನು ಗೆದ್ದಿದ್ದು ಇದಕ್ಕೊಂದು ನಿದರ್ಶನ. ಏಷ್ಯನ್‌ ವಯೋವರ್ಗ ಚಾಂಪಿಯನ್‌ಷಿಪ್‌ ಶುರುವಾಗಿ ಹತ್ತು ಆವೃತ್ತಿಗಳು ಮುಗಿದಿವೆ. ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಇಷ್ಟೊಂದು ಪದಕಗಳನ್ನು ಗೆದ್ದಿದ್ದು ಇದೇ ಮೊದಲು. ಹಾಗಂತ ಇದು ಸಂಭ್ರಮಿಸುವ ಸಮಯವಲ್ಲ. ನಮ್ಮವರು ಸಾಗಬೇಕಾದ ಹಾದಿ ಇನ್ನೂ ದೂರವಿದೆ.

2020ರ ಟೋಕಿಯೊ ಒಲಿಂಪಿಕ್ಸ್‌ ಆರಂಭಕ್ಕೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ನಮ್ಮ ಈಜುಪಟುಗಳು ಇನ್ನೂ ಈ ಕೂಟಕ್ಕೆ ರಹದಾರಿ ಪಡೆದಿಲ್ಲ. ಅನುಭವಿಗಳಾದ ಸಾಜನ್‌ ಪ್ರಕಾಶ್‌ ಹಾಗೂ ವೀರಧವಳ್‌ ಖಾಡೆ ಅವರು ಏಷ್ಯನ್‌ ವಯೋವರ್ಗ ಚಾಂಪಿಯನ್‌ಷಿಪ್‌ನಲ್ಲಿ ಪದಕಗಳನ್ನೇನೋ ಗೆದ್ದರು. ಆದರೆ ಒಲಿಂಪಿಕ್ಸ್‌ ‘ಎ’ ಅರ್ಹತಾ ಮಟ್ಟವನ್ನು ಪೂರೈಸಲು ವಿಫಲರಾದರು. ಕರ್ನಾಟಕದ ಶ್ರೀಹರಿ ನಟರಾಜ್ ಅವರೂ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದರು. ಭಾಗವಹಿಸಿದ ನಾಲ್ಕು ಸ್ಪರ್ಧೆಗಳಲ್ಲೂ ಚಿನ್ನದ ಪದಕಗಳಿಗೆ ಕೊರಳೊಡ್ಡಿ, ಚಾಂಪಿಯನ್‌ಷಿಪ್‌ನ ಶ್ರೇಷ್ಠ ಈಜು ಪಟು ಎಂಬ ಹಿರಿಮೆಗೆ ಪಾತ್ರರಾದ ಕುಶಾಗ್ರ ರಾವತ್‌ಗೂ ಟೋಕಿಯೊ ಟಿಕೆಟ್‌ ಖಾತ್ರಿಪಡಿಸಿಕೊಳ್ಳಲು ಆಗಲಿಲ್ಲ.

ಏಕೆ ಹೀಗೆ...?

ಒಲಿಂಪಿಕ್ಸ್‌ ಕೂಟದ ವಿಜಯ ವೇದಿಕೆಯಲ್ಲಿ, ಭಾರತದ ಈಜುಪಟುಗಳು ಪದಕಗಳಿಗೆ ಕೊರಳೊಡ್ಡುವ ಕ್ಷಣವನ್ನು ಕಣ್ತುಂಬಿಕೊಳ್ಳಬೇಕೆಂಬ ಮಹಾದಾಸೆ ಹೊತ್ತವರು ಅನೇಕರಿದ್ದಾರೆ. ಅವರೆಲ್ಲರ ಹರಕೆ, ಹಾರೈಕೆಗಳು ಫಲಿಸುವ ಕಾಲ ಇನ್ನೂ ಕೂಡಿಬಂದಿಲ್ಲ. ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ನ ಸ್ಪರ್ಧಿಗಳಿಗೆ ಸಡ್ಡು ಹೊಡೆಯಬಲ್ಲ ಪ್ರತಿಭಾನ್ವಿತ ಈಜುಪಟುಗಳು ನಮ್ಮಲ್ಲಿ ಇಲ್ಲವೇ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜ. ಇದಕ್ಕೆ ಉತ್ತರ ಹುಡುಕುತ್ತಾ ಹೋದರೆ, ಸಿಗುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆ ಪೈಕಿ ಕೆಲವರು ತರಬೇತಿ ಪಡೆಯುತ್ತಿರುವುದು ವಿದೇಶಗಳಲ್ಲಿ.

ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯೇನೂ ಇಲ್ಲ. ಆ ಪ್ರತಿಭೆಗಳಿಗೆ ಸಾಣೆ ಹಿಡಿಯುವ ಕೆಲಸ ಸರಿಯಾಗಿ ಆಗುತ್ತಿಲ್ಲ. ಮೂಲ ಸೌಕರ್ಯಗಳ ವಿಚಾರದಲ್ಲೂ ನಾವು ಆಸ್ಟ್ರೇಲಿಯಾ ಮತ್ತು ಅಮೆರಿಕಗಿಂತಲೂ ಬಹಳ ಹಿಂದಿದ್ದೇವೆ. ಆ ದೇಶಗಳಲ್ಲಿ ಒಲಿಂಪಿಕ್ಸ್‌ ದರ್ಜೆಯ, ಸುಸಜ್ಜಿತ ಈಜುಕೊಳಗಳಿವೆ. ನಮ್ಮಲ್ಲಿ ಅಂತಹ ಈಜುಕೊಳಗಳನ್ನು ದುರ್ಬೀನು ಇಟ್ಟುಕೊಂಡು ಹುಡುಕಬೇಕಿದೆ! ಉತ್ಕೃಷ್ಟ ಗುಣಮಟ್ಟದ ಈಜುಕೊಳಗಳು ದೇಶದ ಎಲ್ಲಾ ಭಾಗಗಳಲ್ಲೂ ತಲೆ ಎತ್ತಬೇಕಿದೆ. ಅವುಗಳ ಗುಣಮಟ್ಟ ಹಾಳಾಗದಂತೆ ನೋಡಿಕೊಳ್ಳಲು ನುರಿತ ಮೇಲ್ವಿಚಾರಕರು ಮತ್ತು ಈಜು ತಜ್ಞರನ್ನು ನೇಮಿಸುವ ಕೆಲಸವೂ ತುರ್ತಾಗಿ ಆಗಬೇಕಿದೆ. ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಹೀಗಾಗಿಯೇ ಆ ದೇಶಗಳು ಒಲಿಂಪಿಕ್ಸ್‌ನಲ್ಲಿ ಆಧಿಪತ್ಯ ಸಾಧಿಸುತ್ತಿವೆ.

ಶಾಲಾ ಹಂತದಲ್ಲಿ ಈಜು ಕ್ರೀಡೆಯನ್ನು ಒಂದು ವಿಷಯವಾಗಿ ಭೋದಿಸಬೇಕೆಂಬ ಕೂಗು ಬಲವಾಗಿ ಕೇಳಿಬಂದಿದೆ. ಇದಕ್ಕಾಗಿ ಈಜು ಕ್ರೀಡೆಯ ಬಗ್ಗೆ ಅಪರಿಮಿತ ಜ್ಞಾನ ಹೊಂದಿರುವ ಶಿಕ್ಷಕರ ನೇಮಕವೂ ಆಗಬೇಕಿದೆ. ಎಳವೆಯಿಂದಲೇ ಮಕ್ಕಳಲ್ಲಿ ಈಜು ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಲು ಇದು ಸಹಕಾರಿ ಎಂಬುದು ಕೆಲವರ ವಾದ.

ಈ ಮಾತನ್ನು ಮೈಸೂರಿನ ಈಜು ಕೋಚ್‌ ಎಸ್‌.ಸುಂದರೇಶ್‌ ಅವರೂ ಒಪ್ಪುತ್ತಾರೆ. ‘ಕರ್ನಾಟಕ ರಾಜ್ಯ ಈಜು ಸಂಸ್ಥೆ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ‘ಸರ್ವರಿಗೂ ಈಜು’ ಯೋಜನೆಯ ಅಡಿಯಲ್ಲಿ ಹೋದ ವರ್ಷ ಬೆಂಗಳೂರಿನ ವಿದ್ಯಾನಗರದಲ್ಲಿ 400 ವಿದ್ಯಾರ್ಥಿಗಳಿಗೆ ಉಚಿತವಾಗಿ ಈಜು ತರಬೇತಿ ನೀಡಲಾಗಿತ್ತು. ರಾಜ್ಯದ ಇತರ ಭಾಗಗಳಿಗೂ ಈ ಯೋಜನೆ ವಿಸ್ತರಿಸುವ ಗುರಿ ಇದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಜೊತೆಗೂ ಚರ್ಚಿಸಲಾಗಿದೆ’ ಎಂದು ಅವರು ಹೇಳುತ್ತಾರೆ. ಇದು ಕರ್ನಾಟಕಕ್ಕೆ ಸೀಮಿತವಾದರೆ ಸಾಕೇ. ಇತರೆ ರಾಜ್ಯಗಳು ಈ ನಿಟ್ಟಿನಲ್ಲಿ ಮುಂದಡಿ ಇಡುವುದು ಬೇಡವೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

‘ಆಸ್ಟ್ರೇಲಿಯಾದಲ್ಲಿ ವರ್ಷವೊಂದರಲ್ಲಿ ಬರೋಬ್ಬರಿ 10,000 ಮಂದಿಗೆ ಈಜು ವಿಷಯದಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತುಗೊಂಡವರನ್ನು ಈಜು ಶಿಕ್ಷಕರನ್ನಾಗಿ ನೇಮಿಸಲಾಗುತ್ತದೆ. ಈ ಪದ್ಧತಿ ನಮ್ಮಲ್ಲೂ ಜಾರಿಯಾಗಬೇಕು. ಆಗ ಮಾತ್ರ ಈಜು ಕ್ರೀಡೆಯ ಅಭಿವೃದ್ಧಿಯು ವೇಗ ‍‍ಪಡೆದುಕೊಳ್ಳುತ್ತದೆ’ ಎಂದು ಒಲಿಂಪಿಯನ್‌ ಈಜುಪಟು ಹಕೀಮುದ್ದೀನ್‌ ಹಬೀಬುಲ್ಲಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಈಜುಪಟುಗಳಿಗೆ ತಮ್ಮ ಸಾಮರ್ಥ್ಯ ಒರೆಗೆ ಹಚ್ಚಲು ನೆರವಾಗುವಂತಹ ಉತ್ಕೃಷ್ಟ ಗುಣಮಟ್ಟದ ಚಾಂಪಿಯನ್‌ಷಿಪ್‌ಗಳು ನಮ್ಮಲ್ಲಿ ಆಯೋಜನೆಯಾಗುತ್ತಿಲ್ಲ. ಹೀಗಾಗಿ ಪ್ರತಿಭಾನ್ವೇಷಣೆಯೂ ಕುಂಠಿತಗೊಂಡಿದೆ’ ಎಂದೂ ಬೆಂಗಳೂರಿನ ಹಕೀಮುದ್ದೀನ್‌ ಅಭಿಪ್ರಾಯಪಟ್ಟಿದ್ದರು.

‘ಹಿಂದೆಲ್ಲಾ ನಮಗೆ ಒಲಿಂಪಿಕ್ಸ್‌ ‘ಎ’ಮತ್ತು ‘ಬಿ’ ಅರ್ಹತೆಯ ಕಲ್ಪನೆಯೇ ಇರಲಿಲ್ಲ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಹೆಚ್ಚು ಪದಕಗಳನ್ನು ಗೆದ್ದ, ಇಲ್ಲವೇ ಉತ್ತಮ ಸಾಮರ್ಥ್ಯ ತೋರಿದ ಸ್ಪರ್ಧಿಗಳನ್ನು ಗುರುತಿಸಿ ಅವರನ್ನು ಒಲಿಂಪಿಕ್ಸ್‌ ಅಥವಾ ವಿಶ್ವ ಚಾಂಪಿಯನ್‌ಷಿಪ್‌ಗೆ ಕಳುಹಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೋಚ್‌ಗಳ ಪರಿಶ್ರಮ ಮತ್ತು ಈಜುಪಟುಗಳ ಬದ್ಧತೆಯಿಂದಾಗಿ ನಮ್ಮವರು ‘ಎ’ ಮತ್ತು ‘ಬಿ’ ಅರ್ಹತೆ ಗಳಿಸುವ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ. ಮುಂದಿನ ಎಂಟು ವರ್ಷಗಳಲ್ಲಿ ನಮ್ಮ ಈಜುಪಟುಗಳೂ ಒಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸುವಂತಾಗಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ತರಬೇತಿ ನೀಡಲಾಗುತ್ತಿದೆ’ ಎಂದು ಸುಂದರೇಶ್‌ ನುಡಿಯುತ್ತಾರೆ.

ನುರಿತ ಕೋಚ್‌ಗಳ ಅಭಾವ

ಆಸ್ಟ್ರೇಲಿಯಾದ ಒಲಿಂಪಿಯನ್‌ ಈಜುಪಟು ಸ್ಟೆಫಾನಿ ರೈಸ್‌, ಹೋದ ವರ್ಷ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಆಡಿದ್ದ ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. ‘ಭಾರತದಲ್ಲಿ ವಿಶ್ವ ದರ್ಜೆಯ ಕೋಚ್‌ಗಳಿಲ್ಲ. ಹೀಗಾಗಿಯೇ ಇಲ್ಲಿನ ಈಜುಪಟುಗಳಿಗೆ ಒಲಿಂಪಿಕ್ಸ್‌ ಪದಕ ಗಗನ ಕುಸುಮವಾಗಿದೆ’ ಎಂದು ಸ್ಟೆಫಾನಿ ಅಭಿಪ್ರಾಯಪಟ್ಟಿದ್ದರು.

ಇದಕ್ಕೆ ಸುಂದರೇಶ್‌ ಅವರು ಸಹಮತ ವ್ಯಕ್ತಪಡಿಸುತ್ತಾರೆ. ‘ಸ್ಟೆಫಾನಿ ಅವರ ಸಲಹೆಯನ್ನು ನಾವು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಕೋಚ್‌ಗಳು ಈಜುಪಟುಗಳ ಜೊತೆ ಸ್ನೇಹಿತರಂತೆ ಇರಬೇಕು. ಅವರ ಸಮಸ್ಯೆಯನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರ ಸೂಚಿಸಬೇಕು. ಆ ಮೂಲಕ ಈಜುಪಟುಗಳ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು. ಇದರಿಂದ ಎಲ್ಲರಿಗೂ ಲಾಭವಾಗುತ್ತದೆ’ ಎಂದು ಅವರು ನುಡಿಯುತ್ತಾರೆ.

‘ನಮ್ಮಲ್ಲಿ ಸೆಲೆಕ್ಷನ್‌ ಗ್ರೇಡ್‌ ಕೋಚ್‌ಗಳಿದ್ದಾರೆ. ಅವರು ಪ್ರತಿಭಾನ್ವಿತರನ್ನು ಹೆಕ್ಕಿ ತೆಗೆಯುತ್ತಾರೆ. ಹಾಗೆ ಗುರುತಿಸಲ್ಪಟ್ಟವರಿಗೆ ಕೇಂದ್ರ ಕ್ರೀಡಾ ಸಚಿವಾಲಯದಿಂದ ಎಲ್ಲಾ ಬಗೆಯ ನೆರವು ನೀಡಲಾಗುತ್ತಿದೆ. ಕಾರ್ಪೊರೇಟ್‌ ಕಂಪನಿಗಳೂ ಈಜುಪಟುಗಳಿಗೆ ಪ್ರಾಯೋಜಕತ್ವ ನೀಡಲು ಮುಂದೆ ಬರುತ್ತಿವೆ. ಇದರಿಂದ ಈಜು ಸ್ಪರ್ಧಿಗಳು ಆರ್ಥಿಕವಾಗಿಯೂ ಸಶಕ್ತರಾಗುತ್ತಿದ್ದಾರೆ. ಸೌಲಭ್ಯಗಳು ಹೆಚ್ಚಾದಂತೆಲ್ಲಾ ಕೆಲವರು ವಿಲಾಸಿ ಜೀವನ ನಡೆಸಲು ಶುರುಮಾಡಿಬಿಡುತ್ತಾರೆ. ಇದರಿಂದ ಅವರ ಸಾಮರ್ಥ್ಯ ಕುಂಠಿತಗೊಳ್ಳುತ್ತಾ ಹೋಗುತ್ತದೆ. ಈಜುಪಟುಗಳು ಹೀಗೆ ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಅಭ್ಯಾಸ ನಡೆಸಿ ದೇಶಕ್ಕೆ ಪದಕ ಗೆದ್ದುಕೊಡಬೇಕೆಂಬ ಛಲ ಅವರಲ್ಲಿ ಗಟ್ಟಿಯಾಗಿ ಬೇರೂರುವಂತೆ ಮಾಡಬೇಕು. ಹೀಗೆ ಆಗಿದ್ದೇ ಆದಲ್ಲಿ 2028ರ ಒಲಿಂಪಿಕ್ಸ್‌ನಲ್ಲಿ ನಮ್ಮವರು ಪದಕ ಗೆಲ್ಲುವುದು ನಿಶ್ಚಿತ’ ಎಂದೂ ಸುಂದರೇಶ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಆ ಕ್ಷಣವನ್ನು ಈಗ ಭಾರತದ ಈಜುಪ್ರಿಯರೂ ಎದುರು ನೋಡುತ್ತಿದ್ದಾರೆ. 

ಇದನ್ನೂ ಓದಿ: ಒಲಿಂಪಿಕ್ ಚಿನ್ನ ಭಾರತಕ್ಕೆ ದುಬಾರಿ

Post Comments (+)