ಭಾನುವಾರ, ಅಕ್ಟೋಬರ್ 20, 2019
21 °C

ಗೊಂಬೆ ನೋಡಿ ಗಾದೆ ಊಹಿಸಿ

Published:
Updated:

ಹಲವು ವಾಟ್ಸ್ಯಾಪ್‌ ಗ್ರೂಪ್‌ಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ನವರಾತ್ರಿ ಆರಂಭದ ದಿನದಿಂದ ಗಾದೆಗೊಂಬೆಗಳ ಚಿತ್ರಗಳು, ಸವಾಲ್–ಜವಾಬ್ ಪ್ರಯತ್ನಗಳು ಶೇರ್ ಆಗ್ತಿವೆ. ಹೀಗೆ ಗಾದೆಗೊಂಬೆ ಶೇರ್‌ ಮಾಡುತ್ತಿರುವ ಬಹುತೇಕ ಜನರಿಗೆ ಅದರ ಮೂಲ ಎಲ್ಲಿಯದು ಎಂಬುದು ಗೊತ್ತಿಲ್ಲ.

‘ನನಗೆ ನನ್ನ ಫ್ರೆಂಡ್ ಕಳ್ಸಿದ್ದ. ಇಷ್ಟವಾಯ್ತು, ಅದ್ಕೆ ಫಾರ್ವಾರ್ಡ್‌ ಮಾಡಿದೆ. ಚಿಕ್ಕಂದಿನಲ್ಲಿ ನನ್ನ ಅಜ್ಜಿ, ಅಪ್ಪ ಹೇಳ್ತಿದ್ದ ಗಾದೆಗಳೆಲ್ಲಾ ನೆನಪಾದ್ವು. ಯಾರು ಇಂಥ ಐಡಿಯಾ ಮಾಡಿದ್ದಾರೋ ಅವರಿಗೊಂದು ಥ್ಯಾಂಕ್ಸ್‌’ ಎಂದು ಗಾದೆಗೊಂಬೆಗಳ ಚಿತ್ರ–ಒಕ್ಕಣೆಯನ್ನು ತಮ್ಮ ಫ್ಯಾಮಿಲಿ ವಾಟ್ಸ್ಯಾಪ್‌ ಗ್ರೂಪ್‌ನಲ್ಲಿ ಶೇರ್ ಮಾಡಿದ್ದ ಯಮುನಾ ಹೇಳಿಕೊಂಡಿದ್ದಾರೆ.

‘ಮೊಬೈಲ್ ಹಿಡಿದು ವಿಡಿಯೊ ಗೇಂ ಆಡುತ್ತಿದ್ದ ನನ್ನ ಮಕ್ಕಳು ಈಗ ಗಾದೆ ಕಂಡುಹಿಡಿಯಲು ಪ್ರಯತ್ನ ಮಾಡ್ತಿದ್ದಾರೆ. ಸಂಪ್ರದಾಯದ ಜೊತೆಗೆ ಸಾಮಾಜಿಕ ಮಾಧ್ಯಮ ಬೆಸೆಯಬಹುದು ಎಂದು ಖುಷಿಯಾಯಿತು’ ಎಂದು ಎರಡು ಮಕ್ಕಳ ತಾಯಿ ಪಲ್ಲವಿ ಹೇಳಿದ್ದಾರೆ.

ಎಲ್ಲಿಯ ಗೊಂಬೆಗಳಿವು?

ಬೆಂಗಳೂರಿನ ಬನ್ನೇರಘಟ್ಟ ರಸ್ತೆ ಕ್ಲಾಸಿಕ್ ಅರ್ಚರ್ಡ್ಸ್‌ ನಿವಾಸಿ ಸೀತಾಲಕ್ಷ್ಮಿ ಅವರು - ‘ಕನ್ನಡ ಗಾದೆಗಳು - ಗೊಂಬೆ ನೋಡಿ ಊಹಿಸಬಲ್ಲಿರಾ? ಎಂಬ ಥೀಮ್‌ನಲ್ಲಿ ಈ ವರ್ಷ ನವರಾತ್ರಿ ಗೊಂಬೆಗಳನ್ನು ಜೋಡಿಸಿದ್ದಾರೆ.

ಹೀಗೆ ಹೇಳ್ತಾರೆ ಸೀತಾಲಕ್ಷ್ಮಿ...

‘ನಮ್ಮ ಮನೆಯಲ್ಲಿ ತಲೆತಲಾಂತರಗಳಿಂದ ಗೊಂಬೆ ಇಡುವ ಪದ್ಧತಿ ಇದೆ. ಹೀಗಾಗಿ ನನ್ನಲ್ಲಿ ವೈವಿಧ್ಯಮಯ ಗೊಂಬೆಗಳ ಸಂಗ್ರಹವಿದೆ. ಸಣ್ಣವಳಿದ್ದಾಗಿನಿಂದಲೂ ಎಲ್ಲಾದರೂ ಹೋದಾಗ ಗೊಂಬೆಗಳನ್ನು ಖರೀದಿಸುವ ಹವ್ಯಾಸ. ಮದುವೆಯಾದ ನಂತರ ನವರಾತ್ರಿ ಹಬ್ಬಕ್ಕೆ ಗೊಂಬೆಗಳನ್ನು ಇಡುವ ಪದ್ಧತಿ ಅರಂಭಿಸಿದೆ.

ನನಗೆ ಪ್ರತಿವರ್ಷ ಏನಾದರೂ ವಿಶೇಷವಾಗಿ ಗೊಂಬೆಗಳನ್ನು ಜೋಡಿಸಬೇಕು ಎಂಬುದು ಆಸೆ. ಹೀಗಾಗಿ ಆಯಾ ವರ್ಷದ ಪ್ರಚಲಿತ ವಿಷಯಗಳ ಮೇಲೆ ಗೊಂಬೆಗಳನ್ನು ಜೋಡಿಸಿಡುತ್ತಿದ್ದೆ. ಹಿಂದೆ ನಟ ರಾಜ್‌ಕುಮಾರ್‌ ಅಪಹರಣ, ಕಾಡಿನಲ್ಲಿ ವೀರಪ್ಪನ್‌, ಒಲಿಂಪಿಕ್ಸ್‌ ಕ್ರೀಡಾಕೂಟ, ಗಣಿ ಹಗರಣ, ಸ್ವಚ್ಛ ಭಾರತ ಅಭಿಯಾನ ಹೀಗೆ ಬೇರೆ ಬೇರೆ ಪ್ರಕಾರದಲ್ಲಿ ಗೊಂಬೆ ಜೋಡಿಸಿದ್ದೆ.

ನನ್ನ ಹತ್ತಿರ ಕಿನ್ನಾಳ, ಚನ್ನಪಟ್ಟಣ, ರಾಜಸ್ಥಾನಿ, ಆಂಧ್ರದ ಕೊಂಡಪಲ್ಲಿ, ವಾರಾಣಸಿ ಮರದ ಬೊಂಬೆಗಳು ಹೀಗೆ ಬೇರೆ ಬೇರೆ ಪ್ರದೇಶದ ಗೊಂಬೆಗಳು ಇವೆ. ಒಮ್ಮೆ ಈ ಗೊಂಬೆಗಳ ವಿಶೇಷವನ್ನೇ ಪ್ರದರ್ಶನ ಮಾಡಿ, ಗೊಂಬೆ ನೋಡಲು ಬಂದವರಿಗೆ ವಿವರಿಸಿದ್ದೆ.

ಈ ವರ್ಷ ‘ಗೊಂಬೆ ನೋಡಿ ಗಾದೆ ಊಹಿಸಿ’ ಥೀಮ್‌. ನಮ್ಮ ಮನೆಯಲ್ಲಿ ಮಾತನಾಡುವಾಗ ನಾವು ಹೆಚ್ಚು ಗಾದೆ ಮಾತುಗಳನ್ನು ಬಳಸುತ್ತೇವೆ. ಮಕ್ಕಳಿಗೆ ಅದರ ಅರ್ಥವನ್ನು ಬಿಡಿಸಿ ಹೇಳಬೇಕಾಗುತ್ತದೆ. ಈಗಿನ ಮಕ್ಕಳು ಗಾದೆ ಮಾತುಗಳನ್ನು ಬಳಸಲ್ಲ, ಅವುಗಳ ಮಹತ್ವ ಅವರಿಗೆ ತಿಳಿದೂ ಇಲ್ಲ. ಹಾಗಾಗಿ ಗಾದೆ ಮಾತುಗಳನ್ನು ಗೊಂಬೆಗಳ ಮೂಲಕ ಪರಿಚಯಿಸಬಹುದು ಎಂದು ಈ ಥೀಮ್‌ ಆಯ್ಕೆ ಮಾಡಿಕೊಂಡೆ.

ನನ್ನ ಬಳಿ ಇದ್ದ ಗೊಂಬೆಗಳನ್ನೇ ಇದಕ್ಕೆ ಆಯ್ಕೆ ಮಾಡಿಕೊಂಡೆ. ಪ್ರತಿದಿನ ಆಡು ಮಾತುಗಳಲ್ಲಿ ಬಳಸುವ 35– 40 ಸರಳ ಗಾದೆಗಳನ್ನು ಪಟ್ಟಿ ಮಾಡಿಕೊಂಡು, ಅದಕ್ಕೆ ತಕ್ಕಂತೆ ಗೊಂಬೆಗಳನ್ನು ಜೋಡಿಸಿದೆ. ಈ ಕೆಲಸಕ್ಕೆ ಎರಡು ದಿನ ಹಿಡಿಯಿತು. ಗಾದೆ ಮಾತುಗಳನ್ನು ಊಹಿಸಲು ಬೇರೆ ಏನೂ ಸುಳಿವು ಕೊಟ್ಟಿಲ್ಲ. ಮನೆಗೆ ಬಂದವರಿಗೆ ‘ಗೊಂಬೆ ನೋಡಿ ಗಾದೆ ಊಹಿಸಿ’ ಎಂಬ ಸವಾಲು ನೀಡುತ್ತೇನೆ.

ನಾನು ಗೊಂಬೆಗಳನ್ನು ಜೋಡಿಸಿದ ಮೇಲೆ ನನ್ನ ಸ್ನೇಹಿತರಾದ ಅಮೆರಿಕದಲ್ಲಿರುವ ರಘು ಎಂಬವರಿಗೆ ಫೋಟೊಗಳನ್ನು ಕಳುಹಿಸಿದ್ದೆ. ಅವರು ಅದಕ್ಕೆ ಅಂಕಿಗಳನ್ನು ಹಾಕಿ, ‘ಅಮೆರಿಕ ಕನ್ನಡ ಪುಟ’ ದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿಂದ ಆ ಪೋಟೊಗಳು ಎಲ್ಲಾ
ಕಡೆ ವೈರಲ್‌ ಆಗಿವೆ’. 

Post Comments (+)