ಬುಧವಾರ, ಅಕ್ಟೋಬರ್ 16, 2019
22 °C
, ಸಂಪರ್ಕ ಕಳೆದುಕೊಂಡ ರಸ್ತೆಗಳು

ಸೋಮವಾರ ರಾತ್ರಿ ಭಾರಿ ಮಳೆ | ಕುಸಿದ ಮನೆಗಳು, ಕೋಡಿ ಬಿದ್ದ ಕೆರೆಗಳು

Published:
Updated:
Prajavani

ಮಂಡ್ಯ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಕೆರೆಗಳು ತುಂಬಿ ಕೊಡಿ ಬಿದ್ದು ಹರಿದಿವೆ. ಕೆಲವೆಡೆ ಮನೆಗಳು ಕುಸಿದು ಬಿದ್ದಿವೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ.

ಕೆಲವೆಡೆ ರಸ್ತೆ ಸಂಪರ್ಕ ಕಳೆದುಕೊಂಡು ವಾಹನ ಸವಾರರು ಪರದಾಡಿದರು. ಮಳವಳ್ಳಿಯ ಅಂಚೆ ಕಚೇರಿ ಮತ್ತು ಬಿಎಸ್‌ಎನ್‌ಎಲ್‌ ಕಚೇರಿಗಳಿಗೆ ನೀರು ನುಗ್ಗಿತ್ತು. ಮಂಗಳವಾರ ವಿಜಯದಶಮಿ ರಜೆ ಇದ್ದಿದ್ದರಿಂದ ಕಚೇರಿ ತೆರೆದಿರಲಿಲ್ಲ. ಕಚೇರಿಯ ಕಡತಗಳು, ಜನರೇಟರ್‌ ಹಾಳಾಗಿರುವ ಸಾಧ್ಯತೆ ಇದೆ. ಇದಲ್ಲದೆ ಮಳವಳ್ಳಿ ಕೆರೆ ಕೋಡಿ ಬಿದ್ದಿದ್ದು, ಯುವಕರು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು.

ಮದ್ದೂರು ತಾಲ್ಲೂಕಿನ ಕೆ.ಹೊನ್ನಲಗೆರೆ ರಸ್ತೆಯಲ್ಲಿ ತೈಲೂರು ಗ್ರಾಮದ ಬಳಿ ಭಾರಿ ಗಾತ್ರದ ಮರವೊಂದು ಧರೆಗೆ ಉರುಳಿ ಬಿದ್ದಿತ್ತು. ಇದರಿಂದ ಸಂಚಾರ ಕೆಲಕಾಲ ಅಸ್ತವ್ಯಸ್ತವಾಯಿತು. ಭಾರೀ ಮಳೆಯಿಂದಾಗಿ ತಾಲ್ಲೂಕಿನ ಕೊಮ್ಮೆರಹಳ್ಳಿ ಹಾಗೂ ಸಾತನೂರು ಬೆಟ್ಟದ ನಡುವಿನ ರಸ್ತೆ ಸಂಪರ್ಕ‌ ಕಡಿತಗೊಂಡಿದೆ. ಮಳೆಯಿಂದಾಗಿ ರಸ್ತೆ ಪಕ್ಕದ ನಾಲೆಯು ಉಕ್ಕಿ ಹರಿಯುತ್ತಿದ್ದು, ಜಮೀನುಗಳು ಜಲಾವೃತವಾಗಿವೆ.

ರಸ್ತೆ ಮೇಲೆ ಅರ್ಧ ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು, ಜಮೀನುಗಳಲ್ಲಿ ಒಂದು ಅಡಿಗಿಂತಲೂ ಹೆಚ್ಚು ಮೇಲೆ ನಿಂತಿದೆ. ಜೊತೆಗೆ ರಸ್ತೆಯ ಹಾಳಾಗಿದ್ದು, ಸಾತನೂರು ಬೆಟ್ಟ (ವಿಶ್ವಮಾನವ ಕ್ಷೇತ್ರ) ಹಾಗೂ ಕೊಮ್ಮೆರಹಳ್ಳಿ ನಡುವೆ ಸಂಪರ್ಕ ಕಡಿತಗೊಂಡಿದೆ.

ತಾಲ್ಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ಭಾರಿ ಮಳೆಗೆ 3 ಮನೆ ಗೋಡೆಗಳು ಕುಸಿದು ₹1 ಲಕ್ಷಕ್ಕೂ ಹೆಚ್ಚು ಮೌಲ್ಯದ ಗೃಹಪಯೋಗಿ ವಸ್ತುಗಳು ಹಾಳಾಗಿವೆ. ಗ್ರಾಮದ ಕೃಷ್ಣ, ಸುಲೋಚನಾ, ಗೌರಮ್ಮ ಅವರ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಇದರಿಂದ ಆಹಾರ ಪದಾರ್ಥಗಳು ಹಾಳಾಗಿವೆ.

ಮಳೆಯ ಆರ್ಭಟ ಜೋರಾಗಿದ್ದರಿಂದ ಒಂದೊಂದೇ ಹೆಂಚುಗಳು ಬೀಳತೊಡಗಿವೆ. ಇದರಿಂದ ಆತಂಕಗೊಂಡ ಮನೆಯವರು ಜೀವ ಉಳಿಸಿಕೊಳ್ಳಲು ಗಾಬರಿಯಿಂದ ಮನೆಯಿಂದ ಹೊರಬಂದಿದ್ದಾರೆ. ಆನಂತರ ಮನೆಯ ಗೋಡೆ ಕುಸಿದಿ ಬಿದ್ದಿದೆ. ಗೋಡೆ ಕುಸಿತಕ್ಕೆ, ಮನೆಯಲ್ಲಿ ಸಂಗ್ರಹಿಸಿದ್ದ ರಾಗಿ, ಭತ್ತದ ಮೂಟೆಗಳು ಮಳೆ ನೀರಿನಿಂದ ಹಾಳಾಗಿವೆ ಎಂದು ಸಂತ್ರಸ್ತೆ ಸುಲೋಚನಾ ಹೇಳಿದರು.

ಮನೆಯಲ್ಲಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಸಿಡಿಲು ಗುಡುಗು ಸಹಿತ ಮಳೆ ಆರಂಭವಾಯಿತು. ಹೋಗಿ ನೋಡುವಷ್ಟರಲ್ಲಿ ಮನೆಯ ಹೆಂಚುಗಳು ಬೀಳಲು ಆರಂಭಿಸಿದವು. ತಕ್ಷಣ ಮನೆಯಿಂದ ಹೊರ ಬಂದೆವು. ಆನಂತರ ಮನೆಯೇ ಕುಸಿದು ಬಿದ್ದಿತು. ಈಗ ನಾವು ಎಲ್ಲಿ ವಾಸಮಾಡುವುದು ಎನ್ನುವ ಚಿಂತೆ ಕಾಡುತ್ತಿದ್ದು, ಕೂಡಲೇ ನೆರವು ನೀಡಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

Post Comments (+)