ಶನಿವಾರ, ಅಕ್ಟೋಬರ್ 19, 2019
28 °C

ಪ್ರಕಟಣೆ ನಿಲ್ಲಿಸಿದ ‘ಸುಜಾತ’ ನಿಯತಕಾಲಿಕೆ

Published:
Updated:
Prajavani

ಮಂಗಳೂರು: ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಜಾಹೀರಾತು ಪ್ರಮಾಣದ ಇಳಿಕೆ, ಜಾಹೀರಾತು ಮತ್ತು ಪತ್ರಿಕೆ ಮಾರಾಟದ ಮೊತ್ತದಲ್ಲಿ ಬಾಕಿ ವಸೂಲಿ ವಿಳಂಬವಾಗಿದ್ದರಿಂದ ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ 25 ವರ್ಷಗಳಷ್ಟು ಹಳೆಯ ‘ಸುಜಾತ’ ಕೃಷಿ ಪತ್ರಿಕೆಯ ಪ್ರಕಟಣೆ ಸ್ಥಗಿತಗೊಂಡಿದೆ.

ಡಾ.ಜಿ.ಕೆ.ಹೆಬ್ಬಾರ್‌ ಸಂಪಾದಕರಾಗಿದ್ದ ಈ ಮಾಸಪತ್ರಿಕೆ 1994ರ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಿತ್ತು. ಪತ್ರಿಕೆಗೆ ಈಗ 25ರ ಹರೆಯ. ಕೃಷಿ ಪತ್ರಿಕೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ‘ಸುಜಾತ’ ಕರ್ನಾಟಕದ ರೈತರಿಗೆ ವೆನಿಲ್ಲಾ ಸೇರಿದಂತೆ ಹಲವು ಹೊಸ ಬೆಳೆಗಳನ್ನು ಬೆಳೆಯಲ್ಲು ಪ್ರಮುಖ ಮಾಹಿತಿ ಮೂಲವಾಗಿತ್ತು. 25 ವರ್ಷಗಳಲ್ಲಿ ಒಮ್ಮೆಯೂ ಮುದ್ರಣ ನಿಲ್ಲಿಸಿರಲಿಲ್ಲ

44 ಪುಟಗಳ ನಿಯತಕಾಲಿಕೆ ಇತ್ತೀಚಿನ ಕೆಲವು ವರ್ಷಗಳಿಂದ ಸಂಪೂರ್ಣವಾಗಿ ಬಣ್ಣಗಳಲ್ಲಿ ಮುದ್ರಣಗೊಳ್ಳುತ್ತಿತ್ತು. ಕೊನೆಯ ಸಂಚಿಕೆಯನ್ನು ಕಪ್ಪು– ಬಿಳುಪಿನಲ್ಲಿ ಪ್ರಕಟಿಸಿರುವ ಸಂಪಾದಕರು, ಆರ್ಥಿಕ ಮುಗ್ಗಟ್ಟಿನಿಂದಾಗಿ ಪ್ರಕಟಣೆ ನಿಲ್ಲಿಸುತ್ತಿರುವುದಾಗಿ ಸಂಪಾದಕೀಯದಲ್ಲೇ ಹೇಳಿದ್ದಾರೆ.

ಜಿಎಸ್‌ಟಿಯ ಹೊರೆ:

‘ಕೃಷಿ ಕುಟುಂಬಕ್ಕೆ ಒಂದು ಪತ್ರಿಕೆ ಇರಲಿ ಎಂಬ ಆಶಯದಿಂದ ಸುಜಾತ ಪ್ರಕಟಣೆ ಆರಂಭಿಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಉತ್ಪಾದನಾ ವೆಚ್ಚ ಹೆಚ್ಚುತ್ತಲೇ ಇದೆ. ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಬಳಿಕ ಮುದ್ರಣ ಕಾಗದದ ಮೇಲೆ ಶೇಕಡ 17ರಷ್ಟು ತೆರಿಗೆ ವಿಧಿಸಲಾಗಿದೆ. ಇದರಿಂದ ಆರ್ಥಿಕ ಹೊರೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಪತ್ರಿಕೆಯ ಮಾಲೀಕರೂ ಆಗಿರುವ ಹೆಬ್ಬಾರ್‌ ವಿದಾಯ ಬರಹದಲ್ಲಿ ತಿಳಿಸಿದ್ದಾರೆ.

ಪ್ರಕಟಣೆ ಮುಂದುವರಿಸುವಂತೆ ಓದುಗರಿಂದ ಬೇಡಿಕೆ ಇದೆ. ಆದರೆ, ದೂರದ ಊರುಗಳಿಂದ ಏಜೆಂಟರಿಂದ ಹಣ ಸಂಗ್ರಹಿಸಲೂ ಸಾಧ್ಯವಾಗುತ್ತಿಲ್ಲ. ಹಣಕಾಸು ಹೊಂದಿಸಲು ಸಾಧ್ಯವಾಗದ ಕಾರಣದಿಂದ ಪತ್ರಿಕೆಯ ಪ್ರಕಟಣೆ ನಿಲ್ಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಜಾಹೀರಾತು ಕುಸಿತ:

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಪತ್ರಿಕೆಯ ವ್ಯವಸ್ಥಾಪಕ ಅಶ್ವಿನ್‌ ರಾವ್‌, ‘ಒಂದು ಪ್ರತಿಯನ್ನು ಹೊರತರಲು ₹ 35 ವೆಚ್ಚವಾಗುತ್ತಿತ್ತು. ಒಂದು ಪ್ರತಿಯ ಬೆಲೆ ₹ 50 ನಿಗದಿ ಮಾಡಲಾಗಿತ್ತು. ಪ್ರತಿ ಸಂಚಿಕೆಯನ್ನು ಹೊರತರಲು ₹ 1 ಲಕ್ಷವಾದರೂ ಬೇಕಿತ್ತು. ಇತ್ತೀಚಿನ ದಿನಗಳಲ್ಲಿ ಜಾಹೀರಾತು ಪ್ರಮಾಣದಲ್ಲಿ ಭಾರಿ ಕುಸಿತ ಉಂಟಾಗಿದೆ. ಇದರಿಂದ ವೆಚ್ಚ ಹೊಂದಾಣಿಕೆ ಮಾಡಲೂ ಸಾಧ್ಯವಾಗಲಿಲ್ಲ’ ಎಂದರು.

ಆರ್ಥಿಕ ಮುಗ್ಗಟ್ಟಿನ ಸುಳಿವು ಸಿಕ್ಕಿದ್ದರಿಂದ ಅಕ್ಟೋಬರ್‌ ತಿಂಗಳಿನಿಂದಲೇ ಪ್ರಕಟಣೆ ನಿಲ್ಲಿಸುವ ನಿರ್ಧಾರವನ್ನು ಜನವರಿ ತಿಂಗಳಿನಲ್ಲೇ ಕೈಗೊಳ್ಳಲಾಗಿತ್ತು. ಇದಕ್ಕಾಗಿ ಮಾಲೀಕರು ಸಿದ್ಧತೆ ಮಾಡಿಕೊಂಡಿದ್ದರು. ಹೊಸದಾಗ ಚಂದಾದಾರರ ನೋಂದಣಿ ಮಾಡುತ್ತಿರಲಿಲ್ಲ. ಜಾಹೀರಾತು ಮತ್ತು ಏಜೆಂಟರಿಂದ ಬರಬೇಕಾದ ಬಾಕಿಯೂ ಹೆಚ್ಚುತ್ತಾ ಹೋಯಿತು. ಇದೆಲ್ಲದರ ಪರಿಣಾಮವಾಗಿ ಪ್ರಕಟಣೆ ನಿಲ್ಲಿಸಲಾಗಿದೆ ಎಂದರು.

Post Comments (+)