ಭಾನುವಾರ, ಅಕ್ಟೋಬರ್ 20, 2019
22 °C
30 ದಿನಗಳಲ್ಲಿ 11.93 ಲಕ್ಷ ಪ್ರಕರಣ

ಸಂಚಾರ ನಿಯಮ ಉಲ್ಲಂಘನೆ: ತಿಂಗಳಲ್ಲಿ ₹ 10.67 ಕೋಟಿ ದಂಡ ವಸೂಲಿ

Published:
Updated:

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡ ಪ್ರಮಾಣ ಹೆಚ್ಚಿಸಿದ ಒಂದು ತಿಂಗಳ ಅವಧಿಯಲ್ಲಿ ನಗರದಲ್ಲಿ ₹ 10.67 ಕೋಟಿ ದಂಡ ವಸೂಲಾಗಿದೆ.

ಕೇಂದ್ರ ಸರ್ಕಾರ ಸೆ. 1ರಿಂದ ಭಾರಿ ಪ್ರಮಾಣದಲ್ಲಿ ದಂಡ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಆ ಆದೇಶ ರಾಜ್ಯದಲ್ಲಿ ಸೆ. 3ರಿಂದ ಜಾರಿಯಾಗಿತ್ತು. ಆದರೆ, ಭಾರಿ ಪ್ರಮಾಣದ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೆಲವು ಪ್ರಕರಣಗಳಿಗೆ ರಾಜ್ಯ ಸರ್ಕಾರ ಸೆ. 21ರಿಂದ ದಂಡ ಮೊತ್ತವನ್ನು ಮತ್ತೆ ಪರಿಷ್ಕರಿಸಿತ್ತು.

‘ಸೆ.6ರಿಂದ ಅ.6ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದ ಒಟ್ಟು 11.93 ಲಕ್ಷ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ₹ 10.67 ಕೋಟಿ ದಂಡ ವಸೂಲಿ ಮಾಡಲಾಗಿದೆ. ಒಂಬತ್ತು ತಿಂಗಳ ಅವಧಿಯಲ್ಲಿ 65.46 ಲಕ್ಷ ಪ್ರಕರಣಗಳು ದಾಖಲಾಗಿದ್ದು, ₹ 53.92 ಕೋಟಿ ದಂಡ ಸಂಗ್ರಹವಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್ ಬಿ.ಆರ್‌. ರವಿಕಾಂತೇ ಗೌಡ ತಿಳಿಸಿದರು.

‘ಹೊಸ ನಿಯಮ ಬಂದ ಬಳಿಕ ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಹೀಗಾಗಿ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿವೆ. ಆಗಸ್ಟ್ ತಿಂಗಳಿಗೆ ಹೋಲಿಸಿದರೆ, ಸೆಪ್ಟೆಂಬರ್ ತಿಂಗಳಿನಲ್ಲಿ ಉಲ್ಲಂಘನೆ ಪ್ರಕರಣಗಳು 2 ಲಕ್ಷದಷ್ಟು ಕಡಿಮೆಯಾಗಿವೆ. ಆದರೆ, ದಂಡದ ವಸೂಲಿ ಮೊತ್ತ ಜಾಸ್ತಿಯಾಗಿದೆ’ ಎಂದರು.

Post Comments (+)