ಭಾನುವಾರ, ಅಕ್ಟೋಬರ್ 20, 2019
21 °C

ಅಪ್ಪಟ ಕನ್ನಡದ ಚೆಲುವೆ ಅಹಲ್ಯಾ ಅಂದಾನೋ ಅದೃಷ್ಟಾನೋ

Published:
Updated:

ರಾತ್ರಿ ಬೆಳಗಾಗುವುದರಲ್ಲಿ ತಾರೆಗಳಾಗುವುದಿಲ್ಲ. ಅದಕ್ಕಾಗಿ ಪ್ರತಿಭೆಯೂ ಬೇಕು, ಜತೆಗೆ ಸಾಕಷ್ಟು ಕಠಿಣಶ್ರಮವನ್ನೂ ಹಾಕಲೇಬೇಕು ಎನ್ನುವ ಅರಿವು ಇಟ್ಟುಕೊಂಡು ಪಾತ್ರಗಳನ್ನು ತೂಗಿ ಅಳೆದು ಆಯ್ಕೆ ಮಾಡಿಕೊಳ್ಳುತ್ತಿರುವ ಜಾಣೆಯಾಗಿ ಕಾಣಿಸುತ್ತಾರೆ ನಟಿ ಅಹಲ್ಯಾ ಸುರೇಶ್‌. ಕನ್ನಡವಷ್ಟೇ ಅಲ್ಲ, ತೆಲುಗು ಚಿತ್ರರಂಗದಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಈ ನಟಿ. 

ಬ್ಯುಸಿನೆಸ್‌ ಮ್ಯಾನೆಜ್‌ಮೆಂಟ್‌ ಕೋರ್ಸ್‌ ಓದಿ, ಎಚ್‌.ಆರ್‌ ಆಗುವ ಕನಸಿನಿಂದ ಬೆಂಗಳೂರಿಗೆ ಬಂದ ಚಿಕ್ಕಬಳ್ಳಾಪುರದ ಚೆಂದುಳ್ಳಿ ಈ ಚೆಲುವೆ ಆಕಸ್ಮಿಕವಾಗಿ ಆರಿಸಿಕೊಂಡಿದ್ದು ಸಿನಿಮಾ ಕ್ಷೇತ್ರ. ತಾಯಿಯ ಆಸೆ ಮತ್ತು ಸಲಹೆಯಂತೆ ನಟಿಯಾದ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ತಳವೂರಲು ಬೇಕಾದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಪ್ರತಿಭೆ ಜತೆಗೆ ವರದಾನದಂತೆ ಅವರಲ್ಲಿ ಇರುವ ಸಹಜ ಸೌಂದರ್ಯವೂ ಸಿನಿ ರಂಗದಲ್ಲಿ ಅವರಿಗೆ ಅವಕಾಶಗಳನ್ನು ಹೊತ್ತುತರುತ್ತಿವೆ. ಬಣ್ಣದ ಬದುಕಿನಲ್ಲಿ ಬಿಚ್ಚಿಕೊಳ್ಳುತ್ತಿರುವ ಕನಸಿನ ರೆಕ್ಕೆಗಳ ಬಗ್ಗೆ ಅವರು ತಮ್ಮ ಅನಿಸಿಕೆಗಳನ್ನು ‘ಸಿನಿಮಾ ಪುರವಣಿ’ ಜತೆಗೆ ಹಂಚಿಕೊಂಡಿದ್ದಾರೆ.

ನಾನು ಇದುವರೆಗೂ ಯಾವುದೇ ಸಿನಿಮಾಕ್ಕೂ ಆಡಿಷನ್‌ ಕೊಟ್ಟು ಆಯ್ಕೆಯಾಗಲಿಲ್ಲ. ನನ್ನ ಫೋಟೊ ನೋಡಿಯೋ ಈ ಪಾತ್ರಕ್ಕೆ ಸೂಕ್ತವಾಗಿದ್ದಾಳೆಂದುಕೊಂಡು ನಿರ್ದೇಶಕರು ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡಿದ್ದಾರೆ. ಇದು ನನ್ನ ಅದೃಷ್ಟವೋ ಏನೋ ಎನ್ನುವ ಹೆಮ್ಮೆಯಿಂದಲೇ ಮಾತಿಗೆ ಆರಂಭಿಸಿದರು ಅಹಲ್ಯಾ.

ನನ್ನ ಮೊದಲ ಸಿನಿಮಾ ‘ಆರಂಭ’ ಸೇರಿದಂತೆ ಈವರೆಗೆ ಮಾಡಿರುವ ಮೂರು ಚಿತ್ರಗಳಲ್ಲೂ ನಾನು ಆಡಿಷನ್‌ ಕೊಟ್ಟಿರಲಿಲ್ಲ. ಈಗ ಬಿಡುಗಡೆಯಾಗುತ್ತಿರುವ ‘ಲುಂಗಿ’ ಮತ್ತು ಹೊಸದಾಗಿ ಕೈಗೆತ್ತಿಕೊಂಡಿರುವ ಮೂರು ಸಿನಿಮಾಗಳಲ್ಲೂ ಆಡಿಷನ್‌ ಇಲ್ಲದೆ ಆಯ್ಕೆಯಾಗಿದ್ದೇನೆ ಎಂದು ಮಾತು ವಿಸ್ತರಿಸಿದರು ಈ ನಟಿ.

ಮಂಗಳೂರು ‌ಸೊಗಡಿನ ‘ಲುಂಗಿ’ ಸಿನಿಮಾದಲ್ಲಿ ದಕ್ಷಿಣ ಕನ್ನಡದ ಹೊರಗಿನ ಕಲಾವಿದೆ ಎಂದರೆ ಇವರೊಬ್ಬರೆ. ಉಳಿದಂತೆ ಬಹುತೇಕ ಎಲ್ಲರೂ ಆ ಭಾಗದ ಕಲಾವಿದರೇ ಈ ಸಿನಿಮಾದಲ್ಲಿ ಇದ್ದಾರಂತೆ. ಪ್ರಣವ್‌ ಹೆಗಡೆ ನಾಯಕನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿರುವ ‘ಲುಂಗಿ’ಯಲ್ಲಿ ಇರುವ ಇಬ್ಬರು ನಾಯಕಿಯರಲ್ಲಿ ಅಹಲ್ಯಾ ಅವರದ್ದೂ ಪ್ರಮುಖ ಪಾತ್ರವೇ. ಈ ಚಿತ್ರದಲ್ಲಿರುವ ಮತ್ತೊಬ್ಬ ನಾಯಕಿ ರಾಧಿಕಾ ರಾವ್‌ ಸಂಪ್ರದಾಯಸ್ಥ ಹೆಣ್ಣುಮಗಳ ಪಾತ್ರವಾದರೆ, ಅಹಲ್ಯಾ ಅವರದ್ದು ಕ್ರಿಶ್ಚಿಯನ್‌ ಹುಡುಗಿ ಲೋಲಿತಾ ಪಾತ್ರ. ನಾಯಕನ ಪಕ್ಕದ ಮನೆಯ ಸಿಂಪಲ್‌ ಹುಡುಗಿ. ಅಕ್ಷಿತ್‌ ಶೆಟ್ಟಿ ಮತ್ತು ಅರ್ಜುನ್‌ ಲೂಯಿಸ್‌ ಜಂಟಿಯಾಗಿ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.

ತಮ್ಮ ಮುಂದಿರುವ ಹೊಸ ಯೋಜನೆಗಳ ಬಗ್ಗೆಯೂ ಮಾತನಾಡಿದ ಅಹಲ್ಯಾ,‘ಫಸ್ಟ್‌ ರ‍್ಯಾಂಕ್‌ ರಾಜು’ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ತ್ರಿಲೋಕ್‌ ನಿರ್ದೇಶಿಸುತ್ತಿರುವ ‘ಯಲ್ಲೋ ಬೋರ್ಡ್‌’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಈಗಾಗಲೇ ಶೇ 80ರಷ್ಟು ಚಿತ್ರೀಕರಣ ಆಗಿದೆ. ಮದರಂಗಿ ಕೃಷ್ಣ ಜತೆಗೆ ‘ಒರ್ಜಿನ್‌’ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೇನೆ. ಅದು ಇನ್ನೂ ಚಿತ್ರೀಕರಣ ಆರಂಭವಾಗಿಲ್ಲ. ಇನ್ನಷ್ಟೇ ಚಿತ್ರೀಕರಣ ಶುರುವಾಗಬೇಕು ಎಂದರು.

ಹಾಗೆಯೇ ‘ಸ್ಟೂಡೆಂಟ್‌ ಆಫ್‌ ದಿ ಇಯರ್‌’ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು, ಚಿತ್ರದ ಟ್ರೇಲರ್‌ ಕೂಡ ಬಿಡುಗಡೆಯಾಗಿದೆ. ಕಾಲೇಜು ವಿದ್ಯಾರ್ಥಿಯ ಕಥೆ ಹೇಳುವ ಈ ಚಿತ್ರದಲ್ಲಿ ಸಂಜೀವ್‌ ವರ್ಮಾ ನಾಯಕನಾಗಿದ್ದು, ‘ದ್ರೋಣ’ ಚಿತ್ರದ ನಿರ್ದೇಶಕ ಕರ್ಣ ಕುಮಾರ್‌ ನಿರ್ದೇಶಿಸುತ್ತಿದ್ದಾರೆ ಎಂದರು.

ಪಾತ್ರದ ಆಯ್ಕೆಯ ಬಗ್ಗೆ ಚ್ಯೂಸಿಯಾಗಿರುವ ಈ ನಟಿ, ಯಾವುದೇ ಪಾತ್ರ ಒಪ್ಪಿಕೊಳ್ಳುವಾಗ ಆ ಪಾತ್ರದಲ್ಲಿ ನಾನು ನಟಿಸುವಷ್ಟು ಕಂಫರ್ಟಬಲ್‌ ಇದೆಯಾ ಎನ್ನುವುದನ್ನು ಮೊದಲು ನೋಡುತ್ತೇನೆ. ನಾಲ್ಕು ಜನರ ಮುಂದೆ ನಟಿಸಲು ಆಗದಂತಹ ಪಾತ್ರವಾಗಿದ್ದರೆ, ಮುಂದೆ ಆ ಪಾತ್ರ ತೆರೆಯ ಮೇಲೆ ಬಂದಾಗ ಲಕ್ಷಾಂತರ ಪ್ರೇಕ್ಷಕರನ್ನು ಎದುರಿಸಬೇಕಲ್ಲ ಎನ್ನುವ ಮುನ್ನೆಚ್ಚರಿಕೆ ಸದಾ ತಲೆಯಲ್ಲಿರುತ್ತದೆ ಎನ್ನುತ್ತಾರೆ.

ಈವರೆಗೆ ಬಂದಿರುವ ಪಾತ್ರಗಳೆಲ್ಲವೂ ಸಲ್ವಾರ್‌, ಕುರ್ತಾ ಇಂತಹ ಬಟ್ಟೆಗಳನ್ನೇ ಧರಿಸುವಂತಹ ಸಾಂಪ್ರದಾಯಿಕ ಹೆಣ್ಣುಮಗಳದ್ದು. ಯಾರೂ ಕೂಡ ನನಗೆ ಈವರೆಗೆ ಗ್ಲಾಮರಸ್‌ ಹಾಗೂ ಮಾಡರ್ನ್‌ ಪಾತ್ರ ಮಾಡಿ ಎನ್ನುವ ಒತ್ತಾಯ ಮಾಡಿಲ್ಲ. ಹಾಗೆಯೇ ಅಂತಹ ಅವಕಾಶವೂ ಬಂದಿಲ್ಲ. ಮುಂದೆ ಅಂತಹ ಪಾತ್ರಗಳು ಬಂದಾಗ ಆ ಪಾತ್ರದಲ್ಲಿ ಎಷ್ಟರಮಟ್ಟಿಗೆ ಗ್ಲಾಮರಸ್‌ ಇದೆ, ಅದರಲ್ಲಿ ನಟಿಸಬೇಕೆ ಬೇಡವೇ ಎನ್ನುವ ಬಗ್ಗೆ ಯೋಚಿಸುತ್ತೇನೆ ಎನ್ನಲು ಅವರು ಮರೆಯಲಿಲ್ಲ.

ಇದನ್ನೂ ಓದಿ‘ಲುಂಗಿ’ಯ ರೆಡಿಮೇಡ್‌ ಪ್ರೇಮಕಥೆ

ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೇಲೆ ಇಲ್ಲಿ ಇರಲಿಕ್ಕೂ ಆಗುತ್ತಿಲ್ಲ, ಓದಿನ ಕಡೆಗೂ ಗಮನ ಕೊಡಲು ಆಗುತ್ತಿಲ್ಲ.ಆದರೆ, ಒಂದಂತು ನಿಜ; ಚಿತ್ರರಂಗದಲ್ಲಿ ನೆಲೆ ನಿಲ್ಲಲು ಬಹಳಷ್ಟು ಶ್ರಮ ಹಾಕಲೇಬೇಕಿದೆ. ನಾನು ಈಗ ಹಾಕುತ್ತಿರುವ ಶ್ರಮ ಸಾಕಾಗುವುದಿಲ್ಲವೆನ್ನುವುದು ನನಗೂ ಅರ್ಥವಾಗಿದೆ. ಏಕೆಂದರೆ ಈಗಿನ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಸ್ಟಾರ್‌ ಆಗಬೇಕೆನ್ನುವುದು ಅಷ್ಟು ಸುಲಭವಲ್ಲ. ಇನ್ನಷ್ಟು ಕಠಿಣ ಶ್ರಮಪಡ್ತೀನಿ ಎನ್ನುತ್ತಾರೆ ಅಹಲ್ಯಾ.

Post Comments (+)