ಮಂಗಳವಾರ, ಅಕ್ಟೋಬರ್ 15, 2019
25 °C

'ಇಂತಿ ನಿಮ್ಮ ಆಶಾ' ಧಾರಾವಾಹಿಯಲ್ಲಿ ನಾಯಕಿಯಾಗಿ ಸಂಗೀತಾ

Published:
Updated:

ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಕಥೆಯಿದು. ಸದಾ ಮನೆಯವರ ಬಗ್ಗೆ ಕಾಳಜಿ, ಕುಟುಂಬದವರ ಇಷ್ಟ – ಕಷ್ಟ ಬೇಕು -ಬೇಡಗಳನ್ನು ಅರ್ಥಮಾಡಿಕೊಂಡು ಮನೆಯ ಗೃಹಲಕ್ಷ್ಮಿಯಂತಿರುವ ಆಕೆ ತಾಯಿ, ಹೆಂಡತಿ, ಮಗಳು, ಸೊಸೆ ಹೀಗೆ ಎಲ್ಲಾ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾಳೆ. ಇಂತಹ ಮಹಿಳೆ ಪ್ರತಿ ಮನೆಯಲ್ಲೂ ಇದ್ದಾಳೆ. ತನ್ನ ಮನೆ, ಸಂಸಾರವೇ ಸರ್ವಸ್ವ ಎಂದು ಬದುಕುವ ಗೃಹಣಿ, ತನ್ನ ಗಂಡ ಮತ್ತು ಮಕ್ಕಳಿಂದ ಪ್ರೀತಿ ತುಂಬಿದ ಮಾತು, ಒಂದಷ್ಟು ಪ್ರಶಂಸೆ ಬಿಟ್ಟರೆ ಹೆಚ್ಚೇನು ಬಯಸುವುದಿಲ್ಲ. ಆದರೆ ಪ್ರಶಂಸಿಸುವುದಿರಲಿ ಅವರ ಮಾತು ಕೇಳಿಸಿಕೊಳ್ಳುವ ವ್ಯವಧಾನವು ಮನೆಯವರಿಗಿರುವುದಿಲ್ಲ. ಸಾಮಾನ್ಯ ಗೃಹಿಣಿ ಎನ್ನುವ ಲೇಬಲ್‌ನೊಂದಿಗೆ ಬದುಕುತ್ತಿರುವ ಸಾವಿರಾರು ಮಹಿಳೆಯರ, ಅಸಾಮಾನ್ಯ ಕಥೆಗಳ ಪ್ರತಿನಿಧಿ ಈ ಆಶಾ.

ಧಾರಾವಾಹಿಗಳಲ್ಲೆಲ್ಲ ಚಿಕ್ಕ ವಯಸ್ಸಿನ ನಾಯಕ ನಾಯಕಿಯರಿರುವಾಗ, ಮಧ್ಯವಯಸ್ಕ ಗೃಹಣಿಯರ ಕುರಿತ ಕಥೆಯನ್ನು ಹೇಳಹೊರಟಿದೆ ಸ್ಟಾರ್ ಸುವರ್ಣ ವಾಹಿನಿ. ಇದೇ 7ರಿಂದ ಧಾರಾವಾಹಿ ಆರಂಭವಾಗಿದ್ದು, ಪ್ರತಿ ಸೋಮವಾರದಿಂದ ಶನಿವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. 

ಮದುವೆಯಾಗಿ ಎರಡು ದಶಕಗಳ ಮೇಲಾಗಿದೆ, ಮೂವರು ಮಕ್ಕಳಿದ್ದಾರೆ. ಮೊದಲನೇ ಮಗನ ವಯಸ್ಸು 24, ಎರಡನೇ ಮಗನಿಗೆ 20 ವರ್ಷ ಕೊನೆಯದಾಗಿ 14 ವರ್ಷದ ಮಗಳು. ಗಂಡನಿಗೆ ಆಶಾ ಓದಿಲ್ಲ, ಹಳೆ ಕಾಲದವಳು ಎನ್ನುವ ತಾತ್ಸಾರ. ಎಲ್ಲಾ ತಪ್ಪುಗಳಿಗೂ ನೀನೆ ಹೊಣೆ ಎನ್ನುವ ಅತ್ತೆ ಮಾವ. ಶರವೇಗದಲ್ಲಿ ಬದಲಾಗುತ್ತಿರುವ ಕಾಲ, ಆಧುನಿಕತೆಗೆ ತೆರೆದುಕೊಂಡಿರುವ ಕುಟುಂಬದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡು, ಸಂತೋಷ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾಳೆ ಆಶಾ.

ಸಂಗೀತಾ ಅನಿಲ್ ಆಶಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಧಾರಾವಾಹಿಗಾಗಿ ಬಣ್ಣ ಹಚ್ಚಿದ್ದಾರೆ ನಟ ಧರ್ಮ. ಆಶಾಳ ಪತಿ ಸಮರ್ಥ್ ಪಾತ್ರದ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಶಾಂತಲಾ ಕಾಮತ್, ಶ್ರೇಯಾ, ಪ್ರಕಾಶ್ ಶೆಟ್ಟಿ ಮತ್ತು ಕಾರ್ತಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೂರು ವರ್ಷಗಳ ಬಳಿಕ ಧಾರಾವಾಹಿಯ ನಿರ್ದೇಶನಕ್ಕೆ ಮರಳಿರುವ ರವಿಕಿರಣ್ ನಿರ್ದೇಶನದ ಜೊತೆಗೆ ಚಿತ್ರಕಥೆ ರಚಿಸಿದ್ದಾರೆ. ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಸಂತೋಷ್ ಬಾಲಾಜಿ ಈ ಧಾರಾವಾಹಿ ನಿರ್ಮಿಸಿದ್ದು, ಶುಭರಾಜ್ ಸಂಭಾಷಣೆ ಬರೆದಿದ್ದಾರೆ. ರವಿ ಆರ್. ಅವರ ಛಾಯಾಗ್ರಯಣ, ರಾಜೇಶ್ ರೈ ಅವರ ಸಂಕಲನವಿದೆ.

ಇದನ್ನೂ ಓದಿ: ಅತ್ಯಾಚಾರದ ದೃಶ್ಯವಿರುವ ಧಾರಾವಾಹಿ ಪ್ರಸಾರ ಮಾಡಿದ ಸನ್ ಟಿವಿಗೆ ₹2.5 ಲಕ್ಷ ದಂಡ

ಸಮಾಜದಲ್ಲಿ ಆಗಾಗ ದೊಡ್ಡ ದೊಡ್ಡ ಬದಲಾವಣೆಗಳಾಗುತ್ತೆ. ಬದಲಾಗುವ ತಂತ್ರಜ್ಞಾನ, ಅದರಿಂದ ತೆರೆದುಕೊಳ್ಳುವ ಅವಕಾಶಗಳಿಂದ ಹಲವರಿಗೆ ಹಲವು ರೀತಿಯಲ್ಲಿ ಅನುಕೂಲವಾಗಿದೆ. ಆದರೆ, ಗೃಹಿಣಿಯರಿಗೆ ಮಾತ್ರ ಇದರಿಂದ ಸವಾಲುಗಳು ಹೆಚ್ಚಾದಂತೆ. ಕುಟುಂಬಕ್ಕಾಗಿ ಅವರು ನೀಡುವ ಕೊಡುಗೆಗೆ ಮನೆಯವರ ಕೃತಜ್ಞತೆ ಕಡಿಮೆಯಾಗುತ್ತಿದೆ. ಕುಟುಂಬದ ಸಂತೋಷ ನೆಮ್ಮದಿಗಾಗಿ ಸದಾ ಎಲೆಮರೆ ಕಾಯಂತೆ ದುಡಿಯುವ ಗೃಹಣಿಯೊಬ್ಬರ ಕಥೆಯಿದು ಎನ್ನುತ್ತಾರೆ ಸ್ಟಾರ್ ಸುವರ್ಣ ಬ್ಯುಸಿನೆಸ್ ಹೆಡ್ ಸಾಯಿ ಪ್ರಸಾದ್. 

ಎಲ್ಲಾ ಮಕ್ಕಳು ನೋಡಲೇಬೇಕಾದ ಕಥೆಯಿದು

ಮೂರು ವರ್ಷಗಳ ಬಳಿಕ ಕಿರುತೆರೆಗೆ ವಾಪಸಾಗ್ತಿದ್ದೀನಿ. ‘ಇಂತಿ ನಿಮ್ಮ ಆಶಾ’ ರೀತಿಯ ಪ್ರಭಾವಿ ಕಥೆ ಮೂಲಕ ಧಾರಾವಾಹಿಯ ನಿರ್ದೇಶನಕ್ಕೆ ಮರಳಿರುವುದು ಖುಷಿ ಕೊಟ್ಟಿದೆ. ಬಹಳಷ್ಟು ಹೆಣ್ಣುಮಕ್ಕಳು ಆಶಾ ಪಾತ್ರದೊಂದಿಗೆ ರಿಲೇಟ್ ಮಾಡಿಕೊಳ್ತಾರೆ. ಎಲ್ಲಾ ತಾಯಂದಿರು, ಎಲ್ಲಾ ಮಕ್ಕಳು ನೋಡಲೇಬೇಕಾದ ಕಥೆಯಿದು ಎನ್ನುತ್ತಾರೆ ನಿರ್ದೇಶಕ ರವಿ ಕಿರಣ್.

Post Comments (+)