ಸೋಮವಾರ, ಅಕ್ಟೋಬರ್ 14, 2019
28 °C

ಆಭರಣಗಳ ‘ಗೌಹರ್‌’ ಸಂಗ್ರಹ ಬಿಡುಗಡೆ

Published:
Updated:

ಬಿಳಿ ಹರಳುಗಳ ನಡುವೆ ಅಲ್ಲಲ್ಲಿ ಕಡು ನೀಲಿ ಬಣ್ಣದ ದೊಡ್ಡ ಹರಳುಗಳು, ನವಿಲಿನ ವಿನ್ಯಾಸಗಳಿಂದ ಕಣ್ಸೆಳೆಯುತ್ತಿದ್ದ ‘ಮಿಸೆಸ್‌ ಇಂಡಿಯಾ’ ಕಿರೀಟವನ್ನು ತೊಟ್ಟುಕೊಂಡೇ ರೂಪದರ್ಶಿ ಪ್ರಿಯಾಂಕಾ ಅಭಿಷೇಕ್‌, ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್‌ ಜ್ಯುವೆಲ್ಲರ್ಸ್‌ನ ನೂತನ ಆಭರಣಗಳ ‘ಗೌಹರ್‌’ ಸಂಗ್ರಹವನ್ನು ಬಿಡುಗಡೆ ಮಾಡಿದರು.

ಗುಮ್ಮಟದಂತೆ ಉಬ್ಬಿದ ಪಚ್ಚೆ ಹರಳಿನ ಸುತ್ತ ಗುಲಾಬಿ ಹವಳಗಳ ಸಾಲು, ಬಿಗಿದಪ್ಪಿಕೊಂಡ ಚಿನ್ನದ ವಿನ್ಯಾಸದ ಪದಕ ಹಾಗೂ ಮುತ್ತಿನ ಸರ, ಅದೇ ವಿನ್ಯಾಸದ ಉಂಗುರ ಹಾಗೂ ಹರಳಿನ ಬಳೆಯನ್ನು ತೊಟ್ಟುಕೊಂಡು ಕ್ಯಾಮೆರಾಗಳಿಗೆ ಪೋಸು ಕೊಟ್ಟರು ಮಿಸೆಸ್‌ ಇಂಡಿಯಾ 2019 ವಿಜೇತೆ ಪ್ರಿಯಾಂಕಾ ಅಭಿಷೇಕ್‌. ಈ ಹೊಸ ಸಂಗ್ರಹದ ಆಭರಣಗಳನ್ನು ನಿಜಾಮರ, ರಾಜರ ಕಾಲದ ಆಭರಣಗಳು ಹಾಗೂ ಹೈದರಾಬಾದ್‌ನ ಫಲಕ್‌ನುಮಾ ಅರಮನೆಯ ವಿನ್ಯಾಸಗಳಿಂದ ಸ್ಫೂರ್ತಿ ಪಡೆದು ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರಿಯ 15 ಮಂದಿ ಆಭರಣ ವಿನ್ಯಾಸಕರು ವಿನ್ಯಾಸಗೊಳಿಸಿದ್ದಾರೆ.

ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮಿಸೆಸ್‌ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾದ ನಗರದ ದಂತವೈದ್ಯೆ ಪ್ರಿಯಾಂಕಾ ಅವರಿಗೆ ಮಿಸೆಸ್‌ ಕರ್ನಾಟಕ ಹಾಗೂ ಮಿಸೆಸ್ ಗ್ಲಾಮರಸ್‌ ಕಿರೀಟವೂ ಮುಡಿಗೇರಿದೆ. ಆಭರಣ ಬಿಡುಗಡೆ ಬಳಿಕ ತಾವು ಮಿಸೆಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ಬಗ್ಗೆ, ತಮ್ಮ ಆಭರಣ ಮೋಹದ ಬಗ್ಗೆ ಅವರು ಮಾತನಾಡಿದರು.

ಹಾಸನದ ಪ್ರಿಯಾಂಕಾ ನಗರದ ಎಂ.ಎಸ್‌ ರಾಮಯ್ಯ ಡೆಂಟಲ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಪರಿಸರ ಪ್ರೇಮಿ, ರಾಷ್ಟ್ರೀಯ ಮಟ್ಟದ ಹೈ ಬೋರ್ಡ್‌ ಡೈವರ್‌ ಹಾಗೂ ತ್ರಿಡಿ ಕೇಕ್‌ ಕಲಾವಿದೆ. ಎರಡು ಮಕ್ಕಳ ತಾಯಿ ಪ್ರಿಯಾಂಕಾ ವೃತ್ತಿ ಹಾಗೂ ಫ್ಯಾಷನ್ ಪ್ರವೃತ್ತಿಯನ್ನು ಒಟ್ಟೊಟ್ಟಿಗೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಫ್ಯಾಷನ್‌ ಬಗ್ಗೆ ಅವರಿಗೆ ಹುಚ್ಚಿತ್ತು. ಮಿಸೆಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂಬ ಆಸೆಯಿತ್ತು. ‘ಎರಡನೇ ಮಗಳು ಹುಟ್ಟಿದ ಬಳಿಕ ಸ್ನೇಹಿತರ ಹತ್ತಿರ ಮಾತನಾಡುತ್ತಾ ಸ್ಪ‍ರ್ಧೆ ಬಗ್ಗೆ ತಿಳಿದುಕೊಂಡೆ. ನನ್ನ ಕಿರೀಟದ ಹಿಂದೆ ಎರಡು ವರ್ಷಗಳ ಪರಿಶ್ರಮ ಇದೆ’ ಎಂದು ಪಯಣದ ಹಾದಿಯನ್ನು ನೆನಪಿಸಿಕೊಂಡರು.

‘ಮಿಸೆಸ್‌ ಇಂಡಿಯಾ ಸ್ಪರ್ಧೆಗೆ ಮಾನಸಿಕ, ದೈಹಿಕ ಸಿದ್ಧತೆ ಬೇಕು. ನಾನು ಮಕ್ಕಳು ಮಲಗಿದ ನಂತರ ಮಧ್ಯರಾತ್ರಿಯವರೆಗೂ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದೆ’ ಎಂದು ತಯಾರಿ ಬಗ್ಗೆ ಹಂಚಿಕೊಂಡರು.

ವಿಶೇಷ ಅಂದ್ರೆ ಸ್ಪರ್ಧೆಗೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಪ್ರಿಯಾಂಕಾ ಅವರೇ ಮಾಡಿಕೊಂಡಿದ್ದು. ಅಂತಿಮ ಸ್ಪರ್ಧೆಯ ಗೌನ್‌ ಹಾಗೂ ಉಡುಪುಗಳನ್ನು ಅವರೇ ವಿನ್ಯಾಸ ಮಾಡಿಕೊಂಡಿದ್ದರು. ರೆಡ್ಯೂಸ್‌ ಆ್ಯಂಡ್‌ ರೀಯೂಸ್‌ ಸುತ್ತಿನಲ್ಲಿ ನನ್ನ ವಿನ್ಯಾಸದ ಉಡುಗೆಗೆ ಪ್ರಶಂಸೆ ವ್ಯಕ್ತವಾಗಿತ್ತು. ಅಂತಿಮ ಸ್ಪರ್ಧೆಗೆ ರಾಜಾ ರವಿವರ್ಮನ ಚಿತ್ರದಿಂದ ಸ್ಫೂರ್ತಿ ಪಡೆದು ಉಡುಪು ವಿನ್ಯಾಸ ಮಾಡಿದ್ದೆ. ನನ್ನ ಅಜ್ಜಿ ಉಡುಗೊರೆ ನೀಡಿದ್ದ ಕೈಮಗ್ಗ ಸೀರೆ ಹಾಗೂ ಹಳೆಯ ಕಾಂಜೀವರಂ ರೇಷ್ಮೆ ಸೀರೆಗಳಿಂದ ಆ ಗೌನ್‌ ಅನ್ನು ನಾನೇ ರೂಪಿಸಿಕೊಂಡಿದ್ದೆ’ ಎಂದು ಅನುಭವ ಹಂಚಿಕೊಂಡರು. ಪರಿಸರ ಸಂಬಂಧಿ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅಭಿಲಾಷೆ ಅವರದು.

Post Comments (+)