ಶನಿವಾರ, ಅಕ್ಟೋಬರ್ 19, 2019
27 °C
ಕಾವೇರಿ ನೀರಾವರಿ ನಿಗಮದ ಕಾಮಗಾರಿ

ಅನುಷ್ಠಾನ ಹಂತದ ಯಾವುದೇ ಕಾಮಗಾರಿ ಸ್ಥಗಿತ ಇಲ್ಲ: ಸಿ.ಎಂ

Published:
Updated:

ಬೆಂಗಳೂರು: ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಅನುಷ್ಠಾನ ಹಂತದಲ್ಲಿರುವ ಯಾವುದೇ ಕಾಮಗಾರಿಗಳನ್ನು ನಿಲ್ಲಿಸಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

‘ಈ ಕಾಮಗಾರಿಗಳನ್ನು ಪುನರ್‌ಪರಿಶೀಲಿಸಿ, ಲೋಪಗಳಾಗಿದ್ದರೆ ಸರಿಪಡಿಸಿಕೊಡುತ್ತೇನೆ. ಹಣಕಾಸಿನ ಇತಿಮಿತಿಯನ್ನು ನೋಡಿಕೊಂಡು ಕಾಮಗಾರಿಗಳನ್ನು ಮುಂದುವರಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.

ವಿಧಾನಸಭೆಯಲ್ಲಿ ಶನಿವಾರ ಈ ವಿಚಾರ ಪ್ರಸ್ತಾಪಿಸಿದ ಜೆಡಿಎಸ್‌ನ ಎಚ್‌.ಡಿ.ರೇವಣ್ಣ, ‘ಹೇಮಾವತಿ ಯೋಜನೆಯ ಕ್ರಿಯಾಯೋಜನೆಗಳಿಗೆ ಮಂಜೂರಾತಿ ದೊರಕಿದ್ದರೂ ಅನುಷ್ಠಾನಗೊಳಿಸುತ್ತಿಲ್ಲ’ ಎಂದು ದೂರಿದರು.

ಶ್ರವಣಬೆಳಗೊಳದ ಶಾಸಕ ಸಿ.ಎನ್.ಬಾಲಕೃಷ್ಣ, ‘ನವಿಲೆ ಏತ ನೀರಾವರಿ ಯೋಜನೆಯ ನೀರನ್ನು ಸಮರ್ಪಕವಾಗಿ ಮೇಲೆತ್ತಲಾಗುತ್ತಿಲ್ಲ. ಹಿರಿಸಾವೆ ಬಳಿ ಹೇಮಾವತಿ ನಾಲೆ ಹರಿದು ಹೋದರೂ, ಸ್ಥಳೀಯರಿಗೆ ಕುಡಿಯುವ ನೀರು ಸಿಗುತ್ತಿಲ್ಲ’ ಎಂದರು.

‘ಕಬ್ಬಳ್ಳಿ ಮತ್ತು ದಿಡಗಾ ಪ್ರದೇಶಗಳಲ್ಲಿ 20 ಕೆರೆಗಳನ್ನು ತುಂಬಿಸಬೇಕು’ ಎಂದು ಒತ್ತಾಯಿಸಿದರು.

ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ, ‘ಕಾವೇರಿ ಕೊಳ್ಳದಲ್ಲಿ ಕಾಲುವೆ ಆಧುನೀಕರಣ ಹಾಗೂ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು. ಸ್ಥಗಿತಗೊಂಡಿರುವ ಟೆಂಡರ್‌ ಪ್ರಕ್ರಿಯೆ ಯನ್ನು ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

Post Comments (+)