ಶುಕ್ರವಾರ, ನವೆಂಬರ್ 15, 2019
26 °C
ಸವಾರನಿಗೆ ₹ 10 ಸಾವಿರ ದಂಡ

104 ಬಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ !

Published:
Updated:
Prajavani

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಮೊತ್ತ ಹೆಚ್ಚಳ ಮಾಡಿದ್ದ ಸರ್ಕಾರ, ಆ ದಂಡದ ಮೊತ್ತವನ್ನು ಈಗಾಗಲೇ ಇಳಿಕೆ ಮಾಡಿದೆ. ಇದರ ನಡುವೆಯೇ 104 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಮೊಹಮ್ಮದ್ ಶಬ್ಬೀರ್ ಎಂಬಾತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ಜಾಲಹಳ್ಳಿ ನಿವಾಸಿ ಶಬ್ಬೀರ್, ಹಲವು ತಿಂಗಳಿನಿಂದ ರಾಜಾರೋಷವಾಗಿ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ. ನಮಗೆ ಸಿಕ್ಕಿಬೀಳುತ್ತಿದ್ದಂತೆ ಆತನಿಗೆ ₹10 ಸಾವಿರ ದಂಡ ವಿಧಿಸಿದ್ದೇವೆ’ ಎಂದು ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಶಬ್ಬೀರ್ ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ, ಝಿಬ್ರಾ ಕ್ರಾಸಿಂಗ್ ಸೇರಿ ಹಲವು ಬಗೆಯ ನಿಯಮ ಉಲ್ಲಂಘಿಸಿದ್ದ. ಭಾನುವಾರ ಠಾಣೆ ವ್ಯಾಪ್ತಿಯಲ್ಲಿ ಹೊರಟಿದ್ದ ಆತ, ಹೆಲ್ಮೆಟ್‌ ಧರಿಸಿರಲಿಲ್ಲ. ಆತನನ್ನು ತಡೆದು ನಿಲ್ಲಿಸಿದ್ದ ಸಿಬ್ಬಂದಿ, ನಿಯಮ ಉಲ್ಲಂಘನೆ ಪ್ರಶ್ನಿಸಿದ್ದರು. ವಾಹನದ ಸಂಖ್ಯೆಯನ್ನು ತಮ್ಮ ಬಳಿಯ ಉಪಕರಣದಲ್ಲಿ ನಮೂದಿಸಿದಾಗಲೇ ಆತ 104 ಬಾರಿ ನಿಯಮ ಉಲ್ಲಂಘಿಸಿದ್ದು ಗಮನಕ್ಕೆ ಬಂತು’ ಎಂದು ವಿವರಿಸಿದರು.

‘ಶಬ್ಬೀರ್‌ನಿಗೆ ಸ್ಥಳದಲ್ಲೇ ರಶೀದಿ ನೀಡಿ ದಂಡ ವಸೂಲಿ ಮಾಡಲಾಗಿದೆ. ಆತನ ಚಾಲನಾ ಪರವಾನಗಿ ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ’ ಎಂದರು.

‘ಜಾಲಹಳ್ಳಿ ಮಾತ್ರವಲ್ಲದೇ ಹಲವು ಠಾಣೆ ವ್ಯಾಪ್ತಿಯಲ್ಲಿ ಆತ ನಿಯಮ ಉಲ್ಲಂಘಿಸಿದ್ದ. ಕೆಲ ಕಡೆ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾಗ ಅವರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ (+)