ಸೋಮವಾರ, ನವೆಂಬರ್ 18, 2019
27 °C

ಬೆಂಗಳೂರಿನಲ್ಲಿ ಸಂಸ್ಕೃತ ಆರ್ಕೆಸ್ಟ್ರಾ ತಂಡ !

Published:
Updated:

ನಮ್ಮ ಕನ್ನಡದ ಪ್ರಸಿದ್ಧ ಜಾನಪದ ಹಾಡುಗಳನ್ನು ಸಂಸ್ಕೃತದಲ್ಲಿ ಹಾಡಿದರೆ ಹೇಗಿರುತ್ತವೆ!.. ಇಂದಿಗೂ ಜನಪ್ರಿಯವಾಗಿರುವ ‘ಧರಣಿ ಮಂಡಲ ಮಧ್ಯದೊಳಗೆ..’ ಮತ್ತು ‘ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ...’ ಎನ್ನುವ ಕೆಲವು ಹಾಡುಗಳನ್ನು ಸಂಸ್ಕೃತದಲ್ಲಿ ಕೇಳಬೇಕೆನಿಸದರೆ ‘ಸಾಮರಸ್ಯಮ್‌ ಸಂಸ್ಕೃತ ಮ್ಯೂಸಿಕ್‌ ಬ್ಯಾಂಡ್‌’ ಕಾರ್ಯಕ್ರಮಕ್ಕೆ ಒಮ್ಮೆ ಹಾಜರಾಗಬೇಕು. 

ಯಾವ ಮೋಹನ ಮುರಳಿ ಕರೆಯಿತೊ ದೂರ ತೀರಕೆ ನಿನ್ನನು, ಕರುಣಾಳು ಬಾ ಬೆಳಕೆ, ನೀ ಸಿಗದೆ ಬಾಳೊಂದು ಬಾಳೇ ಕೃಷ್ಣ, ಯೇ ಮೇರೆ ವತನ್‌ ಕೆ ಲೋಗೋಂ ಸೇರಿದಂತೆ ಹತ್ತಕ್ಕೂ ಹೆಚ್ಚು ಕನ್ನಡ ಮತ್ತು ಹಿಂದಿಯ ಪ್ರಸಿದ್ಧ ಹಾಡುಗಳು ಇದೀಗ ಸಂಸ್ಕೃತದಲ್ಲಿ ಕೇಳಲು ಸಿಗುತ್ತವೆ. 

ಈ ಹಾಡುಗಳನ್ನು ಯಥಾವತ್ತಾಗಿ ಸಂಸ್ಕೃತಕ್ಕೆ ತರಲಾಗಿದೆ. ಮೂಲ ರಾಗ, ತಾಳ ಮತ್ತು ಭಾವಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದರಿಂದ ಇದು ಯಾವ ಹಾಡು ಎಂದು ಗೊತ್ತಾಗಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಮೂಲ ಸಂಸ್ಕೃತದ ಶ್ಲೋಕಗಳಲ್ಲದೆ, ಸಂಸ್ಕೃತಕ್ಕೆ ಅನುವಾದಿಸಿದ ಕನ್ನಡದ ಪ್ರಸಿದ್ಧ ಭಾವಗೀತೆ, ಜನಪದ ಗೀತೆ ಫ್ಯೂಜನ್‌ ಸ್ಪರ್ಶ ನೀಡಲಾಗಿದೆ. ಇಂಥದೊಂದು ವಿನೂತನ ಪ್ರಯತ್ನಕ್ಕೆ ಕೈಹಾಕಿರುವುದು ನಗರದ ಸಾಮರಸ್ಯಮ್ ಸಂಸ್ಕೃತ ಮ್ಯೂಸಿಕ್‌ ಬ್ಯಾಂಡ್‌.  ಮೈತ್ರಿ ಸಂಸ್ಕೃತ ಸಂಸ್ಕೃತಿ ಪ್ರತಿಷ್ಠಾನದ ಮೂಲಕ 25 ವರ್ಷಗಳಿಂದ ಸಂಸ್ಕೃತ ಪ್ರಚಾರದಲ್ಲಿ ತೊಡಗಿರುವ ಡಾ. ಗಣಪತಿ ಹೆಗಡೆ ಮತ್ತು ಭವಾನಿ ಹೆಗಡೆ ದಂಪತಿ ಸಂಸ್ಕೃತ ಬ್ಯಾಂಡ್‌ ರೂವಾರಿಗಳು.

ಇಬ್ಬರೂ ಸಂಸ್ಕೃತ ಪ್ರಾಧ್ಯಾಪಕರು. ಇವರ ಜೀವನದಲ್ಲಿ ಈ ಭಾಷೆ ಎಷ್ಟು ಹಾಸು ಹೊಕ್ಕಾಗಿದೆ ಎಂದರೆ ನಿತ್ಯ ಮನೆಯಲ್ಲಿ ಎಲ್ಲರೂ ಇದೇ ಭಾಷೆಯಲ್ಲಿ ವ್ಯವಹರಿಸುತ್ತಾರೆ. ದೂರವಾಣಿ, ಮೊಬೈಲ್‌ನಲ್ಲಿಯೂ ಸಂಸ್ಕೃತದಲ್ಲಿಯೇ ಸಂಭಾಷಿಸುತ್ತಾರೆ. ಸಂಸ್ಕೃತವನ್ನು ಜನಪ್ರಿಯಗೊಳಿಸುವ ಜತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಇಂದಿನ ಪೀಳಿಗೆಗೆ ತಲುಪಿಸಬೇಕು ಎಂಬ ಅಭಿಯಾನದ ವೇಳೆ ಹೊಳೆದದ್ದೇ ಸಾಮರಸ್ಯಮ್‌ ಆರ್ಕೆಸ್ಟ್ರಾ ಹುಟ್ಟಿಗೆ ಕಾರಣ ಎನ್ನುತ್ತಾರೆ ದಂಪತಿ. 

2014ರಲ್ಲಿ ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನ್ಮ ತಾಳಿದ ಸಂಸ್ಕೃತ ಆರ್ಕೆಸ್ಟ್ರಾಕ್ಕೆ ಈಗ ಐದರ ಹರೆಯ. ಐದು ವರ್ಷಗಳಲ್ಲಿ ವಾದ್ಯಗೋಷ್ಠಿ 30 ಕಾರ್ಯಕ್ರಮ ನೀಡಿದೆ. ಆಶ್ರಮ, ಉತ್ಸವ, ಶಾಲೆ, ಕಾಲೇಜುಗಳಲ್ಲಿ ಸಂಸ್ಕೃತ ಸಂಗೀತ ಯಾನ ಸಾಗಿದೆ. ಜನರ ಪ್ರತಿಕ್ರಿಯೆ ಕೂಡ ಅದ್ಭುತವಾಗಿರುವುದು ದಂಪತಿಯ ಉತ್ಸಾಹವನ್ನು ಹೆಚ್ಚಿಸಿದೆ. ಸುಮಾರು 90 ನಿಮಿಷ ನಡೆಯುವ ಪುಟ್ಟ ವಾದ್ಯಗೋಷ್ಠಿ ‘ಸಾಮರಸ್ಯಂ ಭಾವಯಾಮಹಃ’ ಎಂಬ ಹಾಡಿನೊಂದಿಗೆ ಆರಂಭವಾಗುತ್ತದೆ. ಪ್ರತಿ ಎರಡು ಹಾಡುಗಳ ನಡುವೆ ಐದಾರು ನಿಮಿಷ ಸಂಸ್ಕೃತ ಪರಿಚಯ ಮಾಡಿಕೊಡಲಾಗುತ್ತದೆ. 

ಸ್ವತಃ ಆಕಾಶವಾಣಿ ‘ಬಿ’ಗ್ರೇಡ್‌ ಕಲಾವಿದರಾಗಿರುವ ಭವಾನಿ ಸೇರಿದಂತೆ ಪುಟ್ಟ ವಾದ್ಯಗೋಷ್ಠಿಯಲ್ಲಿ ಇಬ್ಬರು ಗಾಯಕರಿದ್ದು, ಒಬ್ಬರು ನಿರೂಪಕರಿದ್ದಾರೆ. ಮೂರ್ನಾಲ್ಕು ಸಂಗೀತ ಪರಿಕರಗಳಿವೆ. ಸಾಹಿತ್ಯ ಒದಗಿಸುವ ಹೊಣೆ ಗಣಪತಿ ಹೆಗಡೆ ಅವರದ್ದು. ಈ ವಾದ್ಯಗೋಷ್ಠಿ ತಿಂಗಳಲ್ಲಿ 2–3 ಚಿಕ್ಕಪುಟ್ಟ ಕಾರ್ಯಕ್ರಮ ಮತ್ತು ವರ್ಷದಲ್ಲಿ 1–2 ದೊಡ್ಡ ಕಾರ್ಯಕ್ರಮ ನೀಡುತ್ತಿದೆ. 

ಭಜ ಗೋವಿಂದಂ ಸ್ತೋತ್ರ, ಎಂ.ಎಸ್. ಸುಬ್ಬಲಕ್ಷ್ಮಿ ಅವರ ಸುಪ್ರಭಾತಗಳಿಗೆ ಡ್ರಮ್‌, ಬೀಟ್‌ ಮತ್ತು ಫ್ಯೂಜನ್‌ ಸಂಗೀತ ಸ್ಪರ್ಶ ನೀಡಲಾಗಿದ್ದು ಜನರಿಗೆ ಹೆಚ್ಚು ಇಷ್ಟವಾಗುತ್ತಿವೆ. ಗಜಲ್‌ ಸೇರಿದಂತೆ ಹಲವು  ಸಾಹಿತ್ಯ ಪ್ರಕಾರಗಳನ್ನು ಸಂಸ್ಕೃತಕ್ಕೆ ತರುವ ಪ್ರಯತ್ನದಲ್ಲಿ ಹೆಗಡೆ ದಂಪತಿ ತೊಡಗಿದ್ದಾರೆ. 

ಪ್ರತಿಕ್ರಿಯಿಸಿ (+)