ಬುಧವಾರ, ನವೆಂಬರ್ 13, 2019
24 °C
ಮುಂದುವರೆದ ವರುಣನ ಆರ್ಭಟ: ಮೆಳ್ಳಿಗೇರಿ 46.5 ಮಿ.ಮೀ ಮಳೆ ದಾಖಲು

ಬಾಗಲಕೋಟೆ, ಮುಧೋಳ ಭರ್ಜರಿ ಮಳೆ

Published:
Updated:

ಬಾಗಲಕೋಟೆ: ಹಂಗಾಮಿನ ಅಂತ್ಯದಲ್ಲಿ ಜಿಲ್ಲೆಯಾದ್ಯಂತ ಮುಂಗಾರು ಬಿಟ್ಟೂಬಿಡದೆ ಆರ್ಭಟಿಸುತ್ತಿದೆ. ಜಿಲ್ಲಾ ಕೇಂದ್ರ ಬಾಗಲಕೋಟೆ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲೂ ಗುಡುಗು–ಸಿಡಿಲಿನೊಂದಿಗೆ ವರುಣನ ಆರ್ಭಟ ಮುಂದುವರೆದಿದೆ. ಬಾದಾಮಿ, ಬಾಗಲಕೋಟೆ ಹಾಗೂ ಮುಧೋಳ ತಾಲ್ಲೂಕಿನಲ್ಲಿ ತುಸು ಹೆಚ್ಚೇ ಮಳೆರಾಯನ ಆಟಾಟೋಪ ಸಾಗಿದೆ. 

ವಾಡಿಕೆಗಿಂತ ಹೆಚ್ಚು ಮಳೆ:

‘ಅಕ್ಟೋಬರ್ 1ರಿಂದ 14ರವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ 67.5 ಮಿ.ಮೀ ಮಳೆ ಆಗಬೇಕಿದೆ. ಆದರೆ 85 ಮಿ.ಮೀ ಮಳೆ ಬಿದ್ದಿದೆ. ಹಿಂಗಾರು ಹಂಗಾಮಿನ ಬಿತ್ತನೆಗೆ ಅನುಕೂಲವಾಗಲಿದೆ‘ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಹರ್ಷ ವ್ಯಕ್ತಪಡಿಸುತ್ತಾರೆ.

ಕಳೆದ 24 ಗಂಟೆಯಲ್ಲಿ ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ 21.5 ಮಿ.ಮೀ ಮಳೆಯಾಗಿದೆ. ಮುಧೋಳ ತಾಲ್ಲೂಕಿನ ಮೆಳ್ಳಿಗೇರಿಯಲ್ಲಿ ಅತಿಹೆಚ್ಚು 46.5 ಮಿ.ಮೀ, ಅಲ್ಲಿಯೇ ಪಕ್ಕದ ಸೈದಾಪುರದಲ್ಲಿ 38 ಮಿ.ಮೀ ಮಳೆ ದಾಖಲಾಗಿದೆ. 

ಹವಾಮಾನ ಇಲಾಖೆಯ ವರುಣಮಿತ್ರ ವಿಭಾಗದ ಮಾಹಿತಿಯಂತೆ ಮುಧೋಳ ನಗರದಲ್ಲಿ 15.5 ಮಿ.ಮೀ, ಅದೇ ತಾಲ್ಲೂಕಿನ ವಜ್ರಮಟ್ಟಿಯಲ್ಲಿ 23.5, ಜಂಬಗಿ 22, ಬರಗಿ 19.5, ದಾದನಟ್ಟಿ 14, ಢವಳೇಶ್ವರ 12 ಮಿ.ಮೀ ಮಳೆ ಬಿದ್ದಿದೆ. ತೇರದಾಳದಲ್ಲಿ 12,5, ಪಕ್ಕದ ಹಳಿಂಗಳಿಯಲ್ಲಿ 14, ಖಾಜಿ ಬೀಳಗಿಯಲ್ಲಿ 10.5, ಹಂಚಿನಾಳ 8.5, ಸೊನ್ನ 15.5, ತೊದಲಬಾಗಿಯಲ್ಲಿ 12 ಮಿ.ಮೀ ಮಳೆಯಾಗಿದೆ. 

ಬಾದಾಮಿ ತಾಲ್ಲೂಕಿನ ಆನವಾಲ 25.5, ನೀರಲಕೇರಿಯಲ್ಲಿ 23 ಮಿ.ಮೀ, ಹಲಗೇರಿ 22, ಇನಾಂ ಹುಲ್ಲಿಕೇರಿ 19.5, ಮುಷ್ಠಿಗೇರಿ 17.5, ಕೆರೂರು 15.5,  ಹಲಕುರ್ಕಿ 14.5, ಕಟಗೇರಿ 9, ಚಿಮ್ಮನಕಟ್ಟಿ 6.5, ಕಾಕನೂರ 8, ಹೆಬ್ಬಳ್ಳಿಯಲ್ಲಿ 11, ಹಂಗರಗಿ 12, ಸೂಳಿಕೇರಿ 4 ಮಿ.ಮೀ ಮಳೆ ಬಿದ್ದಿದೆ.

ಬಾಗಲಕೋಟೆ ತಾಲ್ಲೂಕಿನ ದೇವನಾಳದಲ್ಲಿ 18.5, ಚಿಕ್ಕಾಲಗುಂಡಿ 24, ತುಳಸಿಗೇರಿ 14, ಚಿಕ್ಕಶೆಲ್ಲಿಕೇರಿ 16.5  ಬೇವಿನಮಟ್ಟಿ 7, ಬೆನಕಟ್ಟಿಯಲ್ಲಿ 4.5 ಮಿ.ಮೀ ಮಳೆ ಬಿದ್ದರೆ, ಹುನಗುಂದ ತಾಲ್ಲೂಕಿನ ಕೆಲೂರು 6 ಮಿ.ಮೀ, ನಾಗೂರು 9.5, ಹಿರಬಾದವಾಡಗಿ 13.5, ಕೆಲೂರು 6, ಸೂಳಿಬಾವಿ 4 ಐಹೊಳೆಯಲ್ಲಿ 5 ಮಿ.ಮೀ ಮಳೆಯಾಗಿದೆ. ಜಮಖಂಡಿ ನಗರದಲ್ಲಿ 5, ಅಲ್ಲಿನ ಲಿಂಗನೂರಿನಲ್ಲಿ 8.5 ಮಿ.ಮೀ ಮಳೆ ಬಿದ್ದಿದೆ. ಬೀಳಗಿ ತಾಲ್ಲೂಕಿನ ಜಾನಮಟ್ಟಿಯಲ್ಲಿ 28.5 ಮಿ.ಮೀ ಮಳೆ ದಾಖಲಾಗಿದೆ.

ಪ್ರತಿಕ್ರಿಯಿಸಿ (+)