ಬುಧವಾರ, ನವೆಂಬರ್ 20, 2019
20 °C

ಶಿಡ್ಲಘಟ್ಟ: ನೊಳಂಬರು, ವಿಜಯನಗರದ ಕಾಲದ ಶಾಸನ ಪತ್ತೆ

Published:
Updated:
Prajavani

ಶಿಡ್ಲಘಟ್ಟ: ತಾಲ್ಲೂಕಿನ ಮಲ್ಲಿಶೆಟ್ಟಿಪುರ ಗ್ರಾಮಕ್ಕೆ ಸೋಮವಾರ ಶಾಸನ ತಜ್ಞರಾದ ಪ್ರೊ.ಕೆ.ಆರ್.ನರಸಿಂಹನ್ ಮತ್ತು ಕೆ.ಧನಪಾಲ್ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಬಂದು, ವಿಜಯನಗರದ ಕಾಲದ ಮೂರು ಶಾಸನಗಳು, ಮಾಸ್ತಿಗಲ್ಲು, ವೀರಗಲ್ಲು ಹಾಗೂ ನೊಳಂಬರ ಕಾಲದ ಎರಡು ದೊಡ್ಡಗಾತ್ರದ ಶಾಸನವಿರುವ ವೀರಗಲ್ಲುಗಳನ್ನು ಪತ್ತೆಹಚ್ಚಿ, ಅವನ್ನು ಸಂರಕ್ಷಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಮಲ್ಲಿಶೆಟ್ಟಿಪುರದ ಸರ್ಕಾರಿ ಶಾಲೆಯ ಪಕ್ಕದಲ್ಲಿ ಪುರಾತನ ಅರಳಿ ಮತ್ತು ಬೇವಿನಮರಗಳ ಚಿಕ್ಕ ತೋಪಿದೆ. ಅದರ ನೆರಳಿನಲ್ಲಿ ಎರಡು ಚಿಕ್ಕ ಗಾತ್ರದ ವೀರಗಲ್ಲುಗಳಿವೆ. ಕಲ್ಲಿನ ಮೇಲಿನ ಶಿಲ್ಪದ ಲಕ್ಷಣಗಳನ್ನು ಪರೀಕ್ಷಿಸಿದ ಶಾಸನ ತಜ್ಞರು ಒಂದು ಕಲ್ಲಿನ ಮೇಲೆ ಕುದುರೆ ಮೇಲೆ ಕುಳಿತ ವೀರನ ಚಿತ್ರವಿದ್ದು, ಮತ್ತೊಂದು ಕಲ್ಲಿನ ಮೇಲೆ ಆತನು ಮಡಿದ ಮೇಲೆ ಸಹಗಮನ ಮಾಡಿದ ಆತನ ಸತಿಯರ ಚಿತ್ರವಿದೆ. ಇದರ ಲಕ್ಷಣಗಳಿಂದ ವಿಜಯನಗರ ಕಾಲದ್ದೆಂದು ಹೇಳಬಹುದಾಗಿದೆ. ಸಹಗಮನ ಮಾಡಿರುವ ಮಹಿಳೆಯರ ಚಿತ್ರಗಳಿರುವುದರಿಂದ ಇದನ್ನು ಮಹಾಸತಿ ಕಲ್ಲು ಅಥವಾ ಮಾಸ್ತಿಗಲ್ಲು ಎನ್ನುವರು ಎಂದು ಹೇಳಿದರು.

ಅದೇ ತೋಪಿನ ಒಂದು ಮೂಲೆಯಲ್ಲಿ ಸುಮಾರು 7 ಅಡಿ ಎತ್ತರದ ಎರಡು ವೀರಗಲ್ಲುಗಳು ಇವೆ. ಅವನ್ನು ಸ್ವಚ್ಛಗೊಳಿಸಿ, ಪರೀಕ್ಷಿಸಿ ಅದರ ಮೇಲಿರುವ ಹಳೆಗನ್ನಡದ ಲಿಪಿಗಳನ್ನು ಶಾಸನ ತಜ್ಞರು ಓದಿದರು. ಒಂದು ಕಲ್ಲಿನ ಮೇಲೆ ತಲೆಯೂ ಸೇರಿದಂತೆ ಮೈಗೆಲ್ಲಾ ಬಾಣಗಳನ್ನು ಬಿದ್ದಿರುವ ವೀರನ ಚಿತ್ರವಿದೆ. ಅದರ ಮೇಲೆ, ‘ಪುಸುಗೂರೆಂಬ ನಾಡಿನಲ್ಲಿ ಹಸುಗಳನ್ನು ಶತ್ರುಗಳಿಂದ ಕಾಪಾಡಲು ವಿಯಣ್ಣ ಎಂಬ ವೀರನು ಹೋರಾಡಿ ವೀರಸ್ವರ್ಗ ಸೇರಿದನು’ ಎಂಬ ಅರ್ಥದಲ್ಲಿ ಹಳಗನ್ನಡದಲ್ಲಿ ಕೆತ್ತಲಾಗಿದೆ.

ಮತ್ತೊಂದು ಆರು ಅಡಿ ಎತ್ತರದ ಕಲ್ಲಿನ ಮೇಲೂ ವೀರನ ಚಿತ್ರ ಕೆತ್ತಿದ್ದು, ವೀರನ ಪಕ್ಕ ದೀಪಸ್ತಂಭವಿದೆ. ದೀಪಸ್ತಂಭವು ಗಂಗ ನೊಳಂಬರ ಲಕ್ಷಣ. ಈ ಕಲ್ಲಿನ ಮೇಲೆ, ‘ನೊಳಂಬರ ಆಳ್ವಿಕೆಯಲ್ಲಿ, ಪುಸುಗೂರನ್ನು ಬ್ರಹ್ಮಶಿವ ಭಟ್ಟಾರರು ಆಳುತ್ತಿದ್ದಾಗ, ಸಾಯಿಲ ಕೋಜಯ್ಯನ ಅಳಿಯ ಸಿರಿಮೇರಿ, ಹಸುಗಳನ್ನು ಶತ್ರುಗಳಿಂದ ರಕ್ಷಿಸಲು ಹೋರಾಡಿ ಸ್ವರ್ಗಸ್ಥನಾದನು’ ಎಂದು ಹಳಗನ್ನಡದಲ್ಲಿ ಕೆತ್ತಲಾಗಿದೆ.

‘ಕ್ರಿ.ಶ. 850 ರಿಂದ 900 ನಡುವಿನ ಈ ಅಪರೂಪದ ನೊಳಂಬರ ಕಾಲದ ವೀರಗಲ್ಲುಗಳು ಈ ಪ್ರಾಂತ್ಯವನ್ನು ಪುಸುಗೂರು ಎಂಬುದಾಗಿ ತಿಳಿಸುತ್ತದೆ. ಮಲ್ಲಿಶೆಟ್ಟಿಪುರಕ್ಕೆ ಹತ್ತಿರವಿರುವ ಹುಜುಗೂರು ಗ್ರಾಮವೇ ಆಕಾಲದ ಪುಸುಗೂರು ಪ್ರಾಂತ್ಯವಾಗಿತ್ತು. ಅದನ್ನು ಆಗಿನ ಬ್ರಹ್ಮಶಿವ ಭಟ್ಟಾರರು ಆಳ್ವಿಕೆ ನಡೆಸುತ್ತಿದ್ದು, ಅವರು ನೊಳಂಬರ ಕೈಕೆಳಗೆ ಇದ್ದರೆಂಬುದು ತಿಳಿದುಬರುತ್ತದೆ’ ಎಂದು ಶಾಸನ ತಜ್ಞ ಪ್ರೊ.ಕೆ.ಆರ್.ನರಸಿಂಹನ್ ವಿವರಿಸಿದರು.

ವಿಜಯನಗರ ಕಾಲದ ಶಾಸನ ಪತ್ತೆ

ಶಾಸನ ತಜ್ಞರು ನೊಳಂಬರ ಕಾಲದ ವೀರಗಲ್ಲುಗಳನ್ನು ನೋಡುವಾಗ, ಗ್ರಾಮದ ಒಂಬತ್ತನೇ ತರಗತಿಯ ವಿದ್ಯಾರ್ಥಿ ಎಂ.ಎಸ್.ಶ್ರೀನಿವಾಸ್, ‘ಊರೊಳಗೆ ಏನೇನೋ ಬರೆದಿರುವ ಕಲ್ಲಿದೆ ನೋಡಿ ಬನ್ನಿ ಸರ್’ ಎಂದು ಕರೆದುಕೊಂಡು ಹೋದನು. ಮಲ್ಲಿಶೆಟ್ಟಿಪುರದ ಗ್ರಾಮದ ನಡುವೆ ಕುಂಟೆಯ ಪಕ್ಕದಲ್ಲಿ ಬೇವಿನ ಮರದ ಕೆಳಗೆ ಈ ಕಲ್ಲನ್ನು ಮಲಗಿಸಲಾಗಿತ್ತು. ಕುಂಟೆಯಲ್ಲಿ ಸಿಕ್ಕ ಕಲ್ಲನ್ನು ಬಟ್ಟೆ ಒಗೆಯಲೆಂದು ಮರದ ಕೆಳಗೆ ಇರಿಸಿದ್ದೆವು, ಆದರೆ ಏನೋ ಬರೆದಿದೆ, ಕೆಟ್ಟದಾದರೆ ಎಂದು ಹಾಗೇ ಬಿಟ್ಟೆವು ಎಂದು ಗ್ರಾಮದವರು ತಿಳಿಸಿದರು.

ಸುಮಾರು 3 ಅಡಿ ಉದ್ದದ ಈ ಶಿಲಾ ಶಾಸನವನ್ನು ತಜ್ಞರು ಕ್ರಿ.ಶ 1584 ರದ್ದೆಂದು ಅದರ ಮೇಲಿನ ಕನ್ನಡ ಲಿಪಿಯನ್ನು ಓದಿ ತಿಳಿಸಿದರು. ವಿಶೇಷವೆಂದರೆ, ಲಿಪಿ ಕನ್ನಡದ್ದಾದರೂ ಅದರಲ್ಲಿನ ಭಾಷೆ ತೆಲುಗಾಗಿದೆ. ‘ಸ್ವಭಾನು ಸಂವತ್ಸರ ಪಾಲ್ಗುಣ ಮಾಸ, ಬಹುಳ ದ್ವಿತೀಯ 2ನೇ ದಿನ ಚಿನ್ನಪ್ಪನ ಮಗ ಕೃಷ್ಣಪ್ಪ, ತಿರುಮಲಯ್ಯ ಎಂಬುವರಿಗೆ ಆಲಂಬಗಿರಿಯ ವೆಂಕಟಾದ್ರಿ (ದೇವರು)ಗೆ ಪುಣ್ಯವಾಗಲೆಂದು ಭಾಗವತ ಮಾನ್ಯವನ್ನು ಕೊಟ್ಟಿದ್ದಾರೆ’ ಎಂಬುದಾಗಿ ಬರೆದಿದ್ದಾರೆ. ಇದು ಜಮೀನನ್ನು ದೇವರ ಸೇವೆಗೆಂದು ನೀಡಿರುವ ಬಗ್ಗೆ ಈ ಶಿಲಾಶಾಸನ ತಿಳಿಸುತ್ತದೆ. ಭಾಗವತ ಪರಂಪರೆ ಈ ಭಾಗದಲ್ಲಿದ್ದುದರ ಬಗ್ಗೆಯೂ ಇದೆ ಬೆಳಕು ಚೆಲ್ಲುವುದು ವಿಶೇಷವಾಗಿದೆ.

ಶಾಸನ ತಜ್ಞರಾದ ಪ್ರೊ.ಕೆ.ಆರ್.ನರಸಿಂಹನ್, ಕೆ.ಧನಪಾಲ್, ಸಂಶೋಧನಾ ವಿದ್ಯಾರ್ಥಿಗಳಾದ ಯುವರಾಜ್, ವಿಜಯಕುಮಾರ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)