ಬುಧವಾರ, ನವೆಂಬರ್ 13, 2019
17 °C

ತುಳು, ಕೊಡವ, ಕೊಂಕಣಿ, ಉರ್ದು ಕಡೆಗೂ ಗಮನ: ಗಿರೀಶ ಭಟ್ ಅಜಕ್ಕಳ ಪ್ರತಿಕ್ರಿಯೆ

Published:
Updated:

ಮಂಗಳೂರು: ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷರಾಗಿ ಪುತ್ತೂರು ತಾಲ್ಲೂಕಿನ ಬಲ್ನಾಡಿನ ಡಾ.ಗಿರೀಶ್ ಭಟ್‌ ಅಜಕ್ಕಳ ನೇಮಕಗೊಂಡಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಸಕಾ೯ರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಅವರು ತಮ್ಮ ಬರಹಗಳ ಮೂಲಕ ಸಾಹಿತ್ಯ ಹಾಗೂ ಶೈಕ್ಷಣಿಕ ಲೋಕದಲ್ಲಿ ಚಿರಪರಿಚಿತರು.

‘ಪ್ರಾಧಿಕಾರದಿಂದ ಹಿಂದೆ ಆದ ಒಳ್ಳೆಯ ಕೆಲಸಗಳನ್ನು ಮುಂದುವರಿಸುವುದು. ಅನುವಾದದ ಕೆಲಸಕ್ಕೆ ಆದ್ಯತೆ ನೀಡುವುದು.  ವಿವಿಧ ಭಾಷಾ ತಜ್ಞರ ಸಲಹೆ –ಸೂಚನೆಗಳನ್ನು ತೆಗೆದುಕೊಂಡು ಉತ್ತಮ ಕೃತಿಗಳನ್ನು ಕನ್ನಡ ತರುವುದು ನನ್ನ ಮುಖ್ಯ ಧ್ಯೇಯವಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹಿಂದಿನ ಕಾರ್ಯ ಹಾಗೂ ಪ್ರಾಧಿಕಾರದ ನಿಯಮಾವಳಿ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಅಧ್ಯಯನ ನಡೆಸಿದ ಬಳಿಕ ನಾವು ನಿರ್ದಿಷ್ಟ ತೀರ್ಮಾನಕ್ಕೆ ಬರಲು ಸಾಧ್ಯ. ಆ ಬಳಿಕ ಸ್ಪಷ್ಟವಾಗಿ ಯೋಜನೆಗಳನ್ನು ಮುಂದಿಡುತ್ತೇನೆ’ ಎಂದರು.

‘ಒಟ್ಟಾರೆಯಾಗಿ, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸುವುದೇ ನಮ್ಮ ಉದ್ದೇಶ. ಈ ಹುದ್ದೆಯ ನಿರೀಕ್ಷೆ ಹಾಗೂ ಪ್ರಯತ್ನ ಇರಲಿಲ್ಲ. ಆದರೆ, ಬಂದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುವ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಮ್ಮದೇ ರಾಜ್ಯದಲ್ಲಿರುವ ಒಳಭಾಷೆಗಳಾದ ತುಳು, ಕೊಡವ, ಕೊಂಕಣಿ, ಉರ್ದು ಇತ್ಯಾದಿಗಳಲ್ಲಿನ ಉತ್ತಮ ಸಾಹಿತ್ಯವನ್ನೂ ಕನ್ನಡಕ್ಕೆ ತರಬೇಕಾಗಿದೆ. ಈ ಎಲ್ಲ ಕೆಲಸಗಳಿಗೆ ಪ್ರಾಧಿಕಾರದ ವ್ಯಾಪ್ತಿಯನ್ನೂ ನಾನು ಪರಿಶೀಲಿಸಬೇಕಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)