ಮಂಗಳವಾರ, ನವೆಂಬರ್ 19, 2019
22 °C

ಸ್ವಚ್ಛತೆಯ ಅರಿವು ಮೂಡಿಸಲು ಅಖ್ತರ್‌ ಸಲಹೆ

Published:
Updated:

ಮಂಡ್ಯ: ‘ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಡೆಂಗಿ, ಮಲೇರಿಯಾದಂತಹ ರೋಗ ಹರಡುವ ಸಾಧ್ಯತೆ ಇದೆ. ರೋಗಗಳ ನಿಯಂತ್ರಣದ ಬಗ್ಗೆ ಗ್ರಾಮೀಣ ಭಾಗದ ಜನರ ಮನೆ ಮನೆಗೆ ಭೇಟಿ ನೀಡಿ ಸ್ವಚ್ಛತೆಯ ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಹಳ್ಳಿಗಳಲ್ಲಿ ಡೆಂಗಿ ಮುನ್ನೆಚ್ಚರಿಕಾ ಕ್ರಮ ಪ್ರಕಟಿಸಬೇಕು. ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಸ್ವಚ್ಛತೆಯ ಅರಿವು ಮೂಡಿಸಬೇಕು. ಶಾಲಾ ಮಕ್ಕಳಿಗೆ ವರ್ಷದ ಒಂದು ದಿನ ಆರೋಗ್ಯ ತಪಾಸಣೆ ಮಾಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು. ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಏಪ್ರಿಲ್ ತಿಂಗಳಿಂದ ಈವರೆಗೆ ಹೆಚ್ಚು ಮಳೆಯಾಗಿದ್ದು ಕೆರೆ ಕಟ್ಟೆಗಳು ತುಂಬಿವೆ. ಬೆಳೆ ಬೆಳೆಯಲು ಅನುಕೂಲವಾದ ವಾತಾವರಣವಿರುತ್ತದೆ. ಬಿತ್ತನೆ ಬೀಜ ಹಾಗೂ ಗೊಬ್ಬರ ಕೊರತೆಯಾಗದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಮೇವಿನ ಸಮಸ್ಯೆ ಇರುವುದಿಲ್ಲ. ಜಿಲ್ಲೆಯಲ್ಲಿ ಮಳೆ ಚೆನ್ನಾಗಿರುವುದರಿಂದ ಮೀನುಗಾರಿಕೆ ಇಲಾಖೆಯಿಂದ ಕೆರೆಗಳಿಗೆ ಮೀನು ಮರಿ ಬಿಡಲು ಅಗತ್ಯ ಕ್ರಮವಹಿಸಬೇಕು. ವಿವಿಧ ಇಲಾಖೆಗಳಲ್ಲಿನ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಸಾಧನೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು.

ಸಾರ್ವಜನಿಕರಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಖುದ್ದಾಗಿ ಸ್ಥಳಕ್ಕೆ ಭೇಟಿ ಸಮಸ್ಯೆಯನ್ನು ಆಲಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತರ ತಿಂಗಳ ವೇತನವನ್ನು ವಿಳಂಬ ಮಾಡದೇ ಪಾವತಿಮಾಡಬೇಕು’ ಎಂದರು.

ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೊಗೇಶ್, ಮಂಡ್ಯ ಉಪವಿಭಾಗಧಿಕಾರಿ ಶಿವರಾಜು ಇದ್ದರು.

ಪ್ರತಿಕ್ರಿಯಿಸಿ (+)