ಗುರುವಾರ , ನವೆಂಬರ್ 21, 2019
27 °C
ಡಿಕೆಶಿ ತಾಯಿ, ಪತ್ನಿ ವಿಚಾರಣೆ;

ಡಿಕೆಶಿ ತಾಯಿ, ಪತ್ನಿಗೆ ವಾರದ ನಂತರ ಮತ್ತೆ ಸಮನ್ಸ್‌: ಇ.ಡಿ

Published:
Updated:

ನವದೆಹಲಿ: ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರ ವಿಚಾರಣೆಗಾಗಿ ಹೊಸದಾಗಿ ಸಮನ್ಸ್‌ ಜಾರಿ ಮಾಡುವುದಾಗಿ ಇ.ಡಿ. ತಿಳಿಸಿದೆ.

ಇದೇ 17ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೀಡಲಾಗಿದ್ದ ಸಮನ್ಸ್ ರದ್ದತಿ ಕೋರಿ ಗೌರಮ್ಮ ಹಾಗೂ ಉಷಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ಗೆ ಬುಧವಾರ ಇ.ಡಿ. ಪರ ವಕೀಲರು ಈ ವಿಷಯ ತಿಳಿಸಿದರು.

ಅಪರಾಧ ದಂಡ ಸಂಹಿತೆಯ ಪ್ರಕಾರ 15 ವರ್ಷಕ್ಕಿಂತ ಕಿರಿಯರು ಹಾಗೂ 85 ವರ್ಷಕ್ಕಿಂತ ಹಿರಿಯರನ್ನು ವಿಚಾರಣೆಗಾಗಿ ಪೊಲೀಸ್‌ ಠಾಣೆಗೆ ಕರೆಯುವಂತಿಲ್ಲ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ವಿಚಾರಣೆ ನಡೆಸುತ್ತಿರುವ ಇ.ಡಿ. 85 ವರ್ಷದ ಗೌರಮ್ಮ ಅವರಿಗೆ ಸಮನ್ಸ್‌ ನೀಡಿರು ವುದು ಸರಿಯಲ್ಲ ಎಂದು ವಕೀಲ ದಯಾ ಕೃಷ್ಣನ್‌ ನ್ಯಾಯಪೀಠಕ್ಕೆ ತಿಳಿಸಿದರು.

ಅರ್ಜಿದಾರರು ಸದ್ಯ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ. ಒಂದು ವಾರದ ನಂತರ ಹೊಸದಾಗಿ ಸಮನ್ಸ್ ಜಾರಿ ಮಾಡಲಾಗುವುದು ಎಂದು ಇ.ಡಿ. ಪರ ವಕೀಲರು ತಿಳಿಸಿದ್ದರಿಂದ ನ್ಯಾಯಾಧೀಶ ಬೃಜೇಶ್‌ ಸೇಠಿ ಅವರು ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದರು.

ಪ್ರತಿಕ್ರಿಯಿಸಿ (+)