ಶನಿವಾರ, ನವೆಂಬರ್ 16, 2019
21 °C

ಅಪಘಾತ: ₹ 1.47 ಕೋಟಿ ಪರಿಹಾರಕ್ಕೆ ಆದೇಶ

Published:
Updated:

ಬೆಂಗಳೂರು: ರಸ್ತೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಕ್ಕೆ ₹1.47 ಕೋಟಿ ಪರಿಹಾರ ನೀಡಲು ವಿಮಾ ಕಂಪನಿಗೆ ಆದೇಶಿಸಿರುವ ಹೈಕೋರ್ಟ್‌, ಈ ಕುರಿತಂತೆ ಮೃತ ವ್ಯಕ್ತಿಯ ಪತ್ನಿ ಮತ್ತು ಪೋಷಕರ ವಾದವನ್ನು ಪುರಸ್ಕರಿಸಿದೆ.

ಬೆಂಗಳೂರಿನ ಎಂಫಸಿಸ್ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್. ಬ್ರಹ್ಮಂ 2016ರ ಜ.5ರಂದು ಜೆ.ಪಿ ನಗರದ ಬಳಿ ರಿಂಗ್ ರೋಡ್ ಅಂಡರ್‌ಪಾಸ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ವಾಹನ ಅಪಘಾತ ಕ್ಲೇಮುಗಳ ನ್ಯಾಯಮಂಡಳಿ, ಮೃತ ವ್ಯಕ್ತಿಯ ಕುಟುಂಬಕ್ಕೆ ವಿಮಾ ಕಂಪನಿ ₹1,39,83,595 ಪರಿಹಾರ ನೀಡಬೇಕು ಎಂದು 2017ರ ಜೂನ್‌ 17ರಂದು ಆದೇಶಿಸಿತ್ತು. ವಿಮಾ ಕಂಪನಿ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ನಡೆಸಿದ ಹೈಕೋರ್ಟ್, ‘ಬ್ರಹ್ಮಂ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಸಾವಿಗೀಡಾದ ವೇಳೆ ಅವರಿಗೆ 40 ವರ್ಷವಾಗಿತ್ತು. ಬದುಕಿದ್ದರೆ 60 ವರ್ಷದವರೆಗೆ ದುಡಿಯಬಹುದಾಗಿತ್ತು. ಆದ್ದರಿಂದ ಅವಲಂಬಿತರ ಭವಿಷ್ಯಕ್ಕಾಗಿ ₹1.47 ಕೋಟಿ ಪರಿಹಾರ ನೀಡಬೇಕು’ ಎಂದು ಆದೇಶಿಸಿದೆ.

ಪ್ರತಿಕ್ರಿಯಿಸಿ (+)