ಬುಧವಾರ, ನವೆಂಬರ್ 20, 2019
20 °C

ಪ್ರಯೋಗಾತ್ಮಕ ಪಾತ್ರಗಳಿಗೆ ಒಡ್ಡಿಕೊಳ್ಳುವೆ: ತಮನ್ನಾ

Published:
Updated:
Prajavani

‘ತಮನ್ನಾ...’ ಒಂದು ಕಾಲದಲ್ಲಿ ಈ ಹೆಸರು ಕೇಳಿದರೆ ಸಾಕಿತ್ತು, ಹುಡುಗರ ಎದೆಯಲ್ಲಿ ಏನೋ ರೋಮಾಂಚನ. ಹಾಲಿನ ಮೈ ಬಣ್ಣದ ಈ ಸುಂದರಿಯ ನೋಟಕ್ಕೆ ಸೋಲದವರಿಲ್ಲ. ಮಾಡೆಲ್‌ ಆಗಿದ್ದ ಮುಂಬೈನ ಈ ಬೆಡಗಿ ನೃತ್ಯಕ್ಕೂ ಸೈ ಅಂದವರು. 15ನೇ ವಯಸ್ಸಿನಲ್ಲೇ ಬಾಲಿವುಡ್‌ನ ‘ಚಾಂದ್ ಸಾ ರೋಶನ್ ಚೆಹರಾ’ ಅಲ್ಬಂ ಸಾಂಗ್‌ ಮೂಲಕ ನಟನೆಯ ಅದೃಷ್ಟ ಪರೀಕ್ಷೆ ಎದುರಿಸಿದರು.

ತೆಲುಗಿನ ‘ಶ್ರೀ’ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದರು. ನಂತರ ತಮಿಳಿನ ಕೇಡಿ ಸಿನಿಮಾದಲ್ಲೂ ನಟಿಸಿದರು. ಕಾಲೇಜು ಜೀವನ ಆಧಾರಿತ ತೆಲುಗಿನ ಹಿಟ್ ಚಿತ್ರ ‘ಹ್ಯಾಪಿ ಡೇಸ್‌’ನಲ್ಲೂ ಮಿಂಚಿದರು ಈ ಮಿಲ್ಕಿ ಬ್ಯೂಟಿ. ಆಯನ್, ಪೈಯಾ, ಸಿರುಥಾಯ್, ವೀರಂ, ದೇವಿ, ಸ್ಕೆಚ್‌, 100% ಲವ್‌, ರಚ್ಚಾ, ಬಾಹುಬಲಿ, ಬೆಂಗಾಲ್‌ ಟೈಗರ್, ಊಪಿರಿ, ಎಫ್2, ಆ್ಯಕ್ಷನ್, ಸೈರಾ ನರಸಿಂಹ ರೆಡ್ಡಿ... ಈ ಎಲ್ಲಾ ಚಿತ್ರಗಳು ತಮನ್ನಾಗೆ ಹೆಸರಿನೊಂದಿಗೆ ಗಳಿಕೆ ತಂದುಕೊಟ್ಟ ಸಿನಿಮಾಗಳು. ಬಾಲಿವುಡ್‌ ಸಿನಿಮಾಗಳಲ್ಲೂ ನಟಿಸುವ ಮೂಲಕ ಬಿ–ಟೌನ್‌ನಲ್ಲೂ ಹೆಸರು ಮಾಡಿದ್ದಳು ಈ ಸುಂದರಿ.

ಇತ್ತೀಚೆಗೆ ಬಿಡುಗಡೆಯಾದ ಸೈರಾ ಸಿನಿಮಾದ ಲಕ್ಷ್ಮೀ ಪಾತ್ರ ತಮನ್ನಾಗೆ ಇನ್ನಷ್ಟು ಹೆಸರು ತಂದುಕೊಟ್ಟಿದೆ. ತೆಲುಗಿನಲ್ಲಿ ಕೆಲ ಕಾಲ ಹಿಂದೆ ಸರಿದಿದ್ದ ತಮನ್ನಾಗೆ ಇದು ದೊಡ್ಡ ಬ್ರೇಕ್ ಕೊಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಲಕ್ಷ್ಮೀ ಪಾತ್ರವೂ ನಾಯಕಿ ನಯನಾತಾರ ಅವರ ನಟನೆಯನ್ನು ಹಿಂದಿಕ್ಕಿದೆ ಎಂಬುದು ವಿಮರ್ಶಕರ ಅಭಿಪ್ರಾಯ. ಈ ಉತ್ಸಾಹದಿಂದಲೇ ಈ ಚೆಲುವೆ ಈಗ ತಮ್ಮನ್ನು ಪ್ರಯೋಗಾತ್ಮಕ ಪಾತ್ರಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ತಮನ್ನಾ ಇತ್ತೀಚೆಗೆ ನಟ ಗೋಪಿಚಂದ್ ಅಭಿನಯದ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಸಹಿ ಹಾಕಿದ್ದಾರೆ. ಈ ಸಿನಿಮಾವನ್ನು ಸಂಪತ್ ನಂದಿ ನಿರ್ದೇಶಿಸುತ್ತಿದ್ದಾರೆ.

ಸಂಪತ್ ನಂದಿ ಈ ಹಿಂದೆ ನಿರ್ದೇಶಿಸಿದ್ದ ರಚ್ಚಾ ಹಾಗೂ ಬೆಂಗಾಲ್ ಟೈಗರ್ ಸಿನಿಮಾದಲ್ಲಿ ತಮನ್ನಾ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಎಲ್ಲಾ ಸಿನಿಮಾಗಳಂತೆ ಸಿನಿಮಾದಲ್ಲೂ ತಮ್ಮ ಹಾಲು ಬಿಳುಪಿನ ಚರ್ಮದ ಸೌಂದರ್ಯದಿಂದಲೇ ನೋಡುಗರ ಎದೆ ಬಡಿತ ಹೆಚ್ಚಿಸಿದ್ದರು. 

ಆದರೆ ತಮ್ಮ ಮುಂದಿನ ಸಿನಿಮಾದಲ್ಲಿ ಚರ್ಮದ ಸೌಂದರ್ಯದ ಬಗ್ಗೆ ತಾನು ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿರುವ ತಮನ್ನಾ ಪ್ರಯೋಗಾತ್ಮಕ ಹಾಗೂ ಮಹಿಳಾ ಪ್ರಧಾನ ಪಾತ್ರಗಳಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದಿದ್ದಾರೆ. ಇದಕ್ಕೆ ಅವರ ಮುಂದಿನ ಚಿತ್ರವೇ ಸಾಕ್ಷಿ. ಅದರಲ್ಲಿ ತಮನ್ನಾ ಕಬ್ಬಡಿ ಕೋಚ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಇದನ್ನೂ ಓದಿ: ನೋ ಲಿಪ್‌ ಲಾಕ್‌: ತಮನ್ನಾ

ಪ್ರತಿಕ್ರಿಯಿಸಿ (+)