ಗುರುವಾರ , ನವೆಂಬರ್ 21, 2019
26 °C
ರಾಜ್ಯ ಸರ್ಕಾರದ ಕ್ರಮದ ವಿರುದ್ಧ ನಗರದಲ್ಲಿ ‘ಯೂತ್ ಯೂನಿಯನ್ ಟ್ರಸ್ಟ್’ ನೇತೃತ್ವದಲ್ಲಿ ಮುಸ್ಲಿಮರು ಪ್ರತಿಭಟನೆ, ಮೆರವಣಿಗೆ ತಡೆದ ಪೊಲೀಸರು

ಟಿಪ್ಪು ಜಯಂತಿ ಆಚರಣೆಗೆ ಆಗ್ರಹ

Published:
Updated:
Prajavani

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದುಗೊಳಿಸಿದ್ದನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ‘ಯೂತ್ ಯೂನಿಯನ್ ಟ್ರಸ್ಟ್’ ನೇತೃತ್ವದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದರು.

ನಗರದ ಭುವನೇಶ್ವರಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ವೃತ್ತದಲ್ಲೇ ತಡೆದರು. ಇದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ನರಸಿಂಹಮೂರ್ತಿ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಆರ್.ನಾರಾಯಣಸ್ವಾಮಿ, ‘ಟಿಪ್ಪು ಸುಲ್ತಾನ್ ಅವರು ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ನಾಡಿಗಾಗಿ ಮಕ್ಕಳನ್ನೇ ಒತ್ತೆ ಇಟ್ಟ ಅಪ್ರತಿಮ ದೇಶಭಕ್ತ. ಟಿಪ್ಪು ಒಂದು ಧರ್ಮಕ್ಕೆ ಸೇರಿದವರಲ್ಲ. ದೇಶದ ಆಸ್ತಿ’ ಎಂದು ತಿಳಿಸಿದರು.

‘ಟಿಪ್ಪು ಅವರು ಚಿಕ್ಕ ವಯಸ್ಸಿನಲ್ಲಿಯೇ ಶಿಕ್ಷಣ, ಸಂಗೀತ, ಸಾಹಿತ್ಯದ ಜತೆಗೆ ಯುದ್ಧದ ತರಬೇತಿ ಪಡೆದಿದ್ದರು. ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿ, ತಮ್ಮ ಸ್ವಾಭಿಮಾನ ಬಿಟ್ಟುಕೊಡದೆ ಮಕ್ಕಳನ್ನು ಅಡವಿಟ್ಟು ಹೋರಾಡಿದ್ದು ಅವರ ಉತ್ಕಟ ದೇಶಪ್ರೇಮವನ್ನು ಬಿಂಬಿಸುತ್ತದೆ. ಇಂತಹ ದೇಶಪ್ರೇಮಿಯ ಜಯಂತಿ ಆಚರಣೆಗೆ ವಿರೋಧಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಮುಖಂಡ ಎಂ.ಎಂ.ಭಾಷಾ ಮಾತನಾಡಿ, ‘ಬಿಜೆಪಿ ಸರ್ಕಾರ ಜಾತಿ-ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯುತ್ತಿದೆ. ಈ ಹಿಂದೆ ಯಡಿಯೂರಪ್ಪನವರು ಕೈಯಲ್ಲಿ ಕತ್ತಿ ಹಿಡಿದು ಟಿಪ್ಪು ವೇಷ ಹಾಕಿ ಕುಣಿದಾಡುತ್ತಾ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದರು. ಈಗ ಕೆಲವರನ್ನು ಖುಷಿಪಡಿಸಲು ಟಿಪ್ಪು ಜಯಂತಿ ರದ್ದು ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಭಾರತ ವಿವಿಧತೆಯಲ್ಲಿ ಏಕತೆಯಿಂದ ಕೂಡಿದೆ. ಇಲ್ಲಿ ಎಲ್ಲಾ ಧರ್ಮ, ಜನಾಂಗಗಳನ್ನು ಗೌರವಿಸಬೇಕು. ಆದರೆ ಬಿಜೆಪಿ ಸರ್ಕಾರ ಅಲ್ಪ ಸಂಖ್ಯಾರತನ್ನು ಕಡೆಗಣಿಸಿ, ಅವರಿಗೆ ಇದ್ದ ಒಂದೇ ಒಂದು ಜಯಂತಿಯನ್ನು ರದ್ದು ಮಾಡಿರುವುದು ಸರಿಯಲ್ಲ. ಆದ್ದರಿಂದ ನ.10 ರಂದು ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಮಾಡುವ ಮೂಲಕ ಅಲ್ಪ ಸಂಖ್ಯಾತರ ಹಿತವನ್ನು ಕಾಪಾಡಬೇಕು’ ಎಂದು ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಚಾಲಕ ಬಿ.ಎನ್.ಗಂಗಾಧರಪ್ಪ, ಮುಖಂಡರಾದ ಎಂ.ಮೌಲಾ, ಜಾವಿದ್ ಪಾಷಾ, ಮಹಮ್ಮದ್ ತಬ್ರೇಜ್, ಅಪ್ರೋಜ್, ಖಲೀದುಲ್ಲಾ, ರಹಮತುಲ್ಲಾ, ಆಸೀಫ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)