ಮಂಗಳವಾರ, ನವೆಂಬರ್ 12, 2019
20 °C
ಭಾರತ ತಂಡದ ಹಾಕಿಪಟು ಎಸ್‌.ವಿ. ಸುನಿಲ್ ಅಂತರಂಗದ ಮಾತು

ಹಾಕಿಯೇ ನನ್ನ ಉಸಿರು...

Published:
Updated:

ದಶಕದ ಕಾಲ ದೇಶವನ್ನು ಪ್ರತಿನಿಧಿಸಿದ್ದ ಅನುಭವಿ ಆಟಗಾರನಿಗೆ ಆ ಒಂದು ಗಾಯ ಪರಿ ಪರಿಯಾಗಿ ಕಾಡಿತ್ತು. ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಬರೋಬ್ಬರಿ ಹನ್ನೊಂದು ತಿಂಗಳು ಅಂಗಳದಿಂದ ದೂರ ಉಳಿದಾಗ, ಆತನ ಕ್ರೀಡಾ ಬದುಕು ಮುಗಿದೇ ಹೋಯಿತು ಎಂದು ಹಲವರು ಷರಾ ಬರೆದೇಬಿಟ್ಟಿದ್ದರು.

ಹಾಕಿಯನ್ನೇ ಉಸಿರಾಗಿಸಿಕೊಂಡಿದ್ದ ಆ ಚತುರ, ಕೈಕಟ್ಟಿ ಕೂರಲಿಲ್ಲ. ಫಿನಿಕ್ಸ್‌ನಂತೆ ಎದ್ದುಬಂದು ಮತ್ತೆ ಮೈದಾನದಲ್ಲಿ ಮೋಡಿ ಮಾಡುತ್ತಿರುವ ಆ ‘ಛಲದಂಕ ಮಲ್ಲ’ ಕರ್ನಾಟಕದ ಎಸ್‌.ವಿ.ಸುನಿಲ್‌. ಕೊಡಗಿನ ಸುನಿಲ್‌ ಅವರು ಒಲಿಂಪಿಕ್ಸ್‌, ಏಷ್ಯನ್‌ ಕ್ರೀಡಾಕೂಟ, ಏಷ್ಯಾಕಪ್‌, ಚಾಂಪಿಯನ್ಸ್‌ ಟ್ರೋಫಿ, ಕಾಮನ್‌ವೆಲ್ತ್‌ ಕ್ರೀಡಾಕೂಟ ಹಾಗೂ ಇನ್ನಿತರ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತದ ಪರ ಆಡಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ.

ಮುಂದಿನ ತಿಂಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುವ ರಷ್ಯಾ ಎದುರಿನ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯ ಪಂದ್ಯಗಳಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿರುವ ಸುನಿಲ್‌, ಉಪನಾಯಕನ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ಶಸ್ತ್ರ ಚಿಕಿತ್ಸೆಯ ನಂತರ 11 ತಿಂಗಳು ಅಂಗಳದಿಂದ ದೂರ ಉಳಿಯಬೇಕಾಗಿತ್ತು. ಒಂದರ್ಥದಲ್ಲಿ ಅವು ನಿಮ್ಮ ನೋವಿನ ದಿನಗಳು. ಈ ಬಗ್ಗೆ ಏನು ಹೇಳುತ್ತೀರಿ?

ಹೋದ ವರ್ಷದ ಅಕ್ಟೋಬರ್‌ನಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ರಾಷ್ಟ್ರೀಯ ಶಿಬಿರದ ವೇಳೆ ಎಡ ಮೊಣಕಾಲಿಗೆ ಗಾಯವಾಗಿತ್ತು. ಹೀಗಾಗಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಬಹುಕಾಲದ ಕನಸು ಭಗ್ನಗೊಂಡಿತ್ತು. 2010ರಲ್ಲೂ ಇದೇ ರೀತಿ ಗಾಯವಾಗಿದ್ದರಿಂದ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಹೀಗಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. 11 ತಿಂಗಳ ಕಾಲ ಅಕ್ಷರಶಃ ನರಕ ಯಾತನೆ ಅನುಭವಿಸಿದ್ದೆ. ಒಮ್ಮೊಮ್ಮೆ ಪ್ರಾಣ ಹೋದ ಅನುಭವವಾಗುತ್ತಿತ್ತು. ಆ ಪರಿಯ ನೋವು ಭಾದಿಸುತ್ತಿತ್ತು.

ಮತ್ತೆ ತಂಡಕ್ಕೆ ಮರಳುವ ವಿಶ್ವಾಸ ಇತ್ತೇ?

ಖಂಡಿತವಾಗಿಯೂ ಇರಲಿಲ್ಲ. ಒಮ್ಮೆ ಗಾಯಗೊಂಡರೆ ಸಹಜವಾಗಿಯೇ ಹಾಸಿಗೆ ಹಿಡಿದುಬಿಡುತ್ತೇವೆ. ಆಗ ದೇಹ ತೂಕವೂ ಹೆಚ್ಚಿಬಿಡುತ್ತದೆ. ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕೆಂದರೆ ಅದಕ್ಕೆ ದೇಹ ಮೊದಲಿನ ಹಾಗೆ ಸ್ಪಂದಿಸುವುದಿಲ್ಲ. ಅದನ್ನು ಹುರಿಗೊಳಿಸುವುದು ನಿಜಕ್ಕೂ ಸವಾಲಿನ ಕೆಲಸ. ಹೀಗಿದ್ದರೂ ಛಲ ಬಿಡಲಿಲ್ಲ. ಟ್ರೇನರ್‌ನ  ಸಹಕಾರ, ಕುಟುಂಬದವರ ಬೆಂಬಲ, ಸ್ನೇಹಿತರ ಪ್ರೋತ್ಸಾಹ ಮತ್ತು ಅಭಿಮಾನಿಗಳ ಹಾರೈಕೆಯಿಂದ ಬೇಗ ಗುಣಮುಖನಾದೆ. ಹಾಕಿ ನನಗೆ ಎಲ್ಲವನ್ನೂ ಕೊಟ್ಟಿದೆ. ಈ ಆಟ ನನ್ನ ಉಸಿರಿನಲ್ಲಿ ಬೆರೆತು ಹೋಗಿದೆ. ಹಾಕಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಹೀಗಾಗಿ ಎಲ್ಲವನ್ನೂ ಸಹಿಸಿಕೊಂಡು ಮತ್ತೆ ಪುಟಿದೆದ್ದಿದ್ದೇನೆ.

ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ನಡೆದ ಪುನಶ್ಚೇತನಾ ಶಿಬಿರದಲ್ಲಿ ಪಾಲ್ಗೊಂಡಿದ್ದಿರಿ. ಅಲ್ಲಿ ಕಳೆದ ದಿನಗಳ ಬಗ್ಗೆ ಹೇಳಿ

ಅಭ್ಯಾಸ ನಡೆಸುವಾಗಲೆಲ್ಲಾ ಜೀವ ಹಿಂಡಿದ ಅನುಭವವಾಗುತ್ತಿತ್ತು. ಆ ನೋವನ್ನು ಯಾರ ಬಳಿಯೂ ಹೇಳಿಕೊಳ್ಳುವಂತಿರಲಿಲ್ಲ. ಮನೆಯಿಂದ ಪತ್ನಿ ಕರೆ ಮಾಡಿದಾಗ ದುಃಖ ತಡೆದುಕೊಂಡೇ ಮಾತನಾಡುತ್ತಿದ್ದೆ. ಕರೆ ಸ್ಥಗಿತಗೊಳಿಸಿದ ಬಳಿಕ ನಿಂತಲ್ಲೇ ಕುಸಿದು, ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಹಾಕಿ ಇಂಡಿಯಾ (ಎಚ್‌ಐ) ನನಗೆ ಎಲ್ಲಾ ರೀತಿಯ ಸಹಕಾರ ನೀಡಿತು. ಆ ಸಂಸ್ಥೆಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ಈಗ ತಂಡದಲ್ಲಿ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಅವರೊಂದಿಗೆ ಪೈಪೋಟಿ ನಡೆಸುವುದು ಕಷ್ಟವಲ್ಲವೇ?

ಖಂಡಿತ. ಈಗ ಒಂದು ಸ್ಥಾನಕ್ಕಾಗಿ ಐದು ಮಂದಿಯ ನಡುವೆ ಸ್ಪರ್ಧೆ ಇದೆ. ತಂಡದಲ್ಲಿ ಅವಕಾಶ ಪಡೆಯಬೇಕಾದರೆ ಉಳಿದ ನಾಲ್ಕು ಮಂದಿಗಿಂತಲೂ ಶ್ರೇಷ್ಠ ಸಾಮರ್ಥ್ಯ ನಮ್ಮಿಂದ ಮೂಡಿಬರಬೇಕು. ತಂಡದ ಯೋಜನೆಗಳು ಆಗಾಗ ಬದಲಾಗುತ್ತಿರುತ್ತವೆ. ಅವುಗಳಿಗೂ ಒಗ್ಗಿಕೊಳ್ಳಬೇಕು. ಹೀಗೆ ಹತ್ತು ಹಲವು ಸವಾಲುಗಳನ್ನು ಮೀರಿ ನಿಲ್ಲುತ್ತಾ ಮುನ್ನಡೆದಾಗ ಮಾತ್ರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯ.

ಮುಂದಿನ ತಿಂಗಳು ಭುವನೇಶ್ವರದಲ್ಲಿ ನಡೆಯುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯ ಪಂದ್ಯಗಳಲ್ಲಿ ರಷ್ಯಾ ಎದುರು ಸೆಣಸಬೇಕು. ಈ ಹೋರಾಟಕ್ಕೆ ತಂಡ ಹೇಗೆ ಸಜ್ಜಾಗಿದೆ?

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಈಗಾಗಲೇ ತರಬೇತಿ ಶಿಬಿರ ಆರಂಭವಾಗಿದೆ. ರಷ್ಯಾ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಮಗಿಂತಲೂ 17 ಸ್ಥಾನ (22ನೇ ಸ್ಥಾನ) ಕೆಳಗಿದೆ. ಹಾಗಂತ ಆ ತಂಡವನ್ನು ಹಗುರವಾಗಿ ಪರಿಗಣಿಸಿಲ್ಲ. ಆಟದಲ್ಲಿ ರ‍್ಯಾಂಕಿಂಗ್‌ ಮುಖ್ಯವಾಗುವುದಿಲ್ಲ. ಪಂದ್ಯದ ದಿನ ಯಾರು ಪರಿಣಾಮಕಾರಿ ಸಾಮರ್ಥ್ಯ ತೋರುತ್ತಾರೊ ಅವರಿಗೆ ಖಂಡಿತವಾಗಿಯೂ ಗೆಲುವು ಒಲಿಯುತ್ತದೆ.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವುದು ನಮ್ಮ ಏಕೈಕ ಗುರಿ. ಇದಕ್ಕಾಗಿ ರಷ್ಯಾ ಎದುರಿನ ಎರಡು ಪಂದ್ಯಗಳಲ್ಲೂ ಗೆಲ್ಲಲೇಬೇಕು. ಹೀಗಾಗಿ ಎದುರಾಳಿ ತಂಡ ಹಿಂದೆ ಆಡಿರುವ ಪಂದ್ಯಗಳ ವಿಡಿಯೊ ತುಣುಕುಗಳನ್ನು ವೀಕ್ಷಿಸಿ ಅದಕ್ಕನುಗುಣವಾಗಿ ಯೋಜನೆ ರೂಪಿಸುತ್ತಿದ್ದೇವೆ. ಹಿಂದಿನ ಪಂದ್ಯಗಳಲ್ಲಿ ನಮ್ಮಿಂದ ಆಗಿರುವ ತಪ್ಪುಗಳನ್ನು ಗುರುತಿಸಿ  ತಿದ್ದಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವತ್ತ ಎಲ್ಲರೂ ಚಿತ್ತ ಹರಿಸಿದ್ದೇವೆ. ಫಿಟ್‌ನೆಸ್‌ ಕಾಪಾಡಿಕೊಳ್ಳುವುದಕ್ಕೂ ಒತ್ತು ನೀಡಿದ್ದೇವೆ.

ಈ ತಿಂಗಳ ಆರಂಭದಲ್ಲಿ ಆಯೋಜನೆಯಾಗಿದ್ದ ಬೆಲ್ಜಿಯಂ ಪ್ರವಾಸದಲ್ಲಿ ತಂಡವು ‘ಕ್ಲೀನ್‌ ಸ್ವೀಪ್‌’ (5 ಪಂದ್ಯಗಳಲ್ಲೂ ಜಯ) ಮಾಡಿತ್ತು. ಈ ಯಶಸ್ಸಿನ ಹಿಂದಿನ ಗುಟ್ಟೇನು?

ಪಂದ್ಯವೊಂದರಲ್ಲಿ ಕನಿಷ್ಠ ಮೂರು ಗೋಲು ಗಳಿಸಿ ಆ ಮೂಲಕ ರಕ್ಷಣಾ ವಿಭಾಗದ ಆಟಗಾರರ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಅದಕ್ಕೆ ಅನುಗುಣವಾಗಿ ಆಡಿದ್ದರಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಮಗಿಂತಲೂ ಮೂರು ಸ್ಥಾನ (2ನೇ) ಮೇಲಿರುವ ಬೆಲ್ಜಿಯಂ ತಂಡವನ್ನು ಮಣಿಸಲು ಸಾಧ್ಯವಾಯಿತು. ಜೊತೆಗೆ ಸ್ಪೇನ್‌ ಎದುರು ನಿರಾಯಾಸವಾಗಿ ಗೆಲ್ಲಲು ಅನುವಾಯಿತು.

ಭಾರತ ತಂಡವು ಲೀಗ್‌ ಹಂತಗಳಲ್ಲಿ ತುಂಬಾ ಚೆನ್ನಾಗಿ ಆಡುತ್ತದೆ. ಆದರೆ ನಾಕೌಟ್‌ ಹಂತಕ್ಕೆ ಕಾಲಿಟ್ಟ ಕೂಡಲೇ ಮಂಕಾಗಿ ಬಿಡುತ್ತದೆ. ಕೊನೆಯ ನಿಮಿಷಗಳಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟು ಕೈಸುಟ್ಟುಕೊಳ್ಳುತ್ತದೆ. ಇದಕ್ಕೆ ಕಾರಣವೇನು?

ನೀವು ಹೇಳಿದ್ದು ಸರಿಯಾಗಿಯೇ ಇದೆ. ಹಿಂದಿನ ಹಲವು ಪಂದ್ಯಗಳಲ್ಲಿ ನಾವು ಕೊನೆಯ ಕ್ಷಣಗಳಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟು ಪಂದ್ಯ ಕೈಚೆಲ್ಲಿದ್ದೇವೆ. ಪಂದ್ಯದ ಆರಂಭದಲ್ಲಿ ತುಂಬಾ ಹುಮ್ಮಸ್ಸಿನಿಂದ ಆಡುತ್ತೇವೆ. ಆ ಉತ್ಸಾಹವನ್ನು ಕೊನೆಯವರೆಗೂ ಉಳಿಸಿಕೊಳ್ಳಲು ಆಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

ವಿಶ್ವಕ್ಕೆ ಹಾಕಿ ಪಾಠ ಹೇಳಿಕೊಟ್ಟ ಭಾರತ, ಈಗ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಪರದಾಡುತ್ತಿದೆಯಲ್ಲ.

ಏಷ್ಯನ್‌ ಕ್ರೀಡಾಕೂಟದ ಸೆಮಿಫೈನಲ್‌ನಲ್ಲಿ ಸೋತಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆಯಷ್ಟೇ. ನಮ್ಮ ಸಾಮರ್ಥ್ಯ ಎಳ್ಳಷ್ಟೂ ಕುಗ್ಗಿಲ್ಲ. ಎಲ್ಲಾ ಟೂರ್ನಿಗಳಲ್ಲೂ ಚೆನ್ನಾಗಿಯೇ ಆಡುತ್ತಿದ್ದೇವೆ. ಆಟದಲ್ಲಿ ಏಳು ಬೀಳು ಸಾಮಾನ್ಯ. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಮುಂದಡಿ ಇಡಬೇಕು. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ.

ಈ ಸಲದ ಒಲಿಂಪಿಕ್ಸ್‌ನಲ್ಲಿ ತಂಡದಿಂದ ಪದಕ ನಿರೀಕ್ಷಿಸಬಹುದೇ?

ಹಿಂದಿನ ಟೂರ್ನಿಗಳಲ್ಲಿ ತಂಡದಿಂದ ಉತ್ತಮ ಸಾಮರ್ಥ್ಯ ಮೂಡಿಬಂದಿದೆ. ಆಟಗಾರರೆಲ್ಲಾ ಉತ್ತಮ ಲಯದಲ್ಲಿದ್ದಾರೆ. ಟೋಕಿಯೊದಲ್ಲಿ ಪದಕ ಗೆಲ್ಲುವುದು ಎಲ್ಲರ ಗುರಿ. ಅದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸುತ್ತೇವೆ.

ಟೋಕಿಯೊ ಒಲಿಂಪಿಕ್ಸ್‌ ನಿಮ್ಮ ಪಾಲಿಗೆ ಕೊನೆಯದ್ದಾಗಬಹುದೇ?

ನನಗೀಗ 30 ವರ್ಷ ವಯಸ್ಸು. ಒಲಿಂಪಿಕ್ಸ್‌ ನಂತರ ದೇಹವು ಆಟಕ್ಕೆ ಹೇಗೆ ಸ್ಪಂದಿಸುತ್ತದೆಯೊ ನೋಡಬೇಕು. ಕುಟುಂಬದವರು, ಸ್ನೇಹಿತರು, ಗುರುಗಳ ಸಲಹೆ ಪಡೆದು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇನೆ.

ಇದನ್ನೂ ಓದಿ: ಹಾಕಿ: ಕನ್ನಡಿಗ ಸುನಿಲ್‌ಗೆ ಅವಕಾಶ 

* ರಾಷ್ಟ್ರೀಯ ತಂಡದಲ್ಲಿ ಕರ್ನಾಟಕದವರ ಸಂಖ್ಯೆ ಕ್ಷೀಣಿಸಿದೆಯಲ್ಲ. ಇದಕ್ಕೆ ಕಾರಣವೇನು?

ಒಂದು ಕಾಲದಲ್ಲಿ ರಾಜ್ಯದ ಐದು ಮಂದಿ ರಾಷ್ಟ್ರೀಯ ಶಿಬಿರದಲ್ಲಿರುತ್ತಿದ್ದೆವು. ಈಗ ನಾನೊಬ್ಬನೇ ಉಳಿದಿದ್ದೇನೆ. ಇದನ್ನು ನೆನೆದಾಗಲೆಲ್ಲಾ ತುಂಬಾ ಬೇಸರವಾಗುತ್ತದೆ. 

ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವುಗಳಿಗೆ ಸಾಣೆ ಹಿಡಿಯುವ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ. ಹಾಕಿ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ, ಉತ್ತಮ ಕೆಲಸಗಳನ್ನು ಮಾಡುತ್ತಿವೆ. ಇದಕ್ಕೆ ಸರ್ಕಾರವೂ ಕೈಜೋಡಿಸಬೇಕಿದೆ.

ಇತರ ರಾಜ್ಯಗಳಲ್ಲಿ ಇರುವಂತೆ ನಮ್ಮಲ್ಲೂ ಹೆಚ್ಚೆಚ್ಚು ಅಕಾಡೆಮಿಗಳು ಅಸ್ತಿತ್ವಕ್ಕೆ ಬರಬೇಕು. ಆಗ ಪೈಪೋಟಿ ಹೆಚ್ಚುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ದಕ್ಷಿಣ ಕರ್ನಾಟಕದಂತೆ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಆಸ್ಟ್ರೋ ಟರ್ಫ್‌ಗಳನ್ನು ನಿರ್ಮಿಸುವ ಕೆಲಸ ಆಗಬೇಕು. ಆ ಮೂಲಕ ಆ ಭಾಗದ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತಲೂ ಗಮನ ಹರಿಸಬೇಕು.

ಪ್ರತಿಕ್ರಿಯಿಸಿ (+)