ಬುಧವಾರ, ನವೆಂಬರ್ 20, 2019
21 °C

ಬಳ್ಳಾರಿಯಲ್ಲಿ ವಿಶೇಷ ಮಕ್ಕಳ ಪವರ್‌ ಲಿಫ್ಟಿಂಗ್‌!

Published:
Updated:

ಬಳ್ಳಾರಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಸಂಕೀರ್ಣದ ಮಲ್ಟಿ ಜಿಮ್‌ಗೆ ಬರುವವರೆಗೂ ನಗರದ ಅನುಗ್ರಹ ಅಂಗವಿಕಲ ಮಕ್ಕಳ ಶಾಲೆಯ ಸೀನಿಯರ್‌ ತರಗತಿಯ ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಾದ ಗವಿರಾಜ್‌ ಮತ್ತು ಜಿ.ವಿನಯ್‌ ಅವರಿಗೆ ಪವರ್‌ ಲಿಫ್ಟಿಂಗ್‌ ಎಂದರೆ ಏನೆಂದು ಸ್ಪಷ್ಟವಾಗಿ ಗೊತ್ತಿರಲಿಲ್ಲ. ಭಾರ ಎತ್ತುವುದು ಎಂದು ಕನ್ನಡದಲ್ಲಿ ಹೇಳಿದರೂ ಅವರಿಗೆ ಅದು ಅರ್ಥವಾಗುತ್ತಿರಲಿಲ್ಲ.

ಶಾಲೆಯ ಶಿಕ್ಷಕ ಆನಂದ್‌ ಯೋಗಿ ಈ ಇಬ್ಬರನ್ನು ಸೆಪ್ಟೆಂಬರ್‌ ತಿಂಗಳ ಎರಡನೇ ವಾರದ ಕೊನೆಗೆ ಜಿಮ್‌ಗೆ ಕರೆ ತಂದ ಬಳಿಕ ಅವರಿಗೆ ಹೊಸ ಲೋಕವೊಂದು ಕಂಡಿತ್ತು. ಮೊದಲು ಭಾರವಿಲ್ಲದೆ ಬಸ್ಕಿ ಹೊಡೆದು, ನಂತರ ಇಪ್ಪತ್ತೆರಡೂವರೆ ಕೆಜಿಯ ಕಬ್ಬಿಣದ ರಾಡ್‌ ಅನ್ನು ಹೆಗಲ ಮೇಲಿರಿಸಿಕೊಂಡು ಬಸ್ಕಿ ಹೊಡೆಯಲು ಶುರು ಮಾಡಿದಾಗಲೇ ಭಾರ ಎತ್ತುವುದು ಎಂದರೆ ಏನೆಂದು ಗೊತ್ತಾಗತೊಡಗಿತ್ತು.

ಹೊಸಪೇಟೆಯಲ್ಲಿ ಅದೇ ತಿಂಗಳು ಕೊನೆಯ ವಾರ ಸ್ಪೆಷಲ್‌ ಒಲಿಂಪಿಕ್ಸ್‌ ಭಾರತ್‌ನ ಕರ್ನಾಟಕ ಶಾಖೆಯು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಸಲುವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ಈ ಇಬ್ಬರೂ ಗಮನ ಸೆಳೆಯುವ ಪ್ರದರ್ಶನ ನೀಡಿ ಆಯ್ಕೆಯಾಗಿದ್ದು ವಿಶೇಷ. ಅದಕ್ಕೆ ಬೆಂಬಲವಾಗಿ ನಿಂತಿದ್ದು ಶಾಲೆಯ ಮುಖ್ಯಸ್ಥರಾದ ಮೇರಿ ಕ್ರಿಸ್ಟಿನ್ ಮತ್ತು ಮಲ್ಟಿ ಜಿಮ್‌ ತರಬೇತುದಾರರಾದ ಬಿ.ಎಸ್‌.ರಾಘವೇಂದ್ರ ಠಾಕೂರ್.

ಮೊದಲು ಅವರಿಗೆ ತೂಕದ ಪ್ಲೇಟ್‌ಗಳನ್ನು ಹಾಕದೇ, ಕೇವಲ ಕಬ್ಬಿಣದ ರಾಡ್‌ನ ಭಾರ ಹೊರುವ ತರಬೇತಿ ದೊರಕಿತು. ನಂತರ ಸ್ಕ್ವಾಟ್‌ (ಹೆಗಲ ಮೇಲೆ ಭಾರ ಹೊತ್ತು ಬಸ್ಕಿ ಹೊಡೆಯುವುದು), ಬೆಂಚ್‌ ಪ್ರೆಸ್‌ (ಅಂಗಾತ ಮಲಗಿ ಭಾರ ಎತ್ತುವುದು–ಇಳಿಸುವುದು) ಹಾಗೂ ಡೆಡ್‌ ಲಿಫ್ಟ್‌ (ನೆಲದ ಮೇಲಿಂದ ಭಾರ ಎತ್ತಿ ನಿಲ್ಲುವುದು) ಅಭ್ಯಾಸ ನಡೆಯಿತು. ಈ ಹೊಸ ಬಗೆಯ ಅಭ್ಯಾಸ ಅವರ ಬುದ್ಧಿಯನ್ನೂ ಚುರುಕುಗೊಳಿಸಿತ್ತು.

ಮರೆವಿನ ಸಮಸ್ಯೆ

ಆದರೆ, ಈ ವಿಶೇಷ ಮಕ್ಕಳು ಹಿಂದಿನ ದಿನ ಹೇಳಿಕೊಟ್ಟಿದ್ದನ್ನು ಮಾರನೇ ದಿನದ ಹೊತ್ತಿಗೆ ಮರೆತುಬಿಡುತ್ತಿದ್ದುದು ಅಭ್ಯಾಸದ ಸಂದರ್ಭದಲ್ಲೂ ದೊಡ್ಡ ತೊಡಕಾಗಿತ್ತು. ಎಲ್ಲವನ್ನೂ ಮತ್ತೆ ಮೊದಲಿನಿಂದ ಹೇಳಿ ಕೊಡಬೇಕಾಗುತ್ತಿತ್ತು. ಈ ಸಮಸ್ಯೆಯ ನಡುವೆಯೇ ಅವರು ಸುಮಾರು ಹತ್ತು ದಿನಗಳ ಕಾಲ ಅಭ್ಯಾಸವನ್ನು ಮುಂದುವರಿಸಿದರು. ಜಿಮ್‌ನ ಸಾಮಾನ್ಯ ಅಭ್ಯಾಸಿಗಳಲ್ಲೂ ಕುತೂಹಲದ ಕೇಂದ್ರವಾಗಿದ್ದರು. ದಿನವೂ ಸುಮಾರು ಅರ್ಧ ಗಂಟೆ ಕಾಲ ಅವರ ಅಭ್ಯಾಸ ನಡೆದು ಅವರ ಸ್ಪರ್ಧೆಗೆ ಸಜ್ಜಾದರು.

52ರಿಂದ 56 ಕೆಜಿ ತೂಕದವರ ವಿಭಾಗದಲ್ಲಿ ಗವಿರಾಜ್ ಸ್ಕ್ವಾಟ್‌ 40 ಕೆಜಿ, ಬೆಂಚ್ ಪ್ರೆಸ್ 25 ಕೆಜಿ ಹಾಗೂ ಡೆಡ್ ಲಿಫ್ಟ್‌ನಲ್ಲಿ 70 ಕೆಜಿ ಭಾರ ಎತ್ತುವ ಮೂಲಕ ಉತ್ತಮ ಪ್ರದರ್ಶನ ನೀಡಿದರೆ, 56 ನಿಂದ 64 ಕೆಜಿ ತೂಕದವರ ವಿಭಾಗದಲ್ಲಿ ವಿನಯ್‌ ಸ್ಕ್ವಾಟ್‌ 60 ಕೆ.ಜಿ. ಬೆಂಚ್‌ಪ್ರೆಸ್‌ 25 ಕೆಜಿ ಹಾಗೂ ಡೆಡ್‌ ಲಿಫ್ಟ್‌ 100 ಕೆಜಿ ಭಾರ ಎತ್ತುವ ಮೂಲಕ ಸೈ ಎನ್ನಿಸಿಕೊಂಡರು.

‘ಭಾರ ಎತ್ತುವ ವಿಷಯದಲ್ಲಿ ವಿಶೇಷ ಮಕ್ಕಳ ಮೇಲೆ ಎಷ್ಟು ನಿಗಾ ಇಟ್ಟರೂ ಸಾಲದು. ಹೇಳಿಕೊಟ್ಟಿದ್ದನ್ನು ಸಹಜವಾಗಿಯೇ ಮರೆತುಬಿಡುತ್ತಿದ್ದ ಅವರಿಗೆ ಭಾರ ಎತ್ತುವ ಪಾಠಗಳನ್ನು ಹತ್ತಾರು ಬಾರಿ ಮನನ ಮಾಡಿಸಿ, ಎಚ್ಚರಿಕೆಯಿಂದ ಅಭ್ಯಾಸ ನಡೆಸಿದ್ದರಿಂದ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ಪರ್ಧೆ ಇದ್ದಾಗಷ್ಟೇ  ತರಬೇತಿ ಪಡೆಯುವ ಬದಲು ನಿಯಮಿತವಾಗಿ ಅಭ್ಯಾಸ ನಡೆಸಿದರೆ ಈ ಮಕ್ಕಳು ಇನ್ನಷ್ಟು ಎತ್ತರಕ್ಕೆ ಏರಬಲ್ಲರು’ ಎಂದು ತರಬೇತುದಾರ ರಾಘವೇಂದ್ರ ಠಾಕೂರ್‌ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ವಿಶೇಷ ಮಕ್ಕಳಿಗೆ ಜೀವನ ಕೌಶಲದ ಸ್ಪರ್ಶ

ಪ್ರತಿಕ್ರಿಯಿಸಿ (+)