ಶುಕ್ರವಾರ, ನವೆಂಬರ್ 15, 2019
23 °C
ಕೆ.ಆರ್‌. ಪೇಟೆಯ ಗಂಜಿಗೆರೆ ಗ್ರಾಮದಲ್ಲಿ ಮನೆ ಕುಸಿದು ವ್ಯಕ್ತಿ ಸಾವು

ಉಕ್ಕಿ ಹರಿದ ಕೆರೆ –ಕಟ್ಟೆಗಳು; ಹಲವೆಡೆ ಭೂಕುಸಿತ

Published:
Updated:

ಮೈಸೂರು: ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬಿರುಸಿನ ಮಳೆಯಾಗಿದೆ.

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಸಿಂದಘಟ್ಟ, ಅಗ್ರಹಾರ ಬಾಚಹಳ್ಳಿ, ರಾಯಸಮುದ್ರ, ಹರಳಹಳ್ಳಿ, ಮರುವನಹಳ್ಳಿ, ಹೊಸಹೊಳಲು, ನೀತಿಮಂಗಲ, ವಸಂತಪುರ ಗ್ರಾಮಗಳ ಕೆರೆಗಳು ಉಕ್ಕಿಹರಿದಿದ್ದು, ನೂರಾರು ಎಕರೆ ಬೆಳೆ ಕೊಚ್ಚಿಹೋಗಿದೆ. ವಿದ್ಯುತ್‌ ಕಂಬಗಳು ನೆಲಕ್ಕು
ರುಳಿದ್ದು ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಹಲವೆಡೆ ಭೂ ಕುಸಿತ ಉಂಟಾಗಿದೆ.

ಸಂತೇಬಾಚಹಳ್ಳಿ ಹೋಬಳಿ ಮೈಲಾರಪಟ್ಟಣ, ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ, ಚಿಕ್ಕಅಂಕನಹಳ್ಳಿ ಗ್ರಾಮಗಳಲ್ಲೂ ಮನೆ ಕುಸಿದಿದ್ದು ಯಾವುದೇ ಅಪಾಯ ಉಂಟಾಗಿಲ್ಲ.

ಗೋಪಿನಾಥಂನಿಂದ ಹೊಗೇನಕಲ್‌ಗೆ ತೆರಳುವ ರಸ್ತೆಯ ತೇಂಗಾಕೊಂಬೋ ಸೇತುವೆ ಮೇಲೆ ನೀರು ಹರಿದಿದೆ. ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ, ಹನೂರು ತಾಲ್ಲೂಕಿನ ಒಡೆಯರಪಾಳ್ಯ ಮುಖ್ಯರಸ್ತೆಯ ಲೊಕ್ಕನಹಳ್ಳಿ ಸಮೀಪದ ಜಡಿತಡಿ ಸೇತುವೆ ಮೇಲೆ 4ರಿಂದ 5 ಅಡಿ ಎತ್ತರಕ್ಕೆ ನೀರು ಹರಿದಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಗಂಟೆಗಟ್ಟಲೆ ಕಾದು ಹರಸಾಹಸಪಟ್ಟು ಸೇತುವೆ ದಾಟಿದರು.


ಕೆ.ಆರ್‌. ಪೇಟೆ ತಾಲ್ಲೂಕಿನ ದೊದ್ದನಕಟ್ಟೆ ಬಳಿಯ ಕೆರೆ ಕೋಡಿ ಬಿದ್ದಿರುವುದು

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿನ 10 ಮನೆಗಳು ಸೇರಿದಂತೆ ಜಿಲ್ಲೆಯಲ್ಲಿ 12 ಮನೆಗಳು ಕುಸಿದಿದ್ದು, ನುಗ್ಗೇಹಳ್ಳಿ ಹೋಬಳಿಯ ಐದು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕೊಡಗು ಜಿಲ್ಲೆಯ  ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿಯಲ್ಲಿ ಸಾಧಾರಣ ಮಳೆಯಾಗಿದೆ. ಮದೆನಾಡು, ಸಂಪಾಜೆ, ಕಾಟಗೇರಿ, ಅವಂದೂರಿನಲ್ಲಿ ಸೋಮವಾರ ರಾತ್ರಿಯಿಂದ ತುಂತುರು ಮಳೆಯಾಗುತ್ತಿದೆ.

ಚಾಮುಂಡಿ ಬೆಟ್ಟ, ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿತ

ಮೈಸೂರು/ ಚಾಮರಾಜನಗರ: ಸೋಮವಾರ ರಾತ್ರಿ ಸುರಿದ ಮಳೆಗೆ ಮೈಸೂರಿನ ಚಾಮುಂಡಿ ಬೆಟ್ಟ ಹಾಗೂ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಭೂಮಿ ಕುಸಿದಿದೆ.

ಚಾಮುಂಡಿ ಬೆಟ್ಟದಲ್ಲಿ ಬೃಹತ್ ನಂದಿ ವಿಗ್ರಹ ವೀಕ್ಷಣೆಗೆ ತೆರಳುವ ಕಿರಿದಾದ ರಸ್ತೆ ಬದಿಯ ತಡೆಗೋಡೆ ಕುಸಿದು ಬಿದ್ದಿದ್ದು, ಬಂಡೆಗಲ್ಲುಗಳು ರಸ್ತೆ ಬದಿಗೆ ಉರುಳಿ ಬಿದ್ದಿವೆ. ಲಘು ವಾಹನ ಸಂಚಾರಕ್ಕಷ್ಟೇ ಅವಕಾಶ ಕಲ್ಪಿಸಲಾಗಿದ್ದು, ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಬೆಟ್ಟದಿಂದ ಪಾಲಾರ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ರಸ್ತೆಯ ಬಹುಪಾಲು ಭಾಗ ಕುಸಿದಿದೆ. ಕಾವೇರಿ ಕಚ್ಚಾನೀರಿನ ಕೇಂದ್ರದ ಮುಂಭಾಗದ ತಿರುವಿನಲ್ಲಿ ರಸ್ತೆಯ ತಡೆಗೋಡೆ ಸಂಪೂರ್ಣ ಕುಸಿದಿದೆ. ಇದರ ಮುಂದಿನ ತಿರುವಿನಲ್ಲಿ ಬೆಟ್ಟದ ಮೇಲಿನಿಂದ ಮಣ್ಣು ಹಾಗೂ ಕಲ್ಲುಬಂಡೆಗಳು ಕುಸಿದಿದ್ದು ಮಂಗಳವಾರ ಬೆಳಿಗ್ಗೆವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ, ರಸ್ತೆಯಲ್ಲಿ ಬಿದ್ದಿದ್ದ ಕಲ್ಲು, ಮಣ್ಣನ್ನು ತೆರವುಗೊಳಿಸಿದರು.

ಪ್ರತಿಕ್ರಿಯಿಸಿ (+)