ಶನಿವಾರ, ಜನವರಿ 18, 2020
21 °C

ಗಡಿಯಲ್ಲಿ ಕನ್ನಡ ಚಟುವಟಿಕೆ ಬೆಳೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗಡಿಪ್ರದೇಶದಲ್ಲಿರುವ ಗುಲ್ಬರ್ಗದಲ್ಲಿ ಕನ್ನಡ ಚಟುವಟಿಕೆಗಳು ಸಶಕ್ತವಾಗಿ ಬೆಳೆಯಲಿ ಎಂದು ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ಆಶಿಸಿದರು.ಗುಲ್ಬರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯ 2012ನೇ ವರ್ಷದ ದಿನದರ್ಶಿಕೆ (ಕ್ಯಾಲೆಂಡರ್)ಅನ್ನು ಕನ್ನಡ ಭವನದಲ್ಲಿ ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.ನಮ್ಮ ನಾಡು-ನುಡಿ, ನೆಲ-ಜಲ, ಸಂಸ್ಕೃತಿ, ಪರಂಪರೆಯನ್ನುಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯತತ್ಪರರಾಗಬೇಕು ಎಂದ ಅವರು, ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆಯು ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ದೇವೀಂದ್ರಪ್ಪ ಖಾನಾಪುರ ಮಾತನಾಡಿ, ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳು, ಕನ್ನಡಭವನಕ್ಕಾಗಿ ಜಾಗ ಖರೀದಿಯ ನಿರ್ಣಯಗಳನ್ನು ಸ್ಮರಿಸಿದರು.ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿ, ತಮ್ಮ ಅಧ್ಯಕ್ಷರ ವಿವೇಚನಾ ನಿಧಿಯಿಂದ 21,50,000 ರೂಪಾಯಿಯನ್ನು ರಂಗಮಂದಿರ ನಿರ್ಮಾಣಕ್ಕೆ ನೀಡಲಾಗಿದೆ.ಎಚ್‌ಕೆಡಿಬಿ ಮೂಲಕವೂ ಸಾಕಷ್ಟು ಅನುದಾನವನ್ನು ಈ ಕಟ್ಟಡಕ್ಕೆ ಹರಿಸಲಾಗಿದೆ. ವಿಭಾಗೀಯ ಕೇಂದ್ರದಲ್ಲಿ ಕನ್ನಡ ಕಹಳೆ ಮೊಳಗಲು ಜನಪ್ರತಿನಿಧಿಗಳು ಕೊಡುಗೆ ನೀಡಿದ್ದಾರೆ. ರಂಗಮಂದಿರ ಕಾಮಗಾರಿಯು ಬೇಗೆನೆ ಪೂರ್ಣಗೊಳ್ಳಲಿ ಎಂದರು.ಸಾಹಿತ್ಯ, ಕಲೆ, ಸಾಂಸ್ಕೃತಿಕ ಕಾರ್ಯಗಳಿಗೆ ನೆರವು ನೀಡುವುದು, ನೆಲೆ ಒದಗಿಸುವುದು ಕೂಡಾ ಸಾಮಾಜಿಕ ಕಾರ್ಯವೇ. ಈ ನಿಟ್ಟಿನಲ್ಲಿ ರಂಗಮಂದಿರವು ಗುಲ್ಬರ್ಗದ ಸಾಂಸ್ಕೃತಿಕ ಶ್ರೀಮಂತಿಕೆಯ ಇನ್ನಷ್ಟು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಪ್ರಾಸ್ತಾವಿಕವಾಗಿ ಮಾತನಾಡಿ, 2009ರಿಂದ ದಿನದರ್ಶಿಕೆ ಪ್ರಕಟಿಸುತ್ತಾ ಬಂದಿದ್ದು, ಇದರಲ್ಲಿ  ಕನ್ನಡ ಮಾಹಿತಿಗಳು, ಸಮ್ಮೇಳನಕ್ಕೆ ಶ್ರಮಪಟ್ಟವರ ವಿವರ ಮತ್ತಿತರ ವಿಚಾರಗಳಿವೆ. ಮುಂದಿನ ದಿನಗಳಲ್ಲಿ ಇದೊಂದು ದಾಖಲೆಯಾಗಲಿದೆ ಎಂದರು.ದಾನಿಗಳಾದ ಉದ್ಯಮಿ ಸುಭಾಷ್ ಕಮಲಾಪುರೆ ಮತ್ತು ಶಿವಶಾಂತ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಭೀಮರಾಯ ಅರಿಕೇರಿ ನಿರೂಪಿಸಿದರು. ಪ್ರೇಮಚಂದ ಚೌಹಾಣ ಸ್ವಾಗತಿಸಿ, ಮಡಿವಾಳಪ್ಪ ನಾಗನಹಳ್ಳಿ ವಂದಿಸಿದರು.

ಪ್ರತಿಕ್ರಿಯಿಸಿ (+)