ಗುರುವಾರ , ಅಕ್ಟೋಬರ್ 17, 2019
22 °C

ಆಹಾರ ಭದ್ರತೆ ಯೋಜನೆ ಶೀಘ್ರ ಜಾರಿ: ಖರ್ಗೆ

Published:
Updated:

ಯಾದಗಿರಿ: ಆಹಾರ ಭದ್ರತೆ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲಾಗುತ್ತಿದ್ದು, ಆರಂಭದಲ್ಲಿ ಗುಲ್ಬರ್ಗ, ಯಾದಗಿರಿ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಡುಬಡವರಿಗೆ 35 ಕಿ.ಗ್ರಾಂ. ಅಕ್ಕಿ, ಗೋದಿ, ಜೋಳ, ರಾಗಿ, ಸಜ್ಜೆ ಸೇರಿದಂತೆ ಆಯಾ ಭಾಗದಲ್ಲಿರುವ ಧಾನ್ಯಗಳನ್ನು ರೂ.1, 2 ಹಾಗೂ 3 ದರದಲ್ಲಿ ಪೂರೈಸಲಾಗುವುದು. ಅವಿಭಜಿತ ಗುಲ್ಬರ್ಗ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬರಲಿರುವ ಯೋಜನೆಯನ್ನು ನಂತರದ ದಿನಗಳಲ್ಲಿ ರಾಜ್ಯದೆಲ್ಲೆಡೆ ವಿಸ್ತರಿಸಲಾಗುವುದು. ಯೋಜನೆಗೆ ಸಂಬಂಧಿಸಿದಂತೆ ಕಾನೂನು ಈಗಾಗಲೇ ಸಿದ್ಧವಾಗಿದೆ ಎಂದು ತಿಳಿಸಿದರು.ಲೋಕಪಾಲ ಮಸೂದೆಯನ್ನು ಹಿಂದಿನ ಅಧಿವೇಶನದಲ್ಲಿಯೇ ಅಂಗೀಕರಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದೇ ಇರುವುದರಿಂದ ಅಲ್ಲಿಯೇ ಸ್ಥಗಿತಗೊಂಡಿದೆ. ಬರುವ ಅಧಿವೇಶನದಲ್ಲಿ ಜನರ ಇಚ್ಛೆಗೆ ಅನುಗುಣವಾದ ಲೋಕಪಾಲ ಮಸೂದೆ ಜಾರಿಗೊಳಿಸಲು ಕಾಂಗ್ರೆಸ್ ತನ್ನೆಲ್ಲ ಪ್ರಯತ್ನ ಮಾಡಲಿದೆ ಎಂದು ಹೇಳಿದರು.ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಕೇಂದ್ರ ಸರ್ಕಾರದ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ರಾಜ್ಯ ಸರ್ಕಾರ ಮಾತ್ರ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಕಾರ್ಮಿಕ ಇಲಾಖೆಯ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ. ಕೇರಳ, ಪಶ್ಚಿಮ ಬಂಗಾಳ, ದೆಹಲಿ, ಬಿಹಾರ, ಉತ್ತರ ಪ್ರದೇಶ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಈ ಯೋಜನೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ರಾಜ್ಯ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. ಕೇವಲ 8 ಜಿಲ್ಲೆಗಳಲ್ಲಿ ಮಾತ್ರ ಇದು ಜಾರಿಯಾಗಿದ್ದು, ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಜಾರಿಗೊಳಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷ ತೆರಿಗೆ ಮೂಲಕ ಸಂಗ್ರಹಿಸಿದ ರೂ. ಒಂದು ಸಾವಿರ ಕೋಟಿ ಅನುದಾನದ ಕರ್ನಾಟಕ ಸರ್ಕಾರದ ಬಳಿ ಇದೆ. ಅದರಲ್ಲಿ ಕೇವಲ ರೂ.15-20 ಕೋಟಿ ಮಾತ್ರ ಖರ್ಚು ಮಾಡಲಾಗಿದ್ದು, ಇದರಿಂದ ಯಾವ ಕಾರ್ಮಿಕರ ಉದ್ಧಾರ ಸಾಧ್ಯವಾದೀತು ಎಂದು ಪ್ರಶ್ನಿಸಿದರು.ಕೇಂದ್ರ ಕಾರ್ಮಿಕ ಇಲಾಖೆಯಿಂದ ರಾಜ್ಯಕ್ಕೆ ಸುಮಾರು ರೂ.4 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಬಂದಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದ ರಾಜ್ಯ ಸರ್ಕಾರ, ಬರದೇ ಇರುವ ಒಂದೆರಡು ಅನುದಾನಗಳನ್ನೇ ನೆಪವಾಗಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ಮಲತಾಯಿ ಧೋರಣೆಯ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.ಸರ್ಕಾರದಲ್ಲಿ ಭದ್ರತೆ ಇಲ್ಲ:

ರಾಜ್ಯದ ಬಿಜೆಪಿ ಸರ್ಕಾರದ ಅಭದ್ರತೆಯನ್ನು ಎದುರಿಸುತ್ತಿದೆ. ಸರ್ಕಾರದ ಸಚಿವರು ಅಸ್ಥಿರತೆಯ ಮಾತುಗಳನ್ನೇ ಆಡುತ್ತಿದ್ದಾರೆ. ಯಾರೊಬ್ಬರಿಂದಲೂ ಒಳ್ಳೆಯ ಆಡಳಿತದ ಮಾತುಗಳು ಬರುತ್ತಿಲ್ಲ. ರಾಜ್ಯದ ಅಭಿವೃದ್ಧಿಯ ಬದಲು ಕಚ್ಚಾಟವನ್ನು ಹೇಗೆ ನಿಯಂತ್ರಿಸಬಹುದು ಎಂಬುದರಲ್ಲಿಯೇ ಸರ್ಕಾರದ ಸಚಿವರು ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿಯಲ್ಲಿನ ಒಳಜಗಳಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವಿರಾಮ ನೀಡಿದಂತಾಗಿದೆ. ಎಲ್ಲ ವಿಷಯದಲ್ಲೂ ರಾಜಕೀಯ ಬೆರೆಸಲಾಗುತ್ತಿದೆ. ಅಧಿಕಾರಕ್ಕೆ ಬಂದ ಮೇಲೆ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು. ಅದನ್ನು ಬಿಟ್ಟು ಕಚ್ಚಾಟದಲ್ಲಿ ನಿರತರಾದರೆ, ಜನರಿಗೆ ದ್ರೋಹ ಬಗೆದಂತಾಗುತ್ತದೆ. ರಾಜ್ಯದ ಅಭಿವೃದ್ಧಿಯಲ್ಲಿ ಎಲ್ಲೋ ಒಂದು ರೀತಿಯ ಕೊರತೆ ಕಾಣುತ್ತಿದ್ದು, ಮುಖ್ಯಮಂತ್ರಿ ಸದಾನಂದಗೌಡರು ಅದನ್ನು ನೀಗಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.ಶಾಸಕರಾದ ಡಾ. ಎ.ಬಿ. ಮಾಲಕರೆಡ್ಡಿ, ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್ ಮುಂತಾದವರು ಹಾಜರಿದ್ದರು.

 

Post Comments (+)