ಶನಿವಾರ, ಮೇ 28, 2022
26 °C

ಅಭಿವೃದ್ಧಿ ನಿಗಮದಿಂದ ಅನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಡಾ. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ 2010-11ನೇ ಸಾಲಿನಲ್ಲಿ ಸ್ವಯಂ ಉದ್ಯೋಗ, ನೇರ ಸಾಲ, ಗಂಗಾ ಕಲ್ಯಾಣ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯವಾಗಿದೆ ಎಂದು ಅಖಿಲ ಭಾರತ ಅಂಬೇಡ್ಕರ ಕ್ರಾಂತಿದಳ ತಾಲ್ಲೂಕು ಶಾಖೆ ಅಧ್ಯಕ್ಷ ಆನಂದ ಕಲ್ಲಕ್, ನಗರ ಘಟಕದ ಉಪಾಧ್ಯಕ್ಷ ಬಾಬು ಎಸ್. ಕಾಶಿ, ದಲಿತ ಮುಖಂಡ ಉದಯಕುಮಾರ ಸಾಗರ ಆರೋಪಿಸಿದ್ದಾರೆ.ಗಂಗಾ ಕಲ್ಯಾಣ ಯೋಜನೆಯಲ್ಲಿ ಒಟ್ಟು ಆಯ್ಕೆಯಾದ 80 ಫಲಾನುಭವಿಗಳಲ್ಲಿ 50 ಲಂಬಾಣಿ, 12 ಮಾದಿಗ, 5ಹೊಲೆಯ, 4 ವಡ್ಡರ, 1 ಸಮಗಾರ ಜನಾಂಗದ ಫಲಾನುಭವಿ ಆಯ್ಕೆ ಮಾಡಿ ಭಾರಿ ತಾರತಮ್ಯ ಮಾಡಲಾಗಿದೆ ಎಂದು ಅವರು ಶಾಸಕ ವಾಲ್ಮೀಕ ನಾಯಕ ಅವರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ. ನೇರ ಸಾಲ ಯೋಜನೆಯಲ್ಲಿ ಆಯ್ಕೆಯಾದ 32 ಫಲಾನುಭವಿಗಳಲ್ಲಿ 19 ಲಂಬಾಣಿ, 9 ಮಾದಿಗ, 2 ಹೊಲೆಯ, 1 ವಡ್ಡರ, 2 ಸಮಗಾರ, 2 ಕೊರಮ ಜನಾಂಗದ ಫಲಾನುಭವಿ ಆಯ್ಕೆ ಮಾಡಿ ಜಾತಿವಾರು ಆಯ್ಕೆಯಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಸ್ವಯಂ ಉದ್ಯೋಗ ಯೋಜನೆಯಲ್ಲಿ ಆಯ್ಕೆಯಾದ ಒಟ್ಟು 30 ಫಲಾನುಭವಿಗಳಲ್ಲಿ 17 ಲಂಬಾಣಿ, 8 ಮಾದಿಗ, 2 ಹೊಲೆಯ, 2 ವಡ್ಡರ, 1 ಕೊರಮ ಜನಾಂಗದ ಫಲಾನುಭವಿ ಆಯ್ಕೆ ಮಾಡಿ ಜಾತಿವಾರು ಆಯ್ಕೆ ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸಿ ಅನ್ಯಾಯ ಮಾಡಿದ್ದಾರೆ. ಮೂರು ಯೋಜನೆಗಳಲ್ಲಿ ಆಯ್ಕೆಯಾದ 142 ಫಲಾನುಭವಿಗಳಲ್ಲಿ 106 ಫಲಾನುಭವಿಗಳನ್ನು ಲಂಬಾಣಿ ಜನರನ್ನು ಆಯ್ಕೆ ಮಾಡಲಾಗಿದೆ. ಇದನ್ನು ಸರಿಪಡಿಸಿ ಜಾತಿವಾರು ಆಯ್ಕೆಯಲ್ಲಿ ನ್ಯಾಯ ನೀಡಬೇಕು ಎಂದು ಶಾಸಕರ ಗಮನ ಸೆಳೆದಿದ್ದಾರೆ.ಧರಣಿ ಸತ್ಯಾಗ್ರಹ: 2010-11ನೇ ಸಾಲಿನ ಗಂಗಾಕಲ್ಯಾಣ, ನೇರ ಸಾಲ, ಸ್ವಯಂ ಉದ್ಯೋಗ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಜಾತಿವಾರು ಆಯ್ಕೆಗೆ ಅನ್ಯಾಯ ಮಾಡಲಾಗಿದೆ. ಶಾಸಕರ ನೀತಿಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಶಾಖೆ ಫೆ.18 ರಂದು ತಹಸೀಲ್ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಿದೆ ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.