ಬುಧವಾರ, ನವೆಂಬರ್ 20, 2019
27 °C
ಕೃಷಿ ಆಧರಿತ ಶಿಕ್ಷಣದ ಉದ್ದೇಶ: ಸಚಿವ ಸಂಪುಟ ಸಭೆ ಒಪ್ಪಿಗೆ

ದೀನಬಂಧು ಟ್ರಸ್ಟ್‌ಗೆ 7 ಎಕರೆ ಜಾಗ ಮಂಜೂರು

Published:
Updated:
Prajavani

ಚಾಮರಾಜನಗರ: ಅನಾಥ ಮತ್ತು ಬಡ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸುತ್ತಿರುವ ನಗರದ ದೀನಬಂಧು ಟ್ರಸ್ಟ್‌ಗೆ, ಶಿಕ್ಷಣದ ಉದ್ದೇಶಕ್ಕಾಗಿ ಏಳು ಎಕರೆ ಜಾಗವನ್ನು ಮಂಜೂರು ಮಾಡಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. 

ಗಾಳಿಪುರದ ಬಳಿ ಕರಿವರದರಾಜನದ ಬೆಟ್ಟದ ಸಮೀಪ ಸರ್ವೆ ನಂ 65ರಲ್ಲಿ ಏಳು ಎಕರೆಯನ್ನು ರಾಜ್ಯ ಸರ್ಕಾರ ಟ್ರಸ್ಟ್‌ಗೆ ನೀಡಲಿದೆ. ಇದಕ್ಕೆ ಟ್ರಸ್ಟ್‌ ನಿಗದಿತ ಹಣವನ್ನೂ ಪಾವತಿಸಲಿದೆ. 

ಹಳೆ ಮನವಿ: ಕೃಷಿ, ಪಶುಸಂಗೋಪನೆ ಆಧರಿತ ಶಿಕ್ಷಣಕ್ಕಾಗಿ ಜಾಗ ಮಂಜೂರು ಮಾಡುವಂತೆ ಸಂಸ್ಥೆ 2012ರಲ್ಲೇ ಸರ್ಕಾರಕ್ಕೆ ಮನವಿ ಮಾಡಿತ್ತು. ಜಿಲ್ಲಾಧಿಕಾರಿಗಳು ಪ್ರಸ್ತಾವನೆಯನ್ನೂ ಕಳುಹಿಸಿದ್ದರು. ಆದರೆ, ಯಾವ ಸರ್ಕಾರವೂ ಮಂಜೂರು ಮಾಡಲು ಕ್ರಮ ಕೈಗೊಂಡಿರಲಿಲ್ಲ. 

ರಾಜ್ಯ ಸರ್ಕಾರ ಈ ಸಾಲಿ ಗಾಂಧಿ ಸೇವಾ ಪ್ರಶಸ್ತಿಗೆ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಜಿ.ಎಸ್‌.ಜಯದೇವ ಅವರನ್ನು ಆಯ್ಕೆ ಮಾಡಿತ್ತು. ಅಕ್ಟೋಬರ್‌ 2ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಯದೇವ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಶೀಘ್ರದಲ್ಲಿ ಜಮೀನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿಯನ್ನೂ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಯಡಿಯೂರಪ್ಪ ಶೀಘ್ರವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಇದಾಗಿ 28 ದಿನಗಳಲ್ಲಿ ಜಮೀನು ಮಂಜೂರು ಮಾಡಲು ಸಂಪುಟ ನಿರ್ಧರಿಸಿದೆ. 

‘ಬಡ ಹಾಗೂ ಅನಾಥ ಮಕ್ಕಳಿಗೆ ಅನೌಪ‍ಚಾರಿಕ ಶಿಕ್ಷಣ ನೀಡುವ ಉದ್ದೇಶದಿಂದ ಜಾಗ ನೀಡುವಂತೆ ಏಳು ವರ್ಷಗಳ ಹಿಂದೆಯೇ ಕೇಳಿಕೊಂಡಿದ್ದೆವು. ಅದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಬೇಕಿತ್ತು. ಗುರುವಾರ ಒಪ್ಪಿಗೆ ನೀಡಿರುವುದರಿಂದ ಜಾಗ ಮಂಜೂರು ಆಗುವುದು ಖಚಿತ. ಮಾರುಕಟ್ಟೆ ಮೌಲ್ಯದ ಶೇ 50ರಷ್ಟು ಮೊತ್ತವನ್ನು ನೀಡಲು ನಾವು ಸಿದ್ಧ ಎಂದು ಲಿಖಿತವಾಗಿ ಸರ್ಕಾರಕ್ಕೆ ಬರೆದುಕೊಟ್ಟಿದ್ದೆವು. ಸರ್ಕಾರ  ರಿಯಾಯಿತಿ ದರದಲ್ಲಿ ನೀಡುವ ಭರವಸೆ ಇದೆ’ ಎಂದು ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜಾಗ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿರುವ ವಿಚಾರ ತಿಳಿದಿದೆ. ಅಧಿಕೃತ ಆದೇಶ ಇನ್ನಷ್ಟೇ ಬರಬೇಕಿದೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)