ಸೋಮವಾರ, ಅಕ್ಟೋಬರ್ 21, 2019
23 °C

ಗಾಂಭೀರ್ಯ ವ್ಯಂಗ್ಯಚಿತ್ರದ ಜೀವಾಳ: ಎಂ. ಸಂಜೀವ

Published:
Updated:

ಗುಲ್ಬರ್ಗ: `ವ್ಯಂಗ್ಯಚಿತ್ರ ಕೇವಲ ತಿಳಿಹಾಸ್ಯ, ಕ್ಷಣದ ನಗುವಿನ ಸರಕು ಅಲ್ಲ. ಮಾರ್ಮಿಕವಾದ ಗಂಭೀರ ಚಿಂತನೆ. ಆ ಸಮಯದ ವಾಸ್ತವಕ್ಕೆ ಸ್ಪಂದಿಸಿ ಅಭಿವ್ಯಕ್ತಿಸುವ ಮಾಧ್ಯಮ~ ಎಂಬುದು ವ್ಯಂಗ್ಯಚಿತ್ರಕಾರ ಎಂ.ಸಂಜೀವ ಅಭಿಮತ.ಚೈತನ್ಯಮಯಿ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡ ತಮ್ಮ ವ್ಯಂಗ್ಯ ಚಿತ್ರಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯು ಶನಿವಾರ ಉದ್ಘಾಟನೆಗೊಂಡ ಬಳಿಕ `ಪ್ರಜಾವಾಣಿ~ ಜೊತೆ ಅವರು ಅನುಭವಗಳನ್ನು ಹಂಚಿಕೊಂಡದ್ದು ಹೀಗೆ.80ರ ದಶಕದಲ್ಲಿ ಪದವಿ ಓದುತ್ತಿರುವಾಗಲೇ ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್, `ಪ್ರಜಾವಾಣಿ~ಯ ಬಿ.ವಿ.ರಾಮಮೂರ್ತಿ ಮತ್ತಿತರರ ಪ್ರಭಾವದಿಂದ ಪತ್ರಿಕೋದ್ಯಮಕ್ಕೆ ಬಂದವರು. `ಪ್ರಜಾವಾಣಿ~ಯ ನಾಲ್ಕೂ ನಿಟ್ಟಿನಿಂದ ಕಾಲಂ, ಕ್ರಾಂತಿ, ರಾಯಚೂರ ವಾಣಿ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ರೇಖೆಗಳ ಮೂಲಕವೇ ವಿಡಂಬನೆ ಮೆರೆದವರು. `ಬರೆಯುವ ತುಡಿತ, ಚಿತ್ರಕಲೆಯ ಸ್ಪೂರ್ತಿ ಹಾಗೂ ಪತ್ರಕರ್ತ ಬುದ್ಧಿಗಳ ಸಮಾಗಮದಿಂದ `ವ್ಯಂಗ್ಯ~ಗಳು ಮೂಡಿಬಂದಿವೆ ಎನ್ನುವ ಅವರ ಕೃತಿಗಳಿಗೆ ಜನಜೀವನ, ರಾಜಕಾರಣ, ಪರಿಸರದ ಓರೆಕೋರೆಗಳೇ ಆಹಾರ.`ಸಮಾಜಕ್ಕೆ ಸ್ಪಂದಿಸುವುದೇ ಜೀವನ. ಸಾಮಾನ್ಯ ಮನುಷ್ಯರ ಸಿಟ್ಟು ಮಾತಿಗೆ ಸೀಮಿತಗೊಂಡರೆ, ನಾವು ರೇಖೆಗಳ ಮೂಲಕ ಹೊರಹಾಕುತ್ತೇವೆ. ಆದರೆ ಸೂಕ್ಷ್ಮತೆಯಿಂದ ಕೂಡಿರಬೇಕು.~ ಎನ್ನುವ ಸಂಜೀವರ ಚಿತ್ರಗಳಲ್ಲಿ ಯಡಿಯೂರಪ್ಪ ಬಜೆಟ್ ಬ್ರೀಫ್‌ಕೇಸ್ ಮತಪೆಟ್ಟಿಗೆಯಾದ, ಆರೋಗ್ಯಕರ ರಾಜಕಾರಣಕ್ಕೆ ಅನಾರೋಗ್ಯವೇ ಕಾರಣವಾದ, ನಿವೃತ್ತಿ ವಯಸ್ಸು ಏರಿಕೆಯಿಂದ ಮರೆಗುಳಿ ಹೆಚ್ಚಾದ, ಅಡುಗೆ ಮನೆಗೆ ಆನ್‌ಲೈನ್ ಧಾರವಾಹಿ ಪ್ರಭಾವದ, ಮಕ್ಕಳು ಶಾಲೆ ಬಿಡಲು ವಾಸ್ತು ಕಾರಣವಾದ, ಸೋನಿಯಾ ಬಸ್ ಓವರ್‌ಟೇಕ್ ಮಾಡಿದ ವಾಜಪೇಯಿಯ, ವೈಟುಕೆ ಸಮಸ್ಯೆಯ... ಹೀಗೆ ಆ ಕಾಲದ ದೇಶ ವಿದೇಶದ ರಾಜಕಾರಣದಿಂದ ಹಿಡಿದು ಅಡುಗೆ ಮನೆ ತನಕದ ಸಮಾಜದ ವಿವಿಧ ಮಜಲುಗಳ ವ್ಯಂಗ್ಯಗಳಿವೆ. 80ರ ದಶಕದಿಂದಲೂ ಅಂದಿನ ಗಮನಾರ್ಹ ಸುದ್ದಿಗಳ ಮೇಲೆ ಚಿತ್ರ ಬರೆಯುತ್ತಾ ಬಂದಿದ್ದಾರೆ. ಅವುಗಳಲ್ಲಿನ ಪ್ರಮುಖ ಚಿತ್ರಗಳು ಜ.16ರ ತನಕ ಇಲ್ಲಿ ಪ್ರದರ್ಶನ ಕಾಣಲಿವೆ.ಗುಲ್ಬರ್ಗ ಗಾಜೀಪುರ ಮೂಲದ ಸಂಜೀವ ಆರಂಭದಲ್ಲಿ ಪೆನ್ಸಿಲ್ ಹಾಗೂ ಇಂಡಿಯನ್ ಇಂಕ್ ಮೂಲಕ ಚಿತ್ರ ಬರೆಯುತ್ತಿದ್ದರು. ಈಗ ರೋಟ್ರಿಂಗ್ ಪೆನ್ ಮೂಲಕ ನೇರವಾಗಿ ಚಿತ್ರಿಸುತ್ತಾರೆ. `ತಂತ್ರಜ್ಞಾನದ ವೇಗದಲ್ಲಿ ವ್ಯಂಗ್ಯಚಿತ್ರಕಾರನ ಸ್ವಾತಂತ್ರ್ಯ ಹಾಗೂ ವ್ಯಾಪ್ತಿ ಹೆಚ್ಚಿದೆ. ಆದರೆ `ಜೈಲು ಯಾತ್ರೆ~ಯೇ ಸಾಧನೆಯಾಗಿರುವ ಮುಖಂಡರಿಗೆ ಕಾರ್ಟೂನ್ ಎಷ್ಟು ಕಾಡಬಹುದು~ ಎಂಬ ಪ್ರಶ್ನೆ ಕಾಡುತ್ತದೆ ಎನ್ನುತ್ತಾರೆ ಗೆರೆಗಳ ವ್ಯಂಗ್ಯದ ಸಂಜೀವ (ಮೊ.7760307645).ಅವರ ಕೃತಿಗಳ ಪ್ರದರ್ಶನವನ್ನು ಹಿರಿಯ ಪತ್ರಕರ್ತ ಎಸ್.ಆರ್.ಮಣ್ಣೂರ ಉದ್ಘಾಟಿಸಿದರು. ಪತ್ರಕರ್ತ ಅರವಿಂದ ಕುಲಕರ್ಣಿ, ವೆಂಕಟೇಶ ಚಿತ್ತಾರಿ, ಕಿರಣ್ ಪಾಟೀಲ್ ಮತ್ತಿತರರು ಇದ್ದರು.`ಇದೊಂದು ಅನನ್ಯ ಪ್ರದರ್ಶನ. ಪ್ರಬುದ್ಧ ಕಲಾಕಾರನ ಕೃತಿಗಳು ಪ್ರದರ್ಶನ ಕಾಣುತ್ತಿವೆ. ವಿಷಯಗಳಲ್ಲಿ ಇನ್ನಷ್ಟು ಆಳ ಬಂದಾಗ ಅವರ ಸಾಧ್ಯತೆಯ ವ್ಯಾಪ್ತಿಗೆ ಎಲ್ಲೆ ಇಲ್ಲ~ ಎಂದು ಚೈತನ್ಯಮಯಿ ಆರ್ಟ್ ಗ್ಯಾಲರಿಯ ನಿರ್ದೇಶಕ ಎ.ಎಸ್.ಪಾಟೀಲ                 ಬಣ್ಣಿಸಿದರು.

 

Post Comments (+)