ಬುಧವಾರ, ಜನವರಿ 22, 2020
18 °C

ಕಸದ ರಾಶಿ -ಸಮಸ್ಯೆಯ ಹೊಸ ಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದಲ್ಲಿ ಕಸದ ರಾಶಿ ನಿತ್ಯ-ನೂತನ. ಈ ಸಮಸ್ಯೆಗೆ ಹೊಸ ಸೇರ್ಪಡೆ ಎಂದರೆ ಕಸದ ರಾಶಿಗೆ ಅಲ್ಲಲ್ಲೇ `ಅಧಿಕೃತವಾಗಿ ಸುಟ್ಟು ಹೊಗೆ ಎಬ್ಬಿಸು~ತ್ತಿರುವುದು, ಕಸದ ರಾಶಿಯ ಮಧ್ಯೆ ಚಿಂದಿ ಆಯುವ ಮಕ್ಕಳು ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು.ಹೆಚ್ಚಿದ ಜನಸಂಚಾರ, ಇಕ್ಕಟ್ಟಾದ ಜಾಗ, ರಸ್ತೆ ಬದಿಯಲ್ಲಿ ಹೆಜ್ಜೆಗೊಂದರಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವ ಪುಟ್ಟ ಪುಟ್ಟ ಅಂಗಡಿಗಳ ಸಾಲು, ಪಕ್ಕದಲ್ಲೇ ದೇವಾಲಯ. ಜನರ ಮಧ್ಯೆ ದಿಢೀರನೇ ಸಾಗುವ ವಾಹನಗಳು. ಎಲ್ಲೆಂದರಲ್ಲಿ ಹರಡಿ ಚದುರಿ ಚೆಲ್ಲಿದ ಕಸದ ರಾಶಿ, ದುರ್ವಾಸನೆ.ಇದು ಗುಲ್ಬರ್ಗದ ಹೃದಯ ಭಾಗದಲ್ಲಿರುವ  ಸೂಪರ್ ಮಾರ್ಕೆಟ್‌ನ ಚಿತ್ರಣ. ನಗರದ ಇತರ ಬೀದಿ, ಗಲ್ಲಿಗಳಲ್ಲೂ ಇಂತಹ ದೃಶ್ಯ ಸಾಮಾನ್ಯ.ಮಹಾನಗರನಗರ ಪಾಲಿಕೆ ಹೆಸರಿಗೊಂದು ಕಸದ ತೊಟ್ಟಿಯನ್ನು ಅಲ್ಲಲ್ಲಿ ಇಟ್ಟಿದ್ದಾರೆ. ಆದರೆ ತೊಟ್ಟಿಯೊಳಗೆ ಕಸ ಚೆಲ್ಲುವವರು ಮಾತ್ರ ಇಲ್ಲ. ಮನೆ, ಅಂಗಡಿ ಮುಂಗಟ್ಟುಗಳ ಜನರು ತೊಟ್ಟಿಯ ಹೊರಗೆಯೇ ಕಸ, ತ್ಯಾಜ್ಯ ಚೆಲ್ಲಿ ಮುಂದೆ ಸಾಗುತ್ತಾರೆ. ಇದು ಚಿಂದಿ ಆಯುವ ಮಕ್ಕಳು ಮಹಿಳೆಯರು, ಬೀದಿನಾಯಿಗಳ ಸಾಕಣೆ ಕೇಂದ್ರವಾಗುತ್ತಿದೆ.ಇಷ್ಟೇ ಸಾಲದು ಎಂಬಂತೆ ಇವರೆಲ್ಲ ಹೆಕ್ಕಿ ಉಳಿದ ಕಸವನ್ನು ಪಾಲಿಕೆ ವತಿಯಿಂದ ನೇಮಿಸಿರುವ ಸ್ವಚ್ಛತಾ ಕಾರ್ಮಿಕರು ಪೂರ್ಣವಾಗಿ ಸಾಗಿಸುವ ಬದಲು ಅಲ್ಲಲ್ಲೇ ಬೆಂಕಿ ಹಾಕಿ ಸುಡುತ್ತಾರೆ. ಕೆಲವು ಕಡೆಯಂತೂ ಕಬ್ಬಿಣದ ಕಸದ ತೊಟ್ಟಿ ಕುಲುಮೆಯಂತೆ ಹೊಗೆ ಕಕ್ಕುತ್ತಿರುತ್ತದೆ. ಇದು ಪರಿಸರ ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತಿದೆ.ನಗರದ ಕಸತ್ಯಾಜ್ಯಗಳನ್ನು ಅಲ್ಲಲ್ಲೇ ಸುಡಬಾರದು, ಡಂಪಿಂಗ್ ಯಾರ್ಡ್‌ಗಳಿಗೆ ಸಾಗಿಸಬೇಕು ಎಂಬ ಸರ್ಕಾರಿ ಸೂಚನೆಗಳೂ ಇಲ್ಲಿ ಪಾಲನೆಯಾಗುತ್ತಿಲ್ಲ. ಪಾಲಿಕೆ ಇತ್ತ ಗಮನ ಹರಿಸಿಯೇ ಇಲ್ಲ. ಹದಗೆಟ್ಟ ರಸ್ತೆ, ಕಸ ಸುಟ್ಟ ಹೊಗೆ ಹೊಸ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ.ಮಾರುಕಟ್ಟೆ ಪ್ರದೇಶದಲ್ಲಿ ಹಣ್ಣು, ಹೂ ಮಾರಾಟ ಮಾಡುವ ಹಲವು ಅಂಗಡಿಗಳಲ್ಲಿ ವರ್ತಕರು ವ್ಯವಹಾರ ನಡೆಸುತ್ತಿದ್ದಾರೆ. ಇಲ್ಲಿನ ಸಾರ್ವಜನಿಕರಿಗೆ ಸ್ವಚ್ಛತೆಯ ವಾತಾವರಣ ಗಗನಕುಸುಮ. ಇಂತಹ ಅನಾರೋಗ್ಯಕರ ಪರಿಸರದಲ್ಲಿ ಬದುಕು ಕಷ್ಟಕರ. ಶ್ವಾಸಕೋಶದ ತೊಂದರೆ, ಕೆಮ್ಮು ದಮ್ಮು , ಅಲರ್ಜಿ, ಸಮಸ್ಯೆಗಳಿಗೂ ಕಾರಣವಾಗುತ್ತಿದೆ.`ಕಸ ಸುಡುತ್ತಿರುವುದರಿಂದ ಇಲ್ಲಿ ಕುಳಿತು ಮಾರಾಟ ಮಾಡುವುದಕ್ಕೆ ಆಗೋದಿಲ್ಲ. ಆದರೂ ನಾವು ಇಲ್ಲಿ ಕುಳಿತು ವ್ಯವಹಾರ ಮಾಡಲೇ ಬೇಕು~ ಎಂದು ಹಣ್ಣು ಮಾರಾಟ ಮಾಡುವ ಮಲ್ಲಮ್ಮ ಹೇಳುತ್ತಾರೆ.`ಇದು ಸಿಟಿ. ಇದು ಸ್ವಚ್ಛವಾಗಿ ಇದ್ದರೇನೆ ಚೆಂದ. ವೇಗವಾಗಿ ಬರುವ ವಾಹನಗಳ ಮಧ್ಯೆ ದಾರಿ ಮಾಡಿಕೊಂಡು ನಮ್ಮಂತಹವರು ಹೋಗುವುದೇ ಕಷ್ಟ. ಹಬ್ಬಕ್ಕಾಗಿ ಜನರು ವಸ್ತುಗಳನ್ನು ಖರೀದಿ ಮಾಡುವುದಕ್ಕಾಗಿ ಮಾರ್ಕೆಟ್‌ಗೆ ಬರುತ್ತಾರೆ. ಇಲ್ಲಿನ ಕಸವನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು~ ಎಂದು ಬಸಪ್ಪ ಅಜ್ಜ ತಿಳಿಸಿದರು.`ಸಿಟಿ ತುಂಬ ಕಸ, ತೆರೆದ ಚರಂಡಿ ನೀರು,  ತಗ್ಗು ಗುಂಡಿಗಳಿಂದ ದುರಸ್ತಿಗೊಳ್ಳದ ರಸ್ತೆಗಳು, ತಿಂಗಳುಗಟ್ಟಲೆ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಪರಿಸ್ಥಿತಿ. ಒಟ್ಟಾರೆಯಾಗಿ ನಮ್ಮ ಸಿಟಿಯಲ್ಲಿ ನಾವು ತಿರುಗಾಡುವುದಕ್ಕೆ ಬೇಜಾರಾಗುತ್ತಿದೆ. ನಗರ ತುಂಬ ಕಸದ ರಾಶಿ ಎಂತಲೂ ಕರೆಯಬಹುದು~ ಎಂದು ವಿದ್ಯಾರ್ಥಿ ಸಚಿನ್ ನುಡಿದರು.`ವಾರಕ್ಕೊಮ್ಮೆ ಇದು ಸ್ವಚ್ಛ ಮಾಡುವ ನಂಗೆ ಪ್ರತಿವಾರ 300 ರೂಪಾಯಿ ಸಂಬಳ ಕೊಡುತ್ತಾರೆ. ಕಸದ ರಾಶಿಯ ಮಧ್ಯೆ ಚೆನ್ನಾಗಿರುವ ಪೇಪರ್‌ಗಳನ್ನು ಒಟ್ಟು ಸೇರಿಸಿ ಮಾರಾಟ ಮಾಡುವೆ~ ಎಂದು ಬಾಲಕ ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದ.

 

ಪ್ರತಿಕ್ರಿಯಿಸಿ (+)