ಆಯ್ಕೆ ಪಟ್ಟಿ ರದ್ದತಿಗೆ ಆಗ್ರಹಿಸಿ ಧರಣಿ

7

ಆಯ್ಕೆ ಪಟ್ಟಿ ರದ್ದತಿಗೆ ಆಗ್ರಹಿಸಿ ಧರಣಿ

Published:
Updated:

ಚಿತ್ತಾಪುರ: 2010-11ನೇ ಸಾಲಿನಲ್ಲಿ ತಾಲ್ಲೂಕಿನ ಡಾ. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸಿಗಬೇಕಾದ ನೇರ ಸಾಲ, ಸ್ವಯಂ ಉದ್ಯೋಗ ಹಾಗೂ ಗಂಗಾಕಲ್ಯಾಣ ಯೋಜನೆಯ ಸೌಲಭ್ಯವನ್ನು ಶಾಸಕ ವಾಲ್ಮೀಕ ನಾಯಕ ಕೇವಲ ಲಂಬಾಣಿ ಜನರಿಗೆ ಮಾತ್ರ ಆಯ್ಕೆ ಮಾಡಿ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಆಯ್ಕೆ ಪಟ್ಟಿ ರದ್ದು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಪದಾಧಿಕಾರಿಗಳು ತಹಸೀಲ್ ಕಾರ್ಯಾಲಯದ ಮುಂದೆ ಶುಕ್ರವಾರ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.ತ್ರಿವಿಧ ಯೋಜನೆಯಲ್ಲಿ ಶಾಸಕರು ಪರಿಶಿಷ್ಟ ಜಾತಿ, ಪಂಗಡದಲ್ಲಿ ಬರುವ ಎಲ್ಲಾ ಜಾತಿಗಳ ಜನರಿಗೆ ಸಮಾನವಾಗಿ ಸೌಲಭ್ಯ ನೀಡದೆ ಲಂಬಾಣಿ ಜನರಿಗೆ ಮಾತ್ರ ಆಯ್ಕೆ ಮಾಡಿದ್ದಾರೆ.ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಶಾಸಕರ ಲೆಟರ್ ಪ್ಯಾಡ್ ಮೇಲೆಯೇ ಫಲಾನುಭವಿಗಳ ಆಯ್ಕೆ ಪಟ್ಟಿ ಪ್ರಕಟಿಸಿರುವುದು ನೋಡಿದರೆ ಆಡಳಿತ ಪ್ರಜಾಪ್ರಭುತ್ವ ನೀತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.ಫಲಾನುಭವಿಗಳ ಆಯ್ಕೆ ಸಮಿತಿ ಸಭೆಯಲ್ಲಿ ಪಾಲ್ಗೊಂಡಿರುವ ಸಮಿತಿಯ ಅಧ್ಯಕ್ಷ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು. ಆಗಿರುವ ಅನ್ಯಾಯ ಸರಿಪಡಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ ಕಚೇರಿಯ ಶಿರಸ್ತೇದಾರ್ ಸರಸ್ವತಿ ಅವರಿಗೆ ಸಲ್ಲಿಸಲಾಯಿತು. ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಮಲ್ಲಿಕಾರ್ಜುನ ಬೆಣ್ಣೂರಕರ್, ಸಂಘಟನಾ ಸಂಚಾಲಕರಾದ ರಮೇಶ ಕವಡೆ, ನಾಗೇಂದ್ರ ಅಂಕನ್, ಕಲ್ಯಾಣಿ ಏರಿ, ಜಿಲ್ಲಾ ಸಂಘಟನಾ ಸಂಚಾಲಕ ಭೀಮಾಶಂಕರ ತೇಲ್ಕರ್, ಗುರುನಾಥ ಹಲಕಟ್ಟಿ, ಅಶೋಕ ದೊಡ್ಮನಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry