ಭಾನುವಾರ, ಜನವರಿ 19, 2020
28 °C

ಹಕ್ಕುಪತ್ರ ಬೇಡ; ನಿವೇಶನ ಹಕ್ಕು ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಾಜ್ಯದಲ್ಲಿ ಘೋಷಿತವಾದ 2722 ಕೊಳಚೆ ಪ್ರದೇಶ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದು ಸ್ವಾಗತಾರ್ಹ. ಆದರೆ ಬಡವರನ್ನು ನಿಜವಾಗಿಯೂ ಉದ್ಧಾರ ಮಾಡುವುದು ಸರ್ಕಾರದ ಉದ್ದೇಶವಾಗಿದ್ದರೆ ಕೊಳಚೆ ನಿವಾಸಿಗಳಿಗೆ ಹಕ್ಕುಪತ್ರದ ಬದಲು ನಿವೇಶನ ಹಕ್ಕು ನೀಡಲಿ ಎಂದು ಗುಲ್ಬರ್ಗ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟ ಶುಕ್ರವಾರ ಇಲ್ಲಿ ಆಗ್ರಹಿಸಿತು.ಸರ್ಕಾರವು ಕೊಳಚೆ ಮುಕ್ತ ರಾಜ್ಯ ಮಾಡಲು ಹೊರಟಿದೆಯೊ ಅಥವಾ ಕೊಳಚೆ ಜನ ಮುಕ್ತ ರಾಜ್ಯ ಮಾಡಲು ಹೊರಟಿದೆಯೊ ಎನ್ನುವ ಅನುಮಾನ ಬಂದಿದೆ. ಈಗ ಹಕ್ಕುಪತ್ರ ನೀಡಿ, ಮುಂಬರುವ ದಿನಗಳಲ್ಲಿ ಮಾಸ್ಟರ್ ಪ್ಲ್ಯಾನ್ ಹೆಸರಿನಲ್ಲಿ ಎತ್ತಂಗಡಿ ಮಾಡುವ ಎಲ್ಲಾ ಸಾಧ್ಯತೆ ಇದೆ ಎಂದು ಒಕ್ಕೂಟದ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಗುಲ್ಬರ್ಗ ನಗರದ ಎರಡು ಸೇರಿ ರಾಜ್ಯದಲ್ಲಿ ಇನ್ನು 3021 ಕೊಳಚೆ ಪ್ರದೇಶಗಳು ಘೋಷಣೆಯಾಗದೆ ಉಳಿದಿವೆ. ಇಂಥ ಕಡೆ ಸುಮಾರು 90 ಲಕ್ಷ ಜನರು ವಾಸಿಸುತ್ತಿದ್ದಾರೆ. ದೇಶದಲ್ಲಿ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿರುವವರೆಗೂ ಕೊಳಚೆ ಪ್ರದೇಶಗಳು ಇದ್ದೆ ಇರುತ್ತವೆ. ಗ್ರಾಮಗಳಲ್ಲಿ ಬೇಸತ್ತು ನಗರಕ್ಕೆ ವಲಸೆ ಬರುವವರು ಇದ್ದೆ ಇರುತ್ತರೆ ಎಂದರು.ಕೊಳಚೆ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕಾಯ್ದೆಯಲ್ಲೆ ಅವಕಾಶವಿದೆ. ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಮೂಲಕ ಬಿಜೆಪಿ ಸರ್ಕಾರವು ಮತಬ್ಯಾಂಕ್ ತಂತ್ರ ಅನುಸರಿಸಿದೆ. ಮುಂಬರುವ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಸಮಾವೇಶ ನಡೆಸುವ ಮೂಲಕ ಈ ಬಗ್ಗೆ ಜನಜಾಗೃತಿ ಮಾಡಲಾಗುವುದು. ಫೆಬ್ರುವರಿ ಅಂತ್ಯಕ್ಕೆ ರಾಜ್ಯಮಟ್ಟದ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.ಹನುಮಂತ ಇಟಗಿ, ಬಾಬುರಾವ್ ದಂಡಿನಕರ್, ಶಾಮರಾವ ಶಿಂಧೆ, ಶಿವಕುಮಾರ ದೊಡ್ಡಮನಿ, ಸಂತೋಷಕುಮಾರ ಮೇಲಮನಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)