ಬುಧವಾರ, ಜನವರಿ 22, 2020
16 °C

371ನೇ ವಿಧಿ ತಿದ್ದುಪಡಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತೆಲಂಗಾಣ, ವಿದರ್ಭಕ್ಕೆ ವಿಶೇಷ ಸ್ಥಾನಮಾನ ನೀಡಿರುವಂತೆ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಶಿಕ್ಷಣ ಮತ್ತು ಉದ್ಯೋಗ ಕಲ್ಪಿಸಲು ಸಂವಿಧಾನದ 371ನೇ ಡಿ ವಿಧಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತುರ್ತು ಕ್ರಮ ಜರುಗಿಸಬೇಕು ಎಂದು ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ಇಲ್ಲಿ ಹೇಳಿದರು.ಚಂದ್ರಶೇಖರ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ 63ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಿಶೇಷ ಸ್ಥಾನಮಾನಕ್ಕಾಗಿ ನಡೆಸುವ ಹೋರಾಟಕ್ಕೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲವಿದೆ. ರಾಜ್ಯದ ಕೃಷಿ ವಲಯದಲ್ಲಿ ಶೇ. 6ರಷ್ಟು ಬೆಳವಣಿಗೆಯಾಗಿರುವುದು ಒಂದು ಐತಿಹಾಸಿಕ ದಾಖಲೆ. ಡಾ. ನಂಜುಂಡಪ್ಪ ವರದಿಯನ್ನು ಆಧರಿಸಿ ನಾಲ್ಕು ವರ್ಷಗಳಲ್ಲಿ ರಾಜ್ಯದ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಜಿಲ್ಲೆಗಳಿಗೆ ರೂ. 8,000 ಕೋಟಿ ಬಿಡುಗಡೆ ಮಾಡಿದೆ. ಈ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ, ಕೃಷಿ ಮುಂತಾದ ಕ್ಷೇತ್ರಗಳಿಗೆ ಅದ್ಯತೆ ನೀಡಿ ಜನಜೀವನ ಸುಧಾರಿಸುವುದು ಸರ್ಕಾರದ ಪ್ರಮುಖ ಆಶಯವಾಗಿದೆ ಎಂದರು.ಅಭಿವೃದ್ಧಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಬಂಧ ಗಟ್ಟಿಗೊಂಡು ಪರಸ್ಪರ ಹೊಂದಾಣಿಕೆಯಿಂದ ಇದ್ದರೆ ಮಾತ್ರ ಒಕ್ಕೂಟ ವ್ಯವಸ್ಥೆ ಯಶಸ್ವಿಯಾಗುವುದು. ದೇಶದಲ್ಲಿರುವ ಹೇರಳ ಮಾನವ ಸಂಪನ್ಮೂಲವನ್ನು ಸದೃಢಗೊಳಿಸುವುದು ಅತ್ಯಗತ್ಯವಾಗಿದೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಈ ಸಂದರ್ಭದಲ್ಲಿ ಆಡಳಿತ ಕಾರ್ಯಾಂಗವು ಅಂತಃಕರಣದಿಂದ ಜನರ ಅಭ್ಯುದಯದ ನಿರ್ಣಯಗಳನ್ನು ಕೈಗೊಂಡು ಕಾರ್ಯ ನಿರ್ವಹಿಸಬೇಕು. ಪ್ರಜಾಪ್ರಭುತ್ವ ಯಶಸ್ವಿಯಾಗಲು ಜನ ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಲ್ಲಾಬಾದ್ ಏತನೀರಾವರಿ ಯೋಜನೆ ಸಚಿವ ಸಂಪುಟ ಅನುಮೋದನೆ ನೀಡಿದ್ದು ರೂ. 1500 ಕೋಟಿ ವೆಚ್ಚದ ಈ ಯೋಜನೆಯಿಂದ 50ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಬೀದರ-ಗುಲ್ಬರ್ಗ ರೈಲು ಮಾರ್ಗ ನಿರ್ಮಾಣಕ್ಕಾಗಿ ಗುಲ್ಬರ್ಗ ಜಿಲ್ಲೆಯಲ್ಲಿ ಬೇಕಾಗುವ 937-27 ಎಕರೆ ಭೂಸ್ವಾಧೀನ ಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಗುಲ್ಬರ್ಗ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ನಡೆದಿದ್ದು, ಮೇ ಅಂತ್ಯಕ್ಕೆ ವಿಮಾನಗಳ ಹಾರಾಟ ಪ್ರಾರಂಭವಾಗಲಿದೆ. ಜಿಲ್ಲೆಯಲ್ಲಿ 2009ನೇ ಸಾಲಿನ ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದ ತುತ್ತಾದ 41 ಗ್ರಾಮಗಳಲ್ಲಿ 2607 ಆಸರೆ ಮನೆಗಳ ಪೈಕಿ 2586 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.ಗುಲ್ಬರ್ಗ ಸಚಿವ ಸಂಪುಟದಲ್ಲಿ ಅನುಮೋದನೆಗೊಂಡ ರೂ. 168 ಕೋಟಿ ಮೊತ್ತದ 168 ಕಿ.ಮೀ. ಉದ್ದ 10 ರಸ್ತೆ ಕಾಮಗಾರಿಗಳ ಪೈಕಿ 9 ಕಾಮಗಾರಿಗಳು ಜಿಲ್ಲೆಯಲ್ಲಿ ಪ್ರಗತಿಯಲ್ಲಿವೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತಿ ಕಾರ್ಡಿಗೆ 29 ಕೆ.ಜಿ. ಅಕ್ಕಿ ಮತ್ತು 6 ಕೆ.ಜಿ. ಗೋಧಿ ಸೇರಿದಂತೆ ಒಟ್ಟು 35 ಕೆ.ಜಿ. ಆಹಾರಧಾನ್ಯ ವಿತರಿಸುವ ಯೋಜನೆಯಡಿ ಗುಲ್ಬರ್ಗ ಜಿಲ್ಲೆಯ ಒಟ್ಟು 4.34 ಲಕ್ಷ ಫಲಾನುಭವಿಗಳಿಗೆ ಪ್ರಯೋಜನ ಕಲ್ಪಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಪೊಲೀಸ್ ಮತ್ತು ನಾಗರಿಕ ಪೊಲೀಸ್ ಪಡೆ, ಗೃಹ ರಕ್ಷಕದಳ, ಅಗ್ನಿಶಾಮಕದಳ, ಎನ್.ಸಿ.ಸಿ., ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಶಾಲಾ ಮಕ್ಕಳು, ಅಂಧ ಮಕ್ಕಳ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಒಟ್ಟು 12 ತುಕಡಿಗಳಿಂದ ಪರೇಡ್ ವಂದನೆ ಸ್ವೀಕರಿಸಿದರು.ಸ್ವಾತಂತ್ರ್ಯ ಹೋರಾಟಗಾರರಾದ ಚೋಗಲಾ ಶಾಮು ಪವಾರ, ಭೀಮರಾವ ರೇವಣಸಿದ್ದಪ್ಪ ಕೊಟ್ಟರಗಿ, ಭೀಮಸೇನರಾವ ವೆಂಕಟದಾಸ ಅವರನ್ನು ಹಾಗೂ ಅಖಿಲ ಭಾರತ ಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದ ಎನ್.ಸಿ.ಸಿ. ಕೆಡೆಟ್ ಮಹಾದೇವ ಪಾಟೀಲ್, ಶರಣಕುಮಾರ ಸಾರ್ಜಂಟ್, ಸ್ನೇಹಾ ಗಜೂರೆ, ವಿಜಯಲಕ್ಷ್ಮೀ ಸಿಂಧೆ, ಪುನೀತಕುಮಾರ, ಕಾವ್ಯಾ ಅವರನ್ನು ಸಚಿವ ಬೊಮ್ಮಾಯಿ ಇದೇ ವೇಳೆ ಸನ್ಮಾನಿಸಿದರು.ಸಮಾರಂಭದಲ್ಲಿ ಎಚ್‌ಕೆಎಡಿಬಿ ಅಧ್ಯಕ್ಷ ಅಮರನಾಥ ಪಾಟೀಲ್, ಎಂಎಸ್‌ಐಎಲ್ ಅಧ್ಯಕ್ಷ ವಿಕ್ರಂ ಪಾಟೀಲ್, ಕಾಡಾ ನೀರಾವರಿ ಯೋಜನಾ ವಲಯದ ಅಧ್ಯಕ್ಷ ಗಿರೀಶ್ ಮಟ್ಟಣ್ಣನವರ್, ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ, ವಿಧಾನ ಪರಿಷತ್ ಶಾಸಕ ಅಲ್ಲಂಪ್ರಭು ಪಾಟೀಲ್, ಪ್ರಾದೇಶಿಕ ಆಯುಕ್ತೆ ಕೆ.ರತ್ನಪ್ರಭಾ, ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ ಮಧುಕರ್ ಪವಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ. ವಿಜಯಕುಮಾರ ಮತ್ತಿತರರು ಹಾಜರಿದ್ದರು. ನಂತರ 6 ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಜರುಗಿದ ಆಕರ್ಷಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಮೋಹಕವಾಗಿದ್ದವು.

 

ಪ್ರತಿಕ್ರಿಯಿಸಿ (+)