ಭಾನುವಾರ, ಜನವರಿ 26, 2020
22 °C

ಸ್ವತಂತ್ರ ತಂಡದಿಂದ ಖಾತರಿ ತಪಾಸಣೆ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ವರದಿ

ಗುಲ್ಬರ್ಗ: ಜಿಲ್ಲೆಯಲ್ಲಿ 2009-10ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಗ್ಗೆ ಸ್ವತಂತ್ರ ತಂಡಗಳು ತಪಾಸಣೆ (ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್) ನಡೆಸುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ನಿಯಮಾವಳಿಗೆ ಅನುಸಾರವಾಗಿ ನಿಗದಿತ ಗುಣಮಟ್ಟದ ಕಾಮಗಾರಿ ನಡೆದಿರುವ ಬಗ್ಗೆ ಈ ತಂಡಗಳು ವ್ಯಾಪಕವಾಗಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸಲಿವೆ.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರು ಕೇಳಿ ಬಂದಾಗ, ಈ ಬಗ್ಗೆ ಸ್ವತಂತ್ರ ತಂಡದಿಂದ ತಪಾಸಣೆ ನಡೆಸಲು ನಿರ್ಧರಿಸಲಾಗಿತ್ತು. ಈ ತಂಡಗಳು ನೀಡುವ ವರದಿಯನ್ನು ಆಧರಿಸಿ, ಆಯಾ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಪ್ರತಿಯಾಗಿ ತಪಾಸಣೆ ನಡೆಸುವ ತಂಡಗಳಿಗೂ ತಪಾಸಣಾ ಶುಲ್ಕ ಪಾವತಿ ಮಾಡಲಾಗುತ್ತದೆ.2009-10ನೇ ಸಾಲಿನಲ್ಲಿ ಜಿಲ್ಲೆಯ 179 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 10,579 ಕಾಮಗಾರಿಗಳನ್ನು ಸ್ವತಂತ್ರ ತಂಡದ ತಪಾಸಣೆಗೆ ಒಳಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ಈ ಕಾಮಗಾರಿಗೆ ಸಂಬಂಧಿಸಿದ 130 ಕೋಟಿ ರೂಪಾಯಿ ಬಿಲ್ ಇನ್ನೂ ಪಾವತಿಯಾಗಿಲ್ಲ,ಕಾಮಗಾರಿ ತಪಾಸಣೆ ನಡೆಸಲು ಆಸಕ್ತ ಸಂಸ್ಥೆಗಳನ್ನು ಟೆಂಡರ್ ಮೂಲಕ ಆಹ್ವಾನಿಸಲಾಗಿತ್ತು. ಒಟ್ಟು 13 ಸಂಸ್ಥೆಗಳು ಗುಲ್ಬರ್ಗ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ತೋರಿದ್ದವು. ಈ ಪೈಕಿ ಐದು ಸಂಸ್ಥೆ ಆಯ್ಕೆ ಮಾಡಿ, ಏಳು ತಾಲ್ಲೂಕುಗಳಲ್ಲಿ ಕಾಮಗಾರಿ ತಪಾಸಣೆ ನಡೆಸುವ ಹೊಣೆಯನ್ನು ನೀಡಿದ್ದು, ಕೆಲಸ ಆರಂಭವಾಗಿದೆ.ತಂಡಕ್ಕೆ ಮಾಹಿತಿ ಕೊಡಿ: ಪ್ರತಿ ಸಂಸ್ಥೆಯೂ ಅಗತ್ಯ ಸಂಖ್ಯೆಯ ತಂಡಗಳನ್ನು ರಚಿಸಿಕೊಳ್ಳಲಿದೆ. ಪ್ರತಿ ತಂಡದಲ್ಲಿ ಒಬ್ಬ ಸಿವಿಲ್ ಎಂಜಿನಿಯರ್ ಹಾಗೂ ತಾಂತ್ರಿಕೇತರ ಸಿಬ್ಬಂದಿ ಇರಲಿದ್ದಾರೆ. ಇವರಿಗೆ ಜಿಪಂ ವತಿಯಿಂದ ಈಗಾಗಲೇ ಗುರುತಿನ ಚೀಟಿ ವಿತರಿಸಲಾಗಿದೆ. ಇವರು ಸ್ಥಳಕ್ಕೆ ತೆರಳಿ, ಅಳತೆ ಪುಸ್ತಕ(ಮೆಶರ್‌ಮೆಂಟ್)ದಲ್ಲಿ ನಮೂದಿಸಿರುವ ವಿವರಗಳಿಗೆ ತಕ್ಕಂತೆ ಕಾಮಗಾರಿ ನಡೆದಿದೆಯೇ? ಎಂಬುದನ್ನು ಪರಿಶೀಲಿಸುವರು.ಜಿಯೋ ಸ್ಟ್ಯಾಂಪಿಂಗ್ ಕ್ಯಾಮೆರಾ~ದ ಮೂಲಕ ಆ ಸ್ಥಳದಲ್ಲಿನ ಕಾಮಗಾರಿ ಚಿತ್ರ ತೆಗೆದು, ಸಂಗ್ರಹಿಸಬೇಕು. ಇದರ ಜತೆಗೆ ಜಾಬ್‌ಕಾರ್ಡ್‌ನಲ್ಲಿ ನಮೂದಿಸಲಾದ ವಿವರಗಳನ್ನೂ ದಾಖಲೆಯೊಂದಿಗೆ ಹೋಲಿಕೆ ಮಾಡಬೇಕು. ಕಾಮಗಾರಿ ಬಗ್ಗೆ ತಂಡಕ್ಕೆ ಬೇಕಾದ ಎಲ್ಲ ಮಾಹಿತಿಯನ್ನೂ ನೀಡುವಂತೆ ಈಗಾಗಲೇ ಗ್ರಾಪಂ ಕಾರ್ಯದರ್ಶಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

 

ತಪಾಸಣಾ ಶುಲ್ಕ: ಕಾಮಗಾರಿ ತಪಾಸಣೆ ನಡೆಸುವ ಸಂಸ್ಥೆಗಳಿಗೆ ಶೇ. 0.6ರಷ್ಟು ಶುಲ್ಕ ನೀಡಲಾಗುತ್ತಿದೆ. ಅಂದರೆ, ಅಳತೆ ಪುಸ್ತಕ(ಎಂ.ಬಿ)ಯಲ್ಲಿ ನಮೂದಾಗಿರುವ ವಿವರಗಳನ್ನು ಪರಿಶೀಲಿಸಿ, ನಡೆದ ಕಾಮಗಾರಿ ಮೊತ್ತದ ಶೇ. 0.6ರಷ್ಟು ಮೊತ್ತವನ್ನು ಶುಲ್ಕದ ರೂಪದಲ್ಲಿ ಪಾವತಿ ಮಾಡಲಾಗುತ್ತದೆ.“ಜಿಲ್ಲಾ ಪಂಚಾಯಿತಿ ವತಿಯಿಂದ ಮೂರು ಸಭೆಗಳನ್ನು ಆಯೋಜಿಸಿ, ಕಾಮಗಾರಿ ತಪಾಸಣೆ ಕುರಿತಂತೆ ಸಂಸ್ಥೆಗಳ ಪ್ರತಿನಿಧಿಗಳ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ. 55 ದಿನಗಳಲ್ಲಿ ಕಾಮಗಾರಿಗಳ ತಪಾಸಣೆ ನಡೆಸಿ, ನಮಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದೇವೆ” ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ವಿಜಯಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)