ದೀಪಕನಾಗ್ ಜಿಪಂ ಅಧ್ಯಕ್ಷ: ವಿಜಯೋತ್ಸವ

7

ದೀಪಕನಾಗ್ ಜಿಪಂ ಅಧ್ಯಕ್ಷ: ವಿಜಯೋತ್ಸವ

Published:
Updated:

ಚಿಂಚೋಳಿ: ತಾಲ್ಲೂಕಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಎರಡನೇ ಬಾರಿಗೆ ಒಲಿದಿದೆ, ನೂತನವಾಗಿ ಅಧ್ಯಕ್ಷ(ಎರಡನೇ)ರಾದ ಹಿರಿಮೆಗೆ ಚಿಂಚೋಳಿ ವಿಧಾನ ಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ತಾಲ್ಲೂಕಿನ ಐನೋಳ್ಳಿ ಕ್ಷೇತ್ರದ ಸದಸ್ಯ ದೀಪಕನಾಗ್ ಶಶಿಧರ ಪುಣ್ಯಶೆಟ್ಟಿ ಪಾತ್ರರಾದರೆ, ಮೊದಲ ಬಾರಿಗೆ ಅಧ್ಯಕ್ಷರಾದ ಖ್ಯಾತಿ ಗಾರಂಪಳ್ಳಿಯ ನೀಲಕಂಠರಾವ್ ದೇಶಮುಖ್ ಅವರಿಗೆ ಸಲ್ಲುತ್ತದೆ.ಕಳೆದ ಸೆ.8,9ರಂದು ಕೊಂಚಾವರಂ ಕಾಡು ವೀಕ್ಷಿಸುವ ನೆಪ ಮಾಡಿಕೊಂಡು ಜಿಲ್ಲಾ ಪಂಚಾಯಿತಿಯ ಹಲವು ಬಿಜೆಪಿ ಸದಸ್ಯರು ಇಲ್ಲಿಗೆ ಸಮೀಪದ ಪೋಲಕಪಳ್ಳಿಯ ಪ್ರವಾಸಿ ಮಂದಿರದಲ್ಲಿ ಎರಡು ದಿನ ರಹಸ್ಯ ಸಭೆ ನಡೆಸಿ ಅಂದಿನ ಅಧ್ಯಕ್ಷ ಶಿವಪ್ರಭು ಪಾಟೀಲ ಪದಚ್ಯುತಿಗೆ ಹೆಣೆದ ರಣತಂತ್ರ ಅದೇ ಪಕ್ಷಕ್ಕೆ ಮುಳುವಾಯಿತು. ಜತೆಗೆ ದುರ್ಬಲ ನಾಯಕತ್ವಕ್ಕೂ ಕನ್ನಡಿಯಾಯಿತು.ಶಿವಪ್ರಭು ಪಾಟೀಲ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಕಾಂಗ್ರೆಸ್‌ನಿಂದ ಎದುರಾಳಿಯಾಗಿ ನಾಮಪತ್ರ ಸಲ್ಲಿಸಿದ್ದ ದೀಪಕನಾಗ್ ಪುಣ್ಯಶೆಟ್ಟಿ ಪರಾಭವಗೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಅದೇ ಗದ್ದುಗೆ ದೀಪಕನಾಗ್‌ರನ್ನು ಹುಡುಕಿಕೊಂಡು ಬಂದಿದೆ!.ಚಿಂಚೋಳಿಯಿಂದಲೇ ಆರಂಭವಾಗಿದ್ದ ಶಿವಪ್ರಭು ಪಾಟೀಲ ವಿರುದ್ಧದ ಭಿನ್ನಮತ ಕೊನೆಗೆ ಪಾಟೀಲರನ್ನು ಕೆಳಗಿಳಿಸಿ ಚಿಂಚೋಳಿ ತಾಲ್ಲೂಕಿನವರನ್ನು ಅದೇ ಕುರ್ಚಿಯಲ್ಲಿ ಕೂಡಿಸುವಲ್ಲಿ ಸಫಲರಾಗಿದ್ದು ಚಿಂಚೋಳಿ ಮಣ್ಣಿನ ವಿಶೇಷ ಎನ್ನುವಂತಾಗಿದೆ.ಪಕ್ಷದ ಸದಸ್ಯರಲ್ಲಿ ಮನೆ ಮಾಡಿದ್ದ ಅಸಮಾಧಾನದ ಹೊಗೆ ನಿವಾರಿಸುವಲ್ಲಿ ಬಿಜೆಪಿ ನಾಯಕರು ತೋರಿದ ನಿರ್ಲಕ್ಷದಿಂದಾಗಿ ಪಾಟೀಲ ಅಧಿಕಾರ ಕಳೆದುಕೊಂಡರೇ, ಅಚ್ಚರಿಯ ಜತೆಯಲ್ಲಿಯೇ ನಿರೀಕ್ಷಿತವೂ ಆಗಿದ್ದ ಅಧ್ಯಕ್ಷ ಸ್ಥಾನ 24ರ ಹರೆಯದ ದೀಪಕನಾಗ್ ಅಲಂಕರಿಸುವಂತಾಗಿದೆ. ಅವಿವಾಹಿತರಾದ ದೀಪಕನಾಗ್ ಜಿಲ್ಲಾ ಪಂಚಾಯಿತಿ ಮೆಟ್ಟಿಲೇರಿದ ಒಂದೇ ವರ್ಷದಲ್ಲಿ ಅಧ್ಯಕ್ಷ ಗಾದಿ ಹತ್ತಿದ್ದು, ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಅತಿ ಚಿಕ್ಕವಯಸ್ಸಿನ ಅಧ್ಯಕ್ಷ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.

ಮಾಜಿ ಸಿ.ಎಂ ಧರ್ಮಸಿಂಗ್, ಡಾ, ಅಜಯಸಿಂಗ್, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ಕೈಲಾಸನಾಥ ಪಾಟೀಲ್, ನಿತಿನ್ ಗುತ್ತೇದಾರ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನೆರವಿನೊಂದಿಗೆ ಕೆಂಪು ದೀಪದ ಗೂಟದ ಕಾರಿನಲ್ಲಿ ಪಯಣಿಸುವ ಸುಯೋಗ ತಾಲ್ಲೂಕಿನ ಐನೋಳ್ಳಿಯ ಸದಸ್ಯನ ಹೆಗಲೆರಿದೆ.ಬೆಂಬಲಿಗರ ವಿಜಯೋತ್ಸವ: ದೀಪಕನಾಗ್ ಅಧ್ಯಕ್ಷರಾಗಿ ಆಯ್ಕೆಯಾದ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಚಂದಾಪುರದಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಷೀತ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಉಮಾ ಪಾಟೀಲ್, ಬಸವಣ್ಣ ಪಾಟೀಲ್, ಲಕ್ಷ್ಮಣ ಆವುಂಟಿ, ರಾಮಶೆಟ್ಟಿ ಪವಾರ್, ಜಗದೀಶ ಠಾಕೂರು, ಜಗನ್ನಾಥ ಈದಲಾಯಿ, ಕೆ.ಎಂ ಬಾರಿ, ರಾಮಶೆಟ್ಟಿ ಕೋರಿ, ರಾಜು ನವಲೆ ಮನೋಹರ ದೇಗಲಮಡಿ, ವಿಜಯಕುಮಾರ ಗಂಗನಪಳ್ಳಿ, ಜಗದೇವ ಗೌತಮ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry