ಪಾಲಿಕೆ ಕಚೇರಿ ನೈರ್ಮಲ್ಯ ಮಾದರಿ?

7

ಪಾಲಿಕೆ ಕಚೇರಿ ನೈರ್ಮಲ್ಯ ಮಾದರಿ?

Published:
Updated:

ಗುಲ್ಬರ್ಗ: `ಮನೆ ಸ್ವಚ್ಛವಾಗಿಟ್ಟುಕೊಳ್ಳದವರು ಊರು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವೆ?~ ಈ ಮಾತು ಮಹಾನಗರ ಪಾಲಿಕೆಗೆ ಅಕ್ಷರಶಃ ಒಪ್ಪುತ್ತದೆ. ನಗರದ ನೈರ್ಮಲ್ಯವನ್ನು ಕಾಪಾಡಬೇಕಾದ ಪಾಲಿಕೆ ಕಚೇರಿಯೇ ಸ್ವಚ್ಛವಾಗಿಲ್ಲ. ಕಚೇರಿಯ ಮೂಲೆ ಮೂಲೆಯಲ್ಲೂ ಗುಟ್ಕಾ, ತಂಬಾಕು ತಿಂದು ಉಗುಳಿದ ಕಲೆ ಹಾಗೂ ಕಚೇರಿಯ ಸುತ್ತ  ಕಲ್ಲು, ಇಟ್ಟಿಗೆ, ಬೇಡವಾದ ಕಾಗದಪತ್ರಗಳ ತ್ಯಾಜ್ಯದ ರಾಶಿ, ಕಚೇರಿಯ ಎರಡನೇ ಮಹಡಿಯಲ್ಲಿ ಬಿರುಕು ಬಿಟ್ಟ ಗೋಡೆ, ಪಾಲಿಕೆಯ ಲೆಕ್ಕಾಧಿಕಾರಿ ಶಾಖೆಯ ಕೊಠಡಿಯಲ್ಲೇ ಗುಟ್ಕಾ ತಿಂದು ಉಗುಳಿದ್ದಾರೆ.ಈ ಎಲ್ಲವನ್ನು ನೋಡುತ್ತಿದ್ದರೆ ಇದು ಮಹಾನಗರ ಪಾಲಿಕೆ ಕಚೇರಿಯೇ ಎಂಬ ಅನುಮಾನ ಸಹಜವಾಗಿ ಎಂಥವರಿಗೂ ಬಂದು ಬಿಡುತ್ತದೆ.ಪಾಲಿಕೆಯ ಮೆಟ್ಟಿಲುಗಳನ್ನು ಒಮ್ಮೆ ಹತ್ತಿ ಇಳಿದರೆ ಗುಟ್ಕಾ ತಿಂದು ಉಗುಳಿದ ಗಬ್ಬುವಾಸನೆ ಮೂಗಿಗೆ ಬಡಿಯುತ್ತದೆ. ಗೋಡೆಯ ಮೇಲಿರುವ ಮೂಲೆಗಳಿಗೆ ಕಣ್ಣು ಹಾಯಿಸಿದರೆ ಜಾಡು ದರ್ಶನ. ಅಲ್ಲದೆ ಮುಖ್ಯಲೆಕ್ಕಾಧಿಕಾರಿ ವಿಭಾಗದ ಪಕ್ಕವೇ ಮುರಿದ ಟ್ರೆಜರಿ, ಕುರ್ಚಿ ಇತರೆ ವಸ್ತುಗಳು ಅನಾಥವಾಗಿ ಬಿದ್ದಿವೆ.ಕಚೇರಿಯ ಅಂದಕ್ಕಾಗಿ ಬಳಿಸಿದ ಗಿಡಗಳ ಕುಂಡದಲ್ಲಿ ಗುಟ್ಕಾ, ತಂಬಾಕು ಪೊಟ್ಟಣಗಳು ಸಾಮಾನ್ಯವಾಗಿವೆ. ಅವ್ಯವಸ್ಥೆ ಶೌಚಾಲಯವನ್ನೂ ಬಿಟ್ಟಿಲ್ಲ. ಆರೋಗ್ಯಾಧಿಕಾರಿ ವಿಭಾಗದ ಎದುರು ಕಲ್ಲುಗಳ ರಾಶಿಯಲ್ಲಿ ಬಿದ್ದ ಹಳೆ ಪೇಪರ್, ಪ್ಲಾಸ್ಟಿಕ್, ಬೀಡಿ, ಸಿಗರೇಟ್ ಸೇವಿಸಿ ಬಿಸಾಡಿರುವ ತ್ಯಾಜ್ಯಗಳು ತಕ್ಷಣ ಗೋಚರಿಸುತ್ತವೆ.ಇವೆಲ್ಲವನ್ನು ಒಂದು ಕ್ಷಣ ನೋಡಿದರೆ ಎಂಥವರಿಗೂ ವಾಕರಿಕೆ ಬರುವುದಂತೂ ಸತ್ಯ. ಇಷ್ಟೆಲ್ಲ ಹುಳುಕುಗಳನಿಟ್ಟುಕೊಂಡಿರುವ ಪಾಲಿಕೆ ಗುಲ್ಬರ್ಗವನ್ನು ಒಂದು ಸುಂದರ ನಗರವನ್ನಾಗಿರಿಸಲು ಸಾಧ್ಯವೇ ಎಂಬ ಪ್ರಶ್ನೆ ನಾಗರಿಕರದ್ದಾಗಿದೆ.`ಈ ಪಾಲಿಕೆಗೆ ಅನೇಕ ಬಾರಿ ಬಂದಿದ್ದೇನೆ. ಇಲ್ಲಿ ಕಸ ಕಡ್ಡಿಗಳು, ಗುಟ್ಕಾ, ತಂಬಾಕು ತಿಂದು ಉಗುಳುವುದು ಸಾಮಾನ್ಯವಾಗಿದೆ. ಸ್ಚಚ್ಛತೆಯನ್ನು ಕಾಪಾಡುವಂತೆ ನಾಮಫಲಕಗಳು ಎಲ್ಲ ವಿಭಾಗದ ಮುಂದೆ ಹಾಕಿರಬೇಕಿತ್ತು. ಆದರೆ ಆ ಕಾರ್ಯ ಇದುವರೆಗೂ ಆಗಿಲ್ಲ. ಪಾಲಿಕೆಗೆ ಯಾರು ಹೇಳೋರು ಕೇಳೋರು ಇಲ್ಲದಿರುವುದರಿಂದ ಹೀಗಾಗಿದೆ ಎಂದು ಕಾರ್ಯನಿಮಿತ್ತ ಪಾಲಿಕೆಗೆ ಬಂದಿದ್ದ ವಾಸುದೇವ ತಿಳಿಸಿದರು.`ನಗರದ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಹೊತ್ತ ಪಾಲಿಕೆಗೆ ಈಗ ಸ್ವಚ್ಛತೆಯೆ ದೂರವಾಗಿದೆ. ತಮ್ಮ ಕಚೇರಿಯನ್ನೆ ಸ್ವಚ್ಛವಾಗಿಟ್ಟುಕೊಳ್ಳದ ಇವರು ಇನ್ನು ಊರನ್ನು ಹೇಗೆ ಸ್ವಚ್ಛವಾಗಿಟ್ಟಾರು ಎಂದು ಮಹಿಳೆಯೊಬ್ಬರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry