ಮನತಣಿಸಿದ ಬಸವ ಕಲಾಲೋಕ

7

ಮನತಣಿಸಿದ ಬಸವ ಕಲಾಲೋಕ

Published:
Updated:

ಗುಲ್ಬರ್ಗ: ಆ ತಂಡದ 11 ಜನ ಸದಸ್ಯರು ಸೇರಿ ವಚನ, ದೇಶಭಕ್ತಿ ಗೀತೆ, ಜಾನಪದ ಗೀತೆ, ದಾಸರ ಪದಗಳನ್ನು ಹಾಡುತ್ತ, ಕುಣಿಯುತ್ತ ವಾದ್ಯ ನುಡಿಸುತ್ತಿದ್ದರೆ ಅಲ್ಲಿ ಕುಳಿತಿದ್ದವರೆಲ್ಲರ ಮೈ ರೋಮಾಂಚನಗೊಳ್ಳುತ್ತಿತ್ತು.ಹಾರ್ಮೋನಿಯಂ, ತಬಲಾ, ಡೋಲಕ್, ಡಗ್ಗ, ದಮ್ಮಡಿ, ಗುಮ್ಮರಿ, ತಾಳಗಳನ್ನು ಬಳಸಿ ಹಾಡಿಗೆ ತಕ್ಕ ವಾದ್ಯ, ವಾದ್ಯಕ್ಕೆ ತಕ್ಕ ನೃತ್ಯ ಮಾಡಿ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾದರು.ವಚನದಲ್ಲಿ ನಾಮಾಮೃತ ತುಂಬಿ ಎಂಬ ವಚನ, ಇದೇ ನಮ್ಮ ನಾಡು. ಧೀರ, ಶೂರರು ಆಳಿದ ನಾಡು, ಕನ್ನಡದ ಶರಣರ ಬೀಡು ಎನ್ನುವ ದೇಶಭಕ್ತಿ ಗೀತೆ, ಅತ್ತಿ ಮನೆಯ ಸೊಸೆಯವ್ವ ನಾನು. ಬಹಳ ಸಣ್ಣಾಕಿ ಎನ್ನುವ ಜನಪದ ಹಾಡು, ಅಂಬಿಗ ನಾನು ನಿನ್ನ ನಂಬಿದೆ. ಜಗದಂಬಾ ರಮಣ ನಾ ನಿನ್ನ ನಂಬಿದೆ ಎನ್ನುವ ದಾಸರ ಹಾಡನ್ನು ಹಾಡುವುದರ ಜೊತೆಗೆ ಹಾಡಿನ ಕೊನೆಯಲ್ಲಿ ಸರಳ ರೀತಿಯಲ್ಲಿ ನಿಂತಲ್ಲೆ ನೃತ್ಯ ಮಾಡುವ ಮೂಲಕ ಮಕ್ಕಳ ಮನರಂಜಿಸಿದರು.ನಗರದ ಸರ್ವಜ್ಞ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದಾವಣಗೆರೆಯ ಬಸಾಪುರದ ಬಸವ ಕಲಾ ಲೋಕ ತಂಡದವರು ವಿವಿಧ ಕಲಾ ಪ್ರಕಾರಗಳನ್ನು ನೆರೆದವರ ಮುಂದಿಟ್ಟು ಭೇಷ್ ಅನಿಸಿಕೊಂಡರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಸವ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷೆ ವಿಲಾಸವತಿ ಖೂಬಾ, ಅನಸೂಯಾ ಸೋಮಣ್ಣ ನಡಕಟ್ಟಿ ಮಾತನಾಡಿ, ಯುವ ಜನಾಂಗದಲ್ಲಿ ನೈತಿಕತೆ ಮತ್ತು ಏಕಾಗ್ರತೆ ತುಂಬಲು ಇಂತಹ ಕಾರ್ಯಕ್ರಮಗಳು ನೆರವಾಗಲಿದ್ದು, ಮಾನಸಿಕ ರೋಗಗಳನ್ನು ಸಹ ಇಂತಹ ಕಾರ್ಯಕ್ರಮಗಳಿಂದ ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.ಸಂಸ್ಥೆಯ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ ಕುರಕುಂದಾ ಸ್ವಾಗತಿಸಿದರು. ಡಾ. ಗಂಗಾಧರ ಬಡಿಗೇರ ನಿರೂಪಿಸಿದರು. ಪ್ರಾಚಾರ್ಯ ಎಂ.ಸಿ. ಕಿರೇದಳ್ಳಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry