ಯಾರು ಹಿತವರು ನಿಮಗೆ...

7

ಯಾರು ಹಿತವರು ನಿಮಗೆ...

Published:
Updated:

ಗುಲ್ಬರ್ಗ: ಇಲ್ಲಿನ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್‌ಕೆಇ ಸಂಸ್ಥೆ) ಆಡಳಿತ ಮಂಡಳಿಗೆ ಮಾರ್ಚ್ 18ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸಂಸ್ಥೆಯ ಹಾಲಿ -ಮಾಜಿ ಅಧ್ಯಕ್ಷರುಗಳು ಹಾಗೂ ಇನ್ನಿತರ ಸದಸ್ಯರು ತೀವ್ರ ಕಸರತ್ತು ನಡೆಸುತ್ತಿರುವ ಅಂಶ ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಚುನಾವಣೆ ತಾಲೀಮು ಆರಂಭವಾಗಿದ್ದು, ಖಾಸಗಿಯಾಗಿ ಔತಣಕೂಟ, ಸಭೆ, ಸಮಾರಂಭ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಸಂಸ್ಥೆಯ ಹಾಲಿ ಅಧ್ಯಕ್ಷ ಶಶೀಲ ಜಿ. ನಮೋಶಿ, ಹಾಲಿ ಉಪಾಧ್ಯಕ್ಷ ಡಾ. ಸೂರ್ಯಕಾಂತ ಪಾಟೀಲ, ಮಾಜಿ ಅಧ್ಯಕ್ಷರಾದ ಡಾ. ಬಿ.ಜಿ. ಜವಳಿ, ಬಸವರಾಜ ಭೀಮಳ್ಳಿ,  ಶಿವಾನಂದ ಮಾನಕರ ಮುಂತಾದವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದು, ಮತದಾರರ ಮನವೊಲಿಸುವ ಕಾರ್ಯದಲ್ಲಿ ತೊಡಗಿರುವುದಾಗಿ ತಿಳಿದುಬಂದಿದೆ.  ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಡಾ. ಬಿ.ಜಿ. ಜವಳಿ ಈಗಾಗಲೇ ಐದು ಬಾರಿ ಅಧ್ಯಕ್ಷ ಪದವಿಯನ್ನು ಅನುಭವಿಸಿದ್ದು, ಮೂರು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಸವರಾಜ ಭೀಮಳ್ಳಿ  ಕಳೆದ ಬಾರಿ ಶಶೀಲ ನಮೋಶಿ ವಿರುದ್ಧ ಸೋಲು  ಅನುಭವಿಸಿದ್ದರು.ಹಾಲಿ ಅಧ್ಯಕ್ಷ ಶಶೀಲ ಜಿ. ನಮೋಶಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಉಪಾಧ್ಯಕ್ಷರಾಗಿರುವ ಡಾ. ಸೂರ್ಯಕಾಂತ ಪಾಟೀಲ ಬಹಿರಂಗವಾಗಿಯೇ ಆರೋಪಿಸುತ್ತ ಮತದಾರರ ಬಳಿ ತೆರಳುತ್ತಿದ್ದಾರೆ. ಬಹುಶಃ ಉದ್ಯಮಿ ಬಿ.ಜಿ.ಪಾಟೀಲ ಅವರು ಸೂರ್ಯಕಾಂತ ಪಾಟೀಲ ಅವರಿಗೆ  ಬೆಂಬಲ ನೀಡಿ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.ಇನ್ನುಳಿದಂತೆ ಶಿವಾನಂದ ಮಾನಕರ ಮತ್ತಿತರರು ಕೂಡ ತಾವೂ ಒಂದು ಕೈ ನೋಡಬಾರದೇಕೆ? ಎಂಬ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.ಈ ಮಧ್ಯೆ ಬಸವರಾಜಪ್ಪ ಅಪ್ಪ ಅವರ ಬಳಿ ಕೆಲವರು ತೆರಳುವ ಮೂಲಕ `ನಿಮ್ಮಂಂಥವರು ಈ ಸಂಸ್ಥೆಗೆ ಅಧ್ಯಕ್ಷರಾಗಬೇಕು. ನೀವೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ~ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರು ನಿರಾಕರಿಸುತ್ತಿದ್ದಾರೆ   ಎನ್ನಲಾಗುತ್ತಿದೆ.ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಬಯಸಿರುವ ಇವರು 13 ಜನರ ಒಂದೊಂದು ಪೆನಲ್ ಕಟ್ಟಿಕೊಳ್ಳಲು ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಸದ್ಯ 907 ಮತದಾರರನ್ನು ಹೊಂದಿರುವ ಹೈ.ಕ. ಶಿಕ್ಷಣ ಸಂಸ್ಥೆ ಅಡಿಯಲ್ಲಿ ಬೆಂಗಳೂರು, ಗುಲ್ಬರ್ಗ, ಬೀದರ್, ಸುರಪುರ, ಶಹಾಬಾದ್, ಚಿಂಚೋಳಿ, ನಿಂಬರ್ಗಾ, ಕಮಲಾಪುರದಲ್ಲಿ ವಸತಿ ನಿಲಯ, ಶಾಲಾ-ಕಾಲೇಜು ಸೇರಿದಂತೆ ವಿವಿಧ ಕೋರ್ಸ್‌ಗಳ  42 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಮಾಜಿ ಮುಖ್ಯಮಂತ್ರಿ ದಿ. ನಿಜಲಿಂಗಪ್ಪನವರ ಸಲಹೆ ಮೇರೆಗೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಜಿ.ಎನ್. ನಾಗರಾಜರಾವ ಮತ್ತು ಮಹಾದೇವಪ್ಪ ರಾಂಪುರೆ ಅವರು ರೈತರ ನೆರವಿನೊಂದಿಗೆ ಆರಂಭಿಸಿರುವ ಈ ಶಿಕ್ಷಣ ಸಂಸ್ಥೆ ತೀರಾ    ಅವಸಾನದ ಅಂಚಿಗೆ ತಲುಪಿದ್ದು, ಪ್ರಾಮಾಣಿಕತೆಯಿಂದ ಕೆಲಸ ಮಾಡುವ ವ್ಯಕ್ತಿಗಳ      ಆಯ್ಕೆಯಾಗಬೇಕು ಎಂಬುದು ಸಾಮಾನ್ಯ ಮತದಾರರ ಅನಿಸಿಕೆಯಾಗಿದೆ.ಚುನಾವಣೆ ನಡೆಯುವ ದಿನಾಂಕವನ್ನು ಫೆ. 19ರಂದು ಸಂಸ್ಥೆಯ ಕಚೇರಿಯಲ್ಲಿ ಶಶೀಲ ನಮೋಶಿ                    ನೇತೃತ್ವದಲ್ಲಿ ನಡೆಯಲಿರುವ ಆಡಳಿತ   ಮಂಡಳಿಯ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry