ಖಬರಸ್ಥಾನದಿಂದ ಮೂರು ಶವ ಕಳವು

7

ಖಬರಸ್ಥಾನದಿಂದ ಮೂರು ಶವ ಕಳವು

Published:
Updated:

ದೇವದುರ್ಗ: ಪಟ್ಟಣದ ಪೊಲೀಸ್ ಠಾಣೆಯ ಪಕ್ಕದ ಮುಸ್ಲಿಂ ಸಮುದಾಯದ ಖಬರಸ್ಥಾನದಲ್ಲಿದ್ದ ಗೋರಿ ಅಗೆದು ಪುರುಷರ ಎರಡು ಮತ್ತು ಶಿಶುವಿನ ಒಂದು ಶವವನ್ನು ಸೋಮವಾರ ರಾತ್ರಿ ಕೆಲವು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ನಡೆದಿದೆ. ಈ ಕುರಿತು ಮುಸ್ಲಿಂ ಒಕ್ಕೂಟ ಸಮಿತಿ ದೂರು ಸಲ್ಲಿಸಿದೆ.ಪಟ್ಟಣ ಪಾಶಾ ಶಹಪೂರಿ ಮೃತಪಟ್ಟ ಹಿನ್ನೆಲೆಯಲ್ಲಿ ಖಬರಸ್ಥಾನದಲ್ಲಿ ನೆಲ ಅಗೆಯುವುದಕ್ಕಾಗಿ ಸ್ಥಳ ಗುರುತಿಸಲು ಬಿಜೆಪಿ ಮುಖಂಡ ಯುನೂಸ್ ಶಹಪೂರಿ ಮಂಗಳವಾರ ಮುಂಜಾನೆ ಖಬರಸ್ಥಾನಕ್ಕೆ ತೆರಳಿದ್ದರು. ಆಗ ಮೂರು ಗೋರಿಗಳನ್ನು ಅಗೆದಿರುವುದನ್ನು ಕಂಡು ಜಾಮೀಯಾ ಮಸೀದಿ  ಸಮಿತಿಯ ಅಧ್ಯಕ್ಷ ಅನ್ವರ್ ಹುಸೇನ್ ಕಟಕಟಿ ಅವರಿಗೆ ವಿಷಯ ತಿಳಿಸಿದರು.ಘಟನೆ ಹಿನ್ನೆಲೆ: ಶಿವರಾತ್ರಿಯ ಹಬ್ಬದ ದಿನವಾದ ಸೋಮವಾರ ತಡರಾತ್ರಿ ಹತ್ತಕ್ಕಿಂತ ಹೆಚ್ಚು ಜನರ ತಂಡ ಖಬರಸ್ಥಾನಕ್ಕೆ ಹೋಗಿದೆ. ಖಬರಸ್ಥಾನದ ಗೇಟ್‌ನಿಂದ ಕೆಲವೇ ಅಡಿ ಅಂತರದಲ್ಲಿ 15 ದಿನಗಳ ಹಿಂದೆ ಮೃತಪಟ್ಟಿದ್ದ ಹಸುಗೂಸಿನ ಗೋರಿ ಅಗೆದು ಶವವನ್ನು ಹೊರ ತೆಗೆದು ಪಕ್ಕದಲ್ಲಿ ನೀರಿನಿಂದ  ತೊಳೆದಿರುವುದು ಕಂಡುಬಂದಿದೆ.ನಂತರ ಸ್ವಲ್ಪ ದೂರದಲ್ಲಿ ಎರಡು ವರ್ಷದ ಹಿಂದೆ ಮೃಪಟ್ಟಿದ್ದ ಜಹೀರುದ್ದೀನ್ ಗೋರಿ ಅಗೆಯಲಾಗಿದೆ. ಅಗೆದ ಮಣ್ಣಿನಲ್ಲಿ ಶವದ ಕೆಲವು ಎಲುಬು, ಮದ್ಯದ ಬಾಟಲು ಮತ್ತು ಕಡ್ಲೆ ಬೇಳೆ ಬಿದ್ದಿರುವುದು ಕಂಡುಬಂದಿದೆ. ಸ್ವಲ್ಪ ದೂರದಲ್ಲಿ ಮೂರು ವರ್ಷದ ಹಿಂದೆ ಮೃತರಾಗಿದ್ದ ಪೊಲೀಸ್ ಖಾಜಾ ಮೈನುದ್ದೀನ್ ನಾಗುಂಡಿ ಗೋರಿಯನ್ನು ಅರೆಬರೆಯಾಗಿ ಅಗೆದು ಬಿಟ್ಟಿರುವುದು ಕಂಡುಬಂದಿದೆ.ನಿಧಿ: ಖಬರಸ್ಥಾನದ ಪಕ್ಕದಲ್ಲಿನ ಡಾನ್ ಬಾಸ್ಕೋ ವಿದ್ಯಾ ಸಂಸ್ಥೆಯ ಎದುರು ಹಿಂದುಗಳ ರುದ್ರಭೂಮಿಯಲ್ಲಿ ನಾಲ್ಕು ಅಡಿ ಎತ್ತರದಲ್ಲಿ ಪ್ರತ್ಯೇಕವಾಗಿ ಗುಂಡಿಗಳನ್ನು ಅಗೆಯಲಾಗಿದೆ. ಅಕ್ಕಪಕ್ಕದಲ್ಲಿ ಪೂಜೆ ಇತ್ಯಾದಿ ಮಾಡಿರುವ ಕುರುಹಾಗಿ ಕೆಲವು ಸಾಮಗ್ರಿಗಳು ಚೆಲ್ಲಿಪಿಲ್ಲಿಯಾಗಿ ಬಿದ್ದಿದ್ದವು. ಈ ಕೃತ್ಯ ನಿಧಿ ಶೋಧನೆಗಾಗಿ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.ಶಿವರಾತ್ರಿ ಮತ್ತು ಅಮಾವಾಸ್ಯೆ ಎರಡು ಸೇರಿ ಬಂದಾಗ ಮಾಟ, ಮಂತ್ರ, ಭಾನಾಮತಿ, ನಿಧಿ ಹಾಗೂ ಇತರ ಕೆಲವು ಸಿದ್ಧಿಗಳಿಗೆ ಹೇಳಿ ಮಾಡಿಸಿದ ದಿನವಾಗಿರುತ್ತದೆ. ಇಂಥ ದಿನವನ್ನು ಕಾಯ್ದು ಕುಳಿತಿರುವವರು ರಾತ್ರಿಯಲ್ಲಿ ಸುಡುಗಾಡುಗಳಿಗೆ ಹೋಗಿ ಶವಗಳನ್ನು ತೆಗೆಯುವುದು, ನಿಧಿಗಾಗಿ ನೆಲ ಅಗೆಯುವುದು ಸಾಮಾನ್ಯವಾಗಿದ್ದರೂ ಇದೊಂದು ಆಶ್ಚರ್ಯದ ಸಂಗತಿ ಎಂದು ಸ್ಥಳದಲ್ಲಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು.ಭೇಟಿ: ಜಾಮೀಯಾ ಮಸೀದಿ ಸಮಿತಿಯ ಅಧ್ಯಕ್ಷ ಅನ್ವರ್ ಹುಸೇನ್ ಕಟಕಟಿ ಅವರು ಗೋರಿ ಅಗೆದು ಶವಗಳನ್ನು ಕಳವು ಮಾಡಿದ ಘಟನೆ ಕುರಿತು ಪರಿಶೀಲಿಸಿ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಬಸ್ಸಪ್ಪ ನಾಗೋಲಿ ಅವರಿಗೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ತಹಸೀಲ್ದಾರ್ ಬಸ್ಸಪ್ಪ ನಾಗೋಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry