ಬತ್ತಿದ ಕೆರೆ: ಗುಳೆ ಹೊರಟ ರೈತ

7

ಬತ್ತಿದ ಕೆರೆ: ಗುಳೆ ಹೊರಟ ರೈತ

Published:
Updated:

ಅಫಜಲಪುರ:  ಪಟ್ಟಣ ಸೇರಿದಂತೆ ಸುತ್ತಲಿನ ಎಂಟು ಹತ್ತು ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಜೀವಾಳವಾಗಿರುವ ಅಫಜಲಪುರದ ಕೆರೆ ಆರು ತಿಂಗಳಿನಿಂದ ನೀರಿಲ್ಲದೆ ಬತ್ತಿ ಹೋಗಿದೆ. ಕೆರೆಯನ್ನು ನಂಬಿ ಕೃಷಿ ಮಾಡಿಕೊಂಡಿದ್ದ ರೈತರು ಕೆರೆ ಬತ್ತಿ ಹೋಗಿದ್ದರಿಂದ ಮಾಡಿದ ಸಾಲ ತೀರಿಸಲು ಹೊಟ್ಟೆ ತುಂಬಿಸಿಕೊಳ್ಳಲು ಹೊರ ರಾಜ್ಯಕ್ಕೆ ಗುಳೆ ಹೋಗಲು ಆರಂಭಿಸಿದ್ದಾರೆ.ಕೆರೆಗೆ ನೀರು ತುಂಬಲು ಅಫಜಲಪುರದ ರೈತರು ಪಕ್ಷ ಬೇಧ ಮರೆತು ಕಳೆದ ಎರಡು ವರ್ಷಗಳಿಂದ ತಹಸೀಲ್ದಾರ್ ಕಚೇರಿಯಿಂದ ರಾಜ್ಯದ ಮುಖ್ಯಮಂತ್ರಿಯವರೆಗೆ ಕೇಳಿಕೊಂಡರೂ ಕೆರೆಗೆ ನೀರು ಬಿಡುತ್ತಿಲ್ಲ. ಹೀಗಾಗಿ ರೈತರು ಕೆರೆಯನ್ನು ನಂಬಿ ಕೃಷಿ ಮಾಡಿಕೊಂಡು ಹಾಳಾಗಿ ಹೋಗಿದ್ದಾರೆ.

 

ಕೆರೆಗೆ ನೀರು ಬಿಡುವಂತೆ ಎರಡು ವರ್ಷಗಳಿಂದ ರೈತರಾದ ಚಂದು ಕರಜಗಿ, ಚಂದ್ರಾಮ ಬಳೂಂಡಗಿ, ಶರಣು ವಾಳಿ, ಮಳೆಪ್ಪ ಮನ್ಮಿ, ಬಸವರಾಜ ನಿಂಬಾಳ, ಮಹಾದೇವ ಕಲಕೇರಿ, ಪಾಶಾ ಮಣೂರ, ನಾಗಪ್ಪಾ ಮ್ಯಾಳೇಶಿ ಮುಂತಾದವರು ಹೋರಾಟ ನಡೆಸಿದ್ದಾರೆ.ಬಳೂಂಡಗಿ ಏತ ನೀರಾವರಿಯಿಂದ ಕೆರೆಗೆ ನೀರು ಬಿಡಲು ಮತ್ತು ಕಾಲುವೆಗೆ ನೀರು ಹರಿಸಲು ಸಾವಿರ ಎಚ್‌ಪಿ 5 ಪಂಪಸೆಟ್‌ಗಳನ್ನು ಅಳವಡಿಸಲಾಗಿದೆ. ಈಗಾಗಲೆ ಎರಡು ಪಂಪಸೆಟ್‌ಗಳನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗಿದೆ. ಆದರೂ ಭೀಮಾ ಏತ ನೀರಾವರಿ ಕಾರ್ಯಪಾಲಕ ಎಂಜನಿಯರ್ ನಿರ್ಲಕ್ಷ್ಯದಿಂದ ಸಕಾಲದಲ್ಲಿ ಕೆರೆಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಹೇಳುತ್ತಾರೆ.ಒಂದು ವಾರದ ಹಿಂದೆ ಬೆಂಗಳೂರಿನ ತಂಡವೊಂದು ಬಳೂಂಡಗಿ ಏತ ನೀರಾವರಿಗೆ ಪೂರೈಸುವ ವಿದ್ಯುತ್ ವಿವಿಧ ಹಂತಗಳ ಕಾಮಗಾರಿಗಳನ್ನು ಪರಿಶೀಲಿಸಿ ಹೋಗಿದ್ದಾರೆ. ವಿದ್ಯುತ್ ಕಂಬಗಳು ಮನೆಗಳ ಮೇಲೆ ಮತ್ತು ಮಂದಿರಗಳ ಮೇಲೆ ಹಾಕಿರುವುದರಿಂದ, ಅವುಗಳನ್ನು ಸ್ಥಳಾಂತರ ಮಾಡುವಂತೆ ಸೂಚನೆ ಮಾಡಿದ್ದಾರೆ. ಅವರ ಸೂಚನೆಯಂತೆ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡುವ ಕೆಲಸ ನಡೆದಿದೆ. ಅದು ಮುಗಿದ ಮೇಲೆ ಬೆಂಗಳೂರು ಕೇಂದ್ರ ವಿದ್ಯುತ್ ಘಟಕವು ಬಳೂಂಡಗಿ ಏತ ನೀರಾವರಿಗೆ ನೀರು ಎತ್ತಿ ಹಾಕಲು ವಿದ್ಯುತ್ ಪೂರೈಕೆಗೆ ಹಸಿರು ನಿಶಾನೆ ತೋರಿಸಬೇಕಾಗಿದೆ.ಈ ಕೆರೆಯಿಂದ ಸುಮಾರು 10 ಸಾವಿರ ರೈತರಿಗೆ ಅನಕೂಲವಾಗಲಿದೆ. ಕೆರೆಗೆ ನೀರು ತುಂಬಿದರೆ ಪಟ್ಟಣ ಸೇರಿದಂತೆ ಸುತ್ತಲಿನ ಎಂಟು ಹತ್ತು ಗ್ರಾಮಗಳ ಕೊಳುವೆ ಬಾವಿ ಮತ್ತು ತೆರೆದ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ, ಕೆರೆಗೆ ನೀರು ಬಂದಿಲ್ಲ.

 

ಇನ್ನೊಂದು ಕಡೆ ಸರ್ಕಾರ ಭೀಮಾ ಬ್ಯಾರೇಜ್‌ನಿಂದ ಒಂದು ವಾರದಲ್ಲಿ ನೀರು ಬಿಡದಿದ್ದರೆ ಭೀಮಾ ಬ್ಯಾರೇಜ್‌ಗೆ ನಾರಾಯಣಪುರ ಡ್ಯಾಂನಿಂದ ನೀರು ಹರಿದು ಬರುವುದು ಸ್ಥಗಿತವಾಗಲಿದೆ ಎಂದು ಅಲ್ಲಿಯ ಎಂಜನಿಯರ್ ಹೇಳುತ್ತಾರೆ.ಬರಗಾಲ ಇರುವುದರಿಂದ, ಫೆ.15 ರವರೆಗೆ ಮಾತ್ರ ನಾರಾಯಣಪುರ ಡ್ಯಾಂನಿಂದ ಕಾಲುವೆಗೆ ನೀರು ಬಿಡುವ ಅವಧಿಯಿಂದ ಫೆ.25 ವರೆಗೆ ವಿಸ್ತೀರ್ಣಯಾಗಿದೆ ಎಂದು ಹೇಳಲಾಗುತ್ತಿದೆ.ಭೀಮಾ ಬ್ಯಾರೇಜ್‌ನಿಂದ ಕೆರೆಗೆ ನೀರು ಬಿಡುವ ಕೆಲಸ ಒಂದು ವಾರದಲ್ಲಿ ಮಾಡದಿದ್ದರೆ ರೈತ ಮುಖಂಡರಿಂದ ಬೃಹತ್ ಪ್ರಮಾಣದ ಹೋರಾಟ ನಡೆಯಲಿದೆ. ನೀರು ಬಿಡಲು ನಮಗೆ ಯಾವ ಕಾರ್ಯಕ್ರಮ ಬೇಕಾಗಿಲ್ಲ. ನೇರವಾಗಿ ಕೆರೆಗೆ ನೀರು ಬಿಡಬೇಕು. ದಿನದಿಂದ ದಿನಕ್ಕೆ ಇಳುವರಿ ಕಡಿಮೆಯಾಗುತ್ತಿವೆ ಎಂದು ರೈತ ಮುಖಂಡರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry