ಶುಕ್ರವಾರ, ಜೂನ್ 25, 2021
21 °C

ಪೊಲೀಸರ ಅತಿಥಿಯಾದ ತಂದೆ- ಮಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ದುಷ್ಕರ್ಮಿಗಳು ಹಣ ದೋಚಿದ್ದಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದ ತಂದೆ- ಮಗ ಪೊಲೀಸರ ಅತಿಥಿಯಾದ ಕುತೂಹಲಕರ ಪ್ರಕರಣ ನಡೆದಿದೆ.ವಿವರ: ತಮ್ಮ ಮಗ ಶರಣು ಗೋಗಿ ಮಾರ್ಚ್ 2ರಂದು ಕಾರ್ಪೊರೇಶನ್ ಬ್ಯಾಂಕ್‌ಗೆ ಹೋಗಿ, ಹಣ ತೆಗೆದುಕೊಂಡು ಬರುವಾಗ ಆ ಹಣವನ್ನು ದುಷ್ಕರ್ಮಿಗಳು ದೋಚಿದ್ದರು ಎಂದು ಶಹಾಬಜಾರ್ ನಿವಾಸಿ ಚಂದ್ರಕಾಂತ ಗೋಗಿ ಎಂಬುವವರು ದೂರು ನೀಡಿದ್ದರು. ತಮ್ಮ ಖಾತೆ(ಸಂಖ್ಯೆ- 3030)ಯಿಂದ 90 ಸಾವಿರ ಡ್ರಾ ಮಾಡಿಕೊಂಡು ಬರುವಾಗ ಚೌಡೇಶ್ವರಿ ಕಾಲೊನಿಗೆ ಹೋಗುವ ರಸ್ತೆಯಲ್ಲಿ ಇಬ್ಬರು ಅಪರಿಚಿತರು ಸ್ಕೂಟರ್‌ನಲ್ಲಿ ಬಂದು, ಹಲ್ಲೆ ನಡೆಸಿದ್ದರು. ಬ್ಯಾಂಕಿನಿಂದ ತಂದಿದ್ದ ಹಣ ಹಾಗೂ ಮಗನ ಬಳಿಯಿದ್ದ 10 ಸಾವಿರ- ಹೀಗೆ ಒಟ್ಟು ಒಂದು ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದರು ಎಂದು ರಾಘವೇಂದ್ರನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.ತನಿಖೆ ಆರಂಭಿಸಿದ ಪೊಲೀಸರು, ಕಾರ್ಪೊರೇಶನ್ ಬ್ಯಾಂಕ್‌ಗೆ ಹೋಗಿ ಪರಿಶೀಲನೆ ನಡೆಸಿದರು. ಅಚ್ಚರಿಯೆಂದರೆ, ಅಂದು ಚಂದ್ರಕಾಂತ ಗೋಗಿ ಅವರ ಖಾತೆಯಿಂದ ಹಣದ ವಹಿವಾಟು ನಡೆಸಿದ ಕುರಿತು ದಾಖಲೆ ಇರಲೇ ಇಲ್ಲ!ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಅರ್ಜಿದಾರರು ಸುಳ್ಳು ದೂರು ದಾಖಲಿಸಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ರಾಘವೇಂದ್ರನಗರ ಪಿಎಸ್‌ಐ ಬಸವರಾಜ ತೇಲಿ ಅವರು ಪ್ರಕರಣ ದಾಖಲಾಸಿದ್ದು, ತನಿಖೆ ನಡೆದಿದೆ.ಹಲ್ಲೆ: ಗಾಯ

ಗುಲ್ಬರ್ಗ: ತಮ್ಮ ಗೆಳೆಯ ವೆಂಕಟೇಶ ಜತೆ ಶರಣಸಿರಸಗಿ ಹೋಗಿ ಬರುವಾಗ ಅನಿಲ್, ಚೇತನ, ಅರುಣ ಎಂಬುವವರು ಹಲ್ಲೆ ನಡೆಸಿದ್ದರಿಂದ ಗಾಯಗಳಾಗಿವೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ನಗರದ ಘಾಟಗೆ ಲೇಔಟ್ ನಿವಾಸಿ ಶೈಲೇಶ ಸುರೇಶ ಕಾಂಬಳೆ ಎಂಬುವವರು ದೂರು ಸಲ್ಲಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಬೈಕ್, ಚಕ್ಕಡಿ ಡಿಕ್ಕಿ: ಗಾಯ

ಗುಲ್ಬರ್ಗ: ವೇಗದಿಂದ ಬಂದ ಬೈಕ್, ಚಕ್ಕಡಿಗೆ ಡಿಕ್ಕಿ ಹೊಡೆದು ಬಿದ್ದ ಪರಿಣಾಮ ಎತ್ತಿನ ಬಂಡಿ ಹಾಗೂ ಬೈಕ್‌ನಲ್ಲಿದ್ದವರಿಗೆ ಗಾಯಗಳಾದ ಘಟನೆ ಸಂಭವಿಸಿದೆ.ತಾಲ್ಲೂಕಿನ ಕೆರೆಭೋಸಗಾ ಗ್ರಾಮದ ರಾಣಪ್ಪ ಸಂಬಣ್ಣಾ ದೊಡ್ಡಮನಿ ಅವರು ಶರಣಬಸಪ್ಪ ಮತ್ತು ಸಿದ್ರಾಮಪ್ಪ ಜತೆಗೆ ಹೊಲದಲ್ಲಿ ಕೆಲಸ ಮುಗಿಸಿ ಎತ್ತಿನ ಬಂಡಿಯಲ್ಲಿ ಹೊರಟಿದ್ದರು. ಆಳಂದದ ಬಾಹುಬಲಿ ಹೊಸಳ್ಳಿ ಎಂಬಾತ ವೇಗದಿಂದ ಬೈಕ್‌ನಲ್ಲಿ ಬಂದು ಬಂಡಿಗೆ ಡಿಕ್ಕಿ ಹೊಡೆದ. ಈ ಘಟನೆಯಲ್ಲಿ ಬೈಕ್ ಸವಾರ ಹಾಗೂ ಬಂಡಿಯಲ್ಲಿ ಇದ್ದವರಿಗೆ ಗಾಯಗಳಾಗಿವೆ ಎಂದು ದೂರು ಸಲ್ಲಿಸಲಾಗಿದೆ. ಗುಲ್ಬರ್ಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ

ಗುಲ್ಬರ್ಗ: ಕ್ರಿಮಿನಾಶಕ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಮಗಿ ಗ್ರಾಮದಲ್ಲಿ ಸಂಭವಿಸಿದೆ. ಕಟ್ಟಿಗೆ ಖರೀದಿಸಿಕೊಂಡು ಬರುವುದಾಗಿ ಹೇಳಿ ತಮ್ಮ ತಂದೆ ದಸ್ತಗಿರಿ ನಾಗೂರೆ ತೆರಳಿದ್ದರು.ಆದರೆ ತೋಟವೊಂದರ ಸಮೀಪ ಕೊಟ್ಟಿಗೆಯಲ್ಲಿ ಅವರ ಶವ ಪತ್ತೆಯಾಗಿದೆ. ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ದಸ್ತಗಿರಿ ಅವರ ಪುತ್ರ ರಸೂಲ್ ನಾಗೂರೆ ದೂರು ಸಲ್ಲಿಸಿದ್ದಾರೆ.ವಿ.ಕೆ.ಸಲಗರ ಗ್ರಾಮದ ಬ್ಯಾಂಕಿನಲ್ಲಿ ಒಂದು ಲಕ್ಷ ರೂಪಾಯಿ ಸಾಲ ಮಾಡಿದ್ದ ತಮ್ಮ ತಂದೆ, ಈಕುರಿತ ಚಿಂತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.