ಶನಿವಾರ, ಜೂನ್ 19, 2021
26 °C

ಮರತೂರಿನಲ್ಲಿ ಸಂಶೋಧನ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಿಂದ ಮಿತಾಕ್ಷರ ಖ್ಯಾತಿಯ ಮರತೂರಿನಲ್ಲಿ ಭಾರತೀಯ ನ್ಯಾಯಶಾಸ್ತ್ರ ಕುರಿತ ಅಂತರರಾಷ್ಟ್ರೀಯ ಸಂಶೋಧನ ಕೇಂದ್ರ ಆರಂಭಿಸಲಾಗುವುದು ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಜೆ.ಎಸ್. ಪಾಟೀಲ ಹೇಳಿದರು.ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಮುಂದಿನ ಬಜೆಟ್‌ನಲ್ಲಿ ಒಪ್ಪಿಗೆಯಾಗುವಂತೆ ರಾಜ್ಯ ಸರ್ಕಾರಕ್ಕೆ ರೂ. 30 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದಕ್ಕಾಗಿ ಶೀಘ್ರದಲ್ಲೇ 10ರಿಂದ 15 ಎಕರೆ ಜಾಗ ಖರೀದಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.ಭಾರತೀಯ ನ್ಯಾಯದರ್ಶನ ಮತ್ತು ರಾಜಧರ್ಮದ ಖ್ಯಾತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ವಿಜ್ಞಾನೇಶ್ವರ ಸೌಹಾರ್ದ ಸಹಕಾರಿಯ ಜೊತೆ ಒಡಂಬಡಿಕೆ ಮಾಡಿಕೊಂಡು ಬೆಂಗಳೂರು ಹಾಗೂ ಮರತೂರಿನಲ್ಲಿ ಕಾನೂನು ವಿಶ್ವವಿದ್ಯಾಲಯದ ಶಾಖೆಗಳನ್ನು ಆರಂಭಿಸಲು ಬುಧವಾರ ಮರತೂರಿನಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿಸಿದರು.ಅಂತರರಾಷ್ಟ್ರೀಯ ಸಮ್ಮೇಳನ: ಮುಂದಿನ ನವೆಂಬರ್ ತಿಂಗಳಲ್ಲಿ ವಿದೇಶದ ಜೆಂಟ್, ಜೆಕ್ ರಿಪಬ್ಲಿಕ್, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕಾನೂನು ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಧಾರವಾಡದಲ್ಲಿ `ಭಾರತದಲ್ಲಿ ರಿಲಿಜನ್~ ಮರು ಚಿಂತನೆ ಕುರಿತು ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳವನ್ನು ಆಯೋಜಿಸಲಾಗಿದ್ದು, ಭಾರತದ ಸಂಪ್ರದಾಯ, ರಿಲಿಜನ್ ಮತ್ತು ಕಾನೂನು ಕುರಿತು ಚರ್ಚಿಸಲಾಗುವುದು. ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ 40 ದೇಶಗಳ ಸುಮಾರು 400 ವಿದ್ವಾಂಸರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ವಿಜ್ಞಾನೇಶ್ವರರ ಮಿತಾಕ್ಷರ ಖ್ಯಾತಿಯ ಮರತೂರಿನಲ್ಲಿ 2012-13ನೇ ಸಾಲಿನಿಂದ ಸರ್ಕಾರಿ ಕಾನೂನು ಕಾಲೇಜು ಪ್ರಾರಂಭವಾಗಲಿದೆ ಎಂದು ತಿಳಿಸಿದರು.ಪ್ರಥಮ ಘಟಿಕೋತ್ಸವ:
ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿ ಗಣ್ಯ ವ್ಯಕ್ತಿಗಳಿಗೆ ಘಟಿಕೋತ್ಸವದ ಸಾಂಪ್ರದಾಯಿಕ ಗೌನಿನ ಬದಲಾಗಿ ಬಿಳಿ ಖಾದಿ ವಸ್ತ್ರದ ಜೊತೆಗೆ ಮೈಸೂರು ಪೇಟ, ತ್ರಿವರ್ಣ ಬಣ್ಣದ ರೇಷ್ಮೆ ಶಲ್ಯ ತೊಡಿಸಲಾಗುವುದು. ಸಿಂಡಿಕೇಟ್ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಹಾಗೂ ಅಭ್ಯರ್ಥಿಗಳಿಗೆ ಖಾದಿ ವಸ್ತ್ರ, ಗಾಂಧಿ ಟೋಪಿ, ತ್ರಿವರ್ಣ ಬಣ್ಣ ಶಲ್ಯ ನೀಡಲಾಗುವುದು ಎಂದರು.ತಂತ್ರಜ್ಞಾನ ಬಳಕೆ:
ನ್ಯಾಶನಲ್ ಮಿಶನ್ ಫಾರ್ ಎಜುಕೇಶನ್ ಥ್ರೂ ಇನ್‌ಫಾರ್‌ಮೇಶನ್ ಕಮ್ಯೂನಿಕೇಶನ್ ಟೆಕ್ನಾಲಜಿ (ಎನ್.ಎಂ.ಇ-ಐಸಿಟಿ) ಅಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ರಾಜ್ಯದ 92 ಕಾನೂನು ಮಹಾವಿದ್ಯಾಲಯಗಳನ್ನು ಒಂದೇ ನೆಟ್‌ವರ್ಕ್‌ಗೆ ತರಲಾಗಿದ್ದು, ಇದಕ್ಕೆ ತಗುಲಿದ ವೆಚ್ಚ ರೂ. 1.75 ಕೋಟಿ ಹಣದಲ್ಲಿ ಶೇ 75ರಷ್ಟು ಎಂಎಚ್‌ಆರ್‌ಡಿ, ಶೇ 25ರಷ್ಟು ಕಾನೂನು ವಿಶ್ವವಿದ್ಯಾಲಯ ವಹಿಸಿಕೊಂಡಿದ್ದು 10 ವರ್ಷದ ಕಂತಿನಂತೆ ಆ ಹಣವನ್ನು ಭರ್ತಿ ಮಾಡಲಾಗುವುದು ಎಂದರು.ಮೌಲ್ಯಮಾಪನ ಕೇಂದ್ರ: ಕಾನೂನು ಕಾಲೇಜುಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಧಾರವಾಡ ಸೇರಿದಂತೆ ಬೆಂಗಳೂರಿನಲ್ಲೂ ನಡೆಸಲಾಗುವುದು. ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿರುವುದರಿಂದ ಯಾವುದೇ ಅವ್ಯವಹಾರ ನಡೆಯದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕುಲಸಚಿವ (ಮೌಲ್ಯಮಾಪನ) ಪ್ರೊ. ಕೆ.ಎಸ್. ಬಗಾಲೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.