ಸ್ಫೋಟದಿಂದ ಕಲ್ಲುಗಳ ಹಾರಾಟ

7

ಸ್ಫೋಟದಿಂದ ಕಲ್ಲುಗಳ ಹಾರಾಟ

Published:
Updated:

ಸೇಡಂ: ಸಿಮೆಂಟ್ ಉತ್ಪಾದನೆಗೆ ಅವಶ್ಯ ಇರುವ ಕಚ್ಚಾ ವಸ್ತುಗಳನ್ನು ಕಲ್ಲುಗಣಿಗಳಿಂದ ಪಡೆಯುವಲ್ಲಿ ಬಳಸುವ ಬ್ಲಾಸ್ಟಿಂಗ್ ನಿಂದ ಪಕ್ಕದ ಜಮೀನುಗಳಲ್ಲಿ ಕಲ್ಲುಗಳು ಸಿಡಿದು ಬಂದು ಬೀಳುತ್ತಿವೆ ಎಂಬುದು ರೈತನ ಮಗ ಮಲ್ಲಪ್ಪನ ಆತಂಕದ ನುಡಿ.ಘಟಕಗಳನ್ನು ಆರಂಭಿಸುವಾಗ ಪರಿಸರದ ಮೇಲಿನ ಪರಿಣಾಮದ ಸ್ಪಷ್ಟ ಅಂಕಿ-ಅಂಶಗಳನ್ನು ಹೇಳದಿರುವಲ್ಲಿ ಸಭೆಯ ಅವಶ್ಯಕತೆ ಇದೆಯೇ ಎಂಬುದು ಮಳಖೇಡ ಗ್ರಾಮದ ರಾಷ್ಟ್ರಕೂಟ ಸಂಘದ ಪ್ರಶ್ನೆ. ಇವು ಬುಧವಾರ ತಾಲ್ಲೂಕಿನ ಮಳಖೇಡ ಆದಿತ್ಯ ಬಿರ್ಲಾ ಗುಂಪಿನ ಅಲ್ಟ್ರಾಟೆಕ್ ಲಿಮಿಟೆಡ್‌ನ ರಾಜಶ್ರೀ ಸಿಮೆಂಟ್ ಕಂಪೆನಿಯ ನಾಲ್ಕನೇ ಘಟಕ  ಉತ್ಪಾದನೆ ಆರಂಭ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕರೆದಿದ್ದ ಪರಿಸರ ಸಾರ್ವಜನಿಕ ಸಭೆಯಲ್ಲಿ ಕೇಳಿಸಿದ ವಿಚಾರಗಳು.ಅಂಧ ದತ್ತು ಅಗ್ರವಾಲ, ಅಂಧರಿಗಾಗಿ ಕಂಪ್ಯೂಟರ್ ಕಲಿಕಾ ಕೇಂದ್ರದ ಅಭಿವೃದ್ಧಿಗೆ ಮಾಡಿದ ಮನವಿಗೆ ಜಿಲ್ಲಾಧಿಕಾರಿ ಡಾ. ವಿಶಾಲ ವಿಶೇಷ ಆಸಕ್ತಿ ವಹಿಸಿದರು. ಗ್ರಾಮಸ್ಥರ ಅಳಲು ಕೇಳಿದರೂ ಪರವಾನಗಿ ನೀಡುವುದು ನಿಶ್ಚಿತ ಎಂದು ಜೆಡಿಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಕ್ರಂಖಾನ ಅಭಿಪ್ರಾಯ ವ್ಯಕ್ತಪಡಿಸಿದರು. ಸಿಮೆಂಟ್ ಕಂಪೆನಿಗಳ ಪರಿಸರ ಮಾಲಿನ್ಯದಿಂದ ಜನಸಾಮಾನ್ಯರ ಆರೋಗ್ಯದ ಮೇಲಿನ ಪರಿಣಾಮ ಮತ್ತು ರೋಗದ ಲಕ್ಷಣಗಳ ಕುರಿತು ಸಂಶೋಧನೆ ಅಗತ್ಯ ಇದೆ ಎಂದರು.

ಸಿಮೆಂಟ್ ಕಂಪೆನಿಗಳ ಅವಶ್ಯಕತೆ ಇದೆಯೇ, ಭೂಮಿ ಕಳೆದುಕೊಂಡು ಮಾಡುವುದಾದರೂ ಏನು? ಎಂಬಂಥ ಪ್ರಶ್ನೆಗಳು ಕೇಳಿಸಿದವು. ದತ್ತು ಪಡೆದ 10 ಗ್ರಾಮಗಳಲ್ಲಿ 10 ಗಿಡಗಳು ನೆಟ್ಟಿಲ್ಲ. ಉತ್ತಮ ಪರಿಸರ ಸೃಷ್ಟಿ ಆಗುವುದಾದರೂ ಹೇಗೆ? ಪ್ರಸಕ್ತ ದಿನಗಳಲ್ಲಿ ಗ್ರಾಮಸ್ಥರು ವಲಸೆ ಹೋಗುತ್ತಿದ್ದಾರೆ ಎಂದು ಕೆಲವರು ಎಚ್ಚರಿಸಿದರು.ಶಾಸಕ ಡಾ. ಶರಣಪ್ರಕಾಶ ಪಾಟೀಲ  ಮಾತನಾಡಿ, ಸ್ಟೇಷನ್ ತಾಂಡಾ, ಹೂಡಾ(ಬಿ) ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರಿನ ಸಮಸ್ಯೆ ಕಲ್ಪಿಸಲು ಕಂಪೆನಿ ಒಂದು ಕೋಟಿ ರೂಪಾಯಿ  ವೆಚ್ಚ ಮಾಡಬೇಕು. ಹಂಗನಳ್ಳಿ, ಸ್ಟೇಷನ್ ತಾಂಡಾ, ಹೂಡಾ (ಬಿ) ಊಡಗಿ ಮತ್ತು ಮಳಖೇಡ ಗ್ರಾಮಗಳ ಒಳರಸ್ತೆ ಸುಧಾರಣೆ, ಒಳಚರಂಡಿ ನಿರ್ಮಾಣಕ್ಕೆ 1.5 ಕೋಟಿ ರೂಪಾಯಿ ಮೀಸಲಿಡಬೇಕು. ಕಂಪೆನಿಯಿಂದ ಸೇಡಂ ಪಟ್ಟಣಕ್ಕೆ ಹಂಗನಳ್ಳಿ ಮತ್ತು ಊಡಗಿ ಗ್ರಾಮ ಮಾರ್ಗವಾಗಿ ರಸ್ತೆ ಮತ್ತು ಸೇತುವೆ ಕಾಮಗಾರಿಗೆ 4 ಕೋಟಿ ರೂಪಾಯಿ ವೆಚ್ಚಮಾಡಲು ಕಂಪೆನಿ ಆಡಳಿತ ಮಂಡಳಿ ಬದ್ದರಾಗಬೇಕು ಎಂದರು.ಕಂಪೆನಿ ಸುತ್ತಲಿನ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಕಂಪ್ಯೂಟರೀಕರಣ ವ್ಯವಸ್ಥೆಯನ್ನು ಶಾಲೆಗಳಲ್ಲಿ ಅಳವಡಿಸಿ 5 ವರ್ಷ ನಿರ್ವಹಿಸಲು 80 ಲಕ್ಷ, ಪ್ರತಿ ವರ್ಷ 50 ಸಾವಿರ ಗಿಡದಂತೆ 5 ವರ್ಷಗಳಲ್ಲಿ 2.5 ಲಕ್ಷ ಗಿಡಗಳನ್ನು ನೆಟ್ಟು ಸಂರಕ್ಷಿಸಬೇಕು. ಮಳಖೇಡ ಗ್ರಾಮ ಪಂಚಾಯಿತಿಗೆ ಪ್ರತಿ ವರ್ಷ 15 ಲಕ್ಷ ರೂಪಾಯಿಯ ಅಭಿವೃದ್ದಿ ಕೆಲಸ ಅಲ್ಲದೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿ ತಿಂಗಳು 25 ಸಾವಿರ ರೂಪಾಯಿ ಕೊಡಲು ಅವರು ಆಗ್ರಹಿಸಿದರು.ಮಾಜಿ ಸಂಸದ ಡಾ. ಬಸವರಾಜ ಪಾಟೀಲ ಸೇಡಂ, ಶಾಸಕ ವಾಲ್ಮೀಕ ನಾಯಕ, ತಾಪಂ ಸದಸ್ಯ ದೇವಿಂದ್ರ ಯಂಗಿನ್, ಕಾರ್ಮಿಕ ಮುಖಂಡ ಮಹ್ಮದ್ ಮೈನೋದ್ದಿನ್ ಮುನ್ಸಬ್‌ದಾರ, ಪುರಸಭೆ ಮಾಜಿ ಅಧ್ಯಕ್ಷೆ ಬಸ್ಸಮ್ಮ ಪಾಟೀಲ ಮತ್ತಿತರರು ಸಲಹೆ, ಸೂಚನೆ ನೀಡಿದರು.ಜಿಲ್ಲಾಧಿಕಾರಿ ಡಾ. ಆರ್. ವಿಶಾಲ, ಸಹಾಯಕ ಅಯುಕ್ತೆ ಕೆ.ಎಸ್.ಲತಾಕುಮಾರಿ ಮತ್ತು ಮಂಡಳಿ ಅಧಿಕಾರಿಗಳು ವೇದಿಕೆ ಮೇಲಿದ್ದರು. ಮುಖಂಡ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಮೊದಲಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry