ಭಾನುವಾರ, ಜೂನ್ 13, 2021
24 °C

ಕಾರಿನ ಮಳಿಗೆಯಲ್ಲಿ ಬೆಂಕಿ ನರ್ತನ

ವಿಶೇಷ ವರದಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ಖರ್ಗೆ ಪೆಟ್ರೋಲ್ ಪಂಪ್ ಸಮೀಪ ವರ್ತುಲ ರಸ್ತೆಯಲ್ಲಿರುವ ಕರುಣಾ ಟೊಯೊಟಾ ಕಾರು ಶೋ ರೂಂ ಬೆಂಕಿ ಆಕಸ್ಮಿಕದಲ್ಲಿ ಸುಮಾರು 6ರಿಂದ 7 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದಾಗಿ ರಾತ್ರಿ ಸುಮಾರು 8.30ಕ್ಕೆ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗಿದ್ದು, ಅಗ್ನಿಶಾಮಕ, ಪೊಲೀಸ್ ಹಾಗೂ ಗೃಹರಕ್ಷಕದಳದ ಸತತ ಐದು ಗಂಟೆಗಳ ಕಾರ್ಯಾಚರಣೆಯೊಂದಿಗೆ ಮಧ್ಯ ರಾತ್ರಿ 1.30ರ ಹೊತ್ತಿಗೆ ಬೆಂಕಿ ನಂದಿಸಲಾಗಿದೆ. ಸಾರ್ವಜನಿಕರೂ ಸಹಕಾರ ನೀಡಿದ್ದಾರೆ.ಘಟನೆಯಲ್ಲಿ ಶೋರೂಂ ಲಾಂಜ್‌ನಲ್ಲಿ ಪ್ರದರ್ಶನಕ್ಕಿಟ್ಟಿದ್ದ 16 ಲಕ್ಷ ರೂಪಾಯಿ ಮೌಲ್ಯದ ಟೊಯೊಟೊ ಆಲ್‌ಟಿಸ್ ಕಾರೊಂದು ಬೆಂಕಿಗಾಹುತಿಯಾಗಿದೆ. ಅಲ್‌ಟಿಸ್, ಎಟಿಸ್, ಇನೋವಾ, ಲಿವಾ ಮತ್ತಿತರ 25 ನೂತನ ಹಾಗೂ ಸರ್ವೀಸ್‌ಗೆ ಬಂದಿದ್ದ 15 ಕಾರುಗಳಿಗೆ ಹಾನಿಯಾಗಿವೆ. ತಾಪಕ್ಕೆ ಕಾರುಗಳ ಗಾಜುಗಳು ಒಡೆದಿವೆ.  ಕಟ್ಟಡಕ್ಕೆ ಅಳವಡಿಸಲಾಗಿದ್ದ ದುಬಾರಿ ಗ್ಲಾಸುಗಳು ಸಿಡಿದಿವೆ. 40 ಕಂಪ್ಯೂಟರ್, ಹವಾನಿಯಂತ್ರಿತ ವ್ಯವಸ್ಥೆ, 10 ಎಲ್‌ಸಿಡಿ ಟಿವಿ, ಆಂತರಿಕ ಶೃಂಗಾರ (ಇಂಟೀರಿಯರ್ ಡೆಕೋರೇಟರ್ಸ್‌), ಕಾರಿನ ಸಲಕರಣೆಗಳು ಮತ್ತಿತರ ಸೊತ್ತುಗಳಿಗೆ ಹಾನಿಯಾಗಿವೆ.`ಒಟ್ಟು ಮೌಲ್ಯವನ್ನು ಅಂದಾಜು ಮಾಡಿದರೆ ಗುಲ್ಬರ್ಗದಲ್ಲಿ ಈಚೆಗೆ ಸಂಭವಿಸಿದ ಅತಿದೊಡ್ಡ ಬೆಂಕಿ ಆಕಸ್ಮಿಕ ಇದಾಗಿದೆ. ಘಟನೆಯನ್ನು ನೋಡಲು ಆಗಮಿಸುತ್ತಿದ್ದ ಸುಮಾರು 10,000ಕ್ಕೂ ಅಧಿಕ ಜನರು ಹಾಗೂ ರಸ್ತೆ ಸಂಚಾರವನ್ನು ನಿಯಂತ್ರಿಸುವುದೇ ಹರಸಾಹಸವಾಗಿ ಪರಿಣಮಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಕಿ -ನೀರು:  `ಸುಮಾರು 28 ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸಿದ್ದೆವು.ಚಿಕ್ಕ ಪುಟ್ಟ ಅಗ್ನಿನಂದಕಗಳನ್ನು ಬಿಟ್ಟರೆ ಸ್ಥಳದಲ್ಲಿ ಭಾರಿ ಪ್ರಮಾಣದ ಅಗ್ನಿ ಸುರಕ್ಷತಾ ಕ್ರಮಗಳು ಇರಲಿಲ್ಲ. ಹೀಗಾಗಿ ಹೊರಗಿನಿಂದ 10ರಿಂದ 15 ಟ್ಯಾಂಕರ್ ನೀರು ಬಳಸಿದ್ದೇವೆ. ನಾಲ್ಕು ಟ್ಯಾಂಕರ್, ಅಗ್ನಿ ಯಂತ್ರಗಳ ಮೂಲಕ ಕಾರ್ಯಾಚರಿಸಲಾಯಿತು. ಹೊಗೆ, ಗಾಜು, ಒಮ್ಮಿಂದೊಮ್ಮೆಲೇ ಏರುತ್ತಿದ್ದ ಜ್ವಾಲೆಯು ಸ್ಪಲ್ಪ ತೊಡಕುಂಟು ಮಾಡುತ್ತಿತ್ತು. ಸುತ್ತ ಖಾಲಿ ಇದ್ದ ಕಾರಣ ಜೀವಹಾನಿಯಾಗಲಿಲ್ಲ. ವಸತಿ ಪ್ರದೇಶವಾಗಿದ್ದರೆ ಪರಿಸ್ಥಿತಿ ಊಹಿಸಲೂ ಸಾಧ್ಯವಿರಲಿಲ್ಲ~ ಎಂದು ಬೆಂಕಿ ನಂದಿಸುವ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಉಪ ಅಗ್ನಿಶಾಮಕ ಅಧಿಕಾರಿ ಚೌಡಪ್ಪ `ಪ್ರಜಾವಾಣಿ~ಗೆ ತಿಳಿಸಿದರು. `ಈ ಕಟ್ಟಡಕ್ಕೆ ನಾವು ಹೋಗಿರುವುದೇ ಇದೇ ಮೊದಲ ಬಾರಿ. ಕಟ್ಟಡ ಪರವಾನಗಿ ಮೊದಲು ಅಗ್ನಿ ಸುರಕ್ಷತಾ ಪತ್ರ ಪಡೆಯುವುದನ್ನು ಜಿಲ್ಲೆಯಲ್ಲಿ ಕಡ್ಡಾಯವಾಗಿ ಜಾರಿಗೊಳಿಸುವ ತುರ್ತು ಇದೆ. ಪರವಾನಗಿ ಇಲ್ಲದಿದ್ದರೆ ಅಪಾಯಗಳೇ ಹೆಚ್ಚು~ ಎಂದರು.ಸುರಕ್ಷತಾ ಕ್ರಮ:`ನೆಲದ ಕಾನೂನನ್ನು ಮಹಾನಗರ ಪಾಲಿಕೆ ಪಾಲಿಸಬೇಕು. ಇದಕ್ಕಾಗಿ ವಿಶೇಷ ಸೂಚನೆ ನೀಡುವ ಅಗತ್ಯವಿಲ್ಲ. ಆದರೆ ಬೃಹತ್ ಕಟ್ಟಡ, ಮಲ್ಟಿಫ್ಲೆಕ್ಸ್, ಸ್ಫೋಟಕ, ವೇಗವಾಗಿ ಅಗ್ನಿ ಆಹುತಿಯಾಗುವ ಉತ್ಪಾದಕ-ದಾಸ್ತಾನು ಘಟಕಗಳಿಗೆ ಪರವಾನಗಿ ನೀಡುವ ಸಂದರ್ಭ ಅಗ್ನಿ ಸುರಕ್ಷತಾ ನಿಯಮವನ್ನು ಜಿಲ್ಲಾಡಳಿತವು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಜಿಲ್ಲೆಯ ಹಿತದೃಷ್ಟಿಯಿಂದ ಇನ್ನಷ್ಟು ಮುಂಜಾಗ್ರತೆಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು~ ಎಂದು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಹೇಳಿದರು.ಎಸ್ಪಿ, ಡಿವೈಎಸ್ಪಿ ತಿಮ್ಮಪ್ಪ, ಸಿಪಿಐ ಚಂದ್ರಶೇಖರ್, ಎಸ್‌ಐ ಪಂಡಿತ ಸಗರ, ಸಂಜೀವ ಕುಮಾರ್, ಪ್ರದೀಪ್, ವಿಜಯ ಅಂಚಿ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಮಹಾಂತೇಶ್ ದೇಸಾಯಿ ನೇತೃತ್ವದಲ್ಲಿ ಗೃಹರಕ್ಷಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಶೋ ರೂಂ: ಡಾ.ಭೀಮಾಶಂಕರ ಬಿಲಗುಂದಿ ಒಡೆತನದ ಕಾರು ಶೋರೂಂ ಹಾಗೂ ಸರ್ವೀಸ್ ಕೇಂದ್ರವು ಇದಾಗಿದ್ದು, 2011 ಸೆಪ್ಟೆಂಬರ್3ರಂದು ಉದ್ಘಾಟನೆಗೊಂಡಿತ್ತು. ಸಿಬ್ಬಂದಿಯೆಲ್ಲ ಸೋಮವಾರ ರಾತ್ರಿ 8ಗಂಟೆಗೆ ತೆರಳಿದ್ದರು. 8.30ರ ಸುಮಾರಿಗೆ ಬೆಂಕಿ ಆಕಸ್ಮಿಕ ಸಂಭವಿಸಿತ್ತು ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.