ಶುಕ್ರವಾರ, ಜೂನ್ 25, 2021
30 °C

ಅಕ್ರಮ ಮರಳು ಸಾಗಾಟ: ಅಧಿಕಾರಿ ಜಾಣ ಕುರುಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಸಂಬಂಧಿತ ಇಲಾಖೆ ಅಧಿಕಾರಿ ದಿವ್ಯ ನಿರ್ಲಕ್ಷ್ಯ ಮತ್ತು ಕರ್ತವ್ಯಕ್ಕೆ ವಿಮುಖವಾಗಿ ನಡೆದುಕೊಂಡು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಪರಿಣಾಮ ತಾಲ್ಲೂಕಿನಲ್ಲಿ ಹರಿಯುವ ಕಾಗಿಣಾ ನದಿಯಲ್ಲಿ ಅಕ್ರಮ ಮರಳು ಸಾಗಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.ನದಿಯ ಒಡಲು ಬರಡಾಗುವ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಕೊಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಆದರೂ ಅಕ್ರಮ ಮರಳು ಸಾಗಾಟ ತಡೆಯಲು ಯಾರೂ ಮುಂದಾಗುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ.ರಾಜ್ಯ ಸರ್ಕಾರ ರೂಪಿಸಿರುವ ಮರಳು ನೀತಿ ಉಲ್ಲಂಘನೆ ಮಾಡಿ ಇಲ್ಲಿ ಜೆಸಿಬಿ ಯಂತ್ರಗಳಿಂದ ನದಿಯ ಒಡಲಿನಿಂದ ಮರಳು ತೆಗೆದು ಹಗಲು ದರೋಡೆ ನಡೆಯುತ್ತಿದೆ. ನದಿಯ ಒಡಲಿನಿಂದ ಆಳವಾಗಿ ಭಾರಿ ಪ್ರಮಾಣದಲ್ಲಿ ಮರಳು ತೆಗೆದ ಪರಿಣಾಮ ಬೃಹತ್ ತೆಗ್ಗು ಗುಂಡಿಗಳು ನಿರ್ಮಾಣವಾಗಿವೆ.. ಬಳ್ಳಾರಿ ಅಕ್ರಮ ಗಣಿಗಾರಿಕೆ ಮೀರಿಸುವಷ್ಟು ಮರಳು ದರೋಡೆ ನಡೆಯುತ್ತಿದೆ. ಅಧಿಕಾರಿಗಳು ಮಾತ್ರ ಯಾಕೆ ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಚಿತ್ತಾಪುರ ಹಾಗೂ ಮಾಡಬೂಳ ಪೊಲೀಸ್ ಠಾಣಾ ಸರಹದ್ದು ಕೂಡುವ ಸ್ಥಳದಲ್ಲಿನ ಕಾಗಿಣಾ ನದಿಯಲ್ಲಿ ಅಕ್ರಮ ಮರಳು ಸಾಗಾಟ ಹಗಲು ರಾತ್ರಿ ನಡೆಯುತ್ತಿದೆ. ಯಾವ ಠಾಣೆಯವರು ಅದನ್ನು ತಡೆದು ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಭಾರಿ ಪ್ರಮಾಣದ ನಷ್ಟ ತಡೆಯಲು ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಂಬಂಧಿತ ಇಲಾಖೆ ಅಧಿಕಾರಿ ಜಾಣ ಕುರುಡು ನೀತಿಗೆ ಶರಣಾಗಿದ್ದಾರೆ. ಕಂದಾಯ ಇಲಾಖೆ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಪ್ರಜ್ಞಾವಂತ ಜನರು ಆಕ್ರೋಶ ವ್ಯಕ್ತ ಮಾಡಿದ್ದಾರೆ.ಜಿಲ್ಲಾಧಿಕಾರಿಯಂತೂ ಇತ್ತ ಬರುವುದೇ ಇಲ್ಲ. ಸೇಡಂ ಸಹಾಯಕ ಆಯುಕ್ತರಿಗೆ ಇಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎನ್ನುವ ಮಾಹಿತಿ ಇಲ್ಲ ಎನ್ನುವಂತೆ ಗೋಚರಿಸುತ್ತಿದೆ. ಹೊಸದಾಗಿ ಬಂದಿರುವ ಚಿತ್ತಾಪುರ ತಹಸೀಲ್ದಾರ್ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅಕ್ರಮ ಮರಳು ಸಾಗಾಟ ದಂಧೆಗೆ ಕೊನೆ ಮಾಡಲು ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಜನರು ಒತ್ತಾಯಿಸಿದ್ದಾರೆ.ನದಿಯ ಒಡಲಿನಿಂದ ಆಳವಾಗಿ ಮರಳು ತೆಗೆದ ಪರಿಣಾಮ ಬೃಹತ್ ತೆಗ್ಗು ಗುಂಡಿ ನಿರ್ಮಾಣವಾಗಿ ನದಿ ಪಾತ್ರ ಅಕ್ಷರಶಃ ಗುಡ್ಡಗಾಡಿನಂತ್ತಾಗಿದೆ. ಮರಳು ಸಾಗಾಟದ ದುಷ್ಪರಿಣಾಮವಾಗಿ ನದಿಯ ನಟ್ಟನಡುವೆ ಜಾಲಿ ಗಿಡಗಂಟಿ, ಜೇಕು ದಟ್ಟವಾಗಿ ಬೆಳೆದು ನದಿ ಕಾಡಿನಂತ್ತಾಗಿದೆ. ಜನಜಾನುವಾರು ತಿರುಗಾಡಲು ಅಸಾಧ್ಯವಾಗಿದೆ. ಜೆಸಿಬಿ ಯಂತ್ರಗಳಿಂದ ಮರಳು ತೆಗೆಯುವ ಕಾರಣ ನೀರು ಕಲುಷಿತವಾಗುತ್ತದೆ. ಮಳೆಗಾಲದಲ್ಲಿ ಜಾನುವಾರುಗಳು ಮಡುವಿನಂತ ಈ ತೆಗ್ಗುಗುಂಡಿ ನೀರಿನಲ್ಲಿ ಸಿಲುಕಿ ದಾರುಣ ಸಾವಿಗೆ ತುತ್ತಾಗುವ ಸಾಧ್ಯತೆಯಿದೆ. ಇಷ್ಟಾದರೂ ಅಧಿಕಾರಿ ಮತ್ತು ಸರ್ಕಾರ ಯಾಕೆ ಗಮನಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಮಾಡುತ್ತಿದ್ದಾರೆ.ಕಾಗಿಣಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಕಾನೂನು ಬಾಹಿರ ಮರಳು ಸಾಗಾಟ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕು. ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ತಡೆಯಬೇಕು. ನದಿಯ ಪರಿಸರ ಇನ್ನೂ ಹಾಳಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಅಕ್ರಮ ಮರಳು ಸಾಗಾಟ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಂಡು ಶಿಕ್ಷೆಗೆ ಗುರಿ ಪಡಿಸಬೇಕು. ಒಂದು ವೇಳೆ ನಿರ್ಲಕ್ಷಿಸಿದರೆ ತಾಲ್ಲೂಕು, ಜಿಲ್ಲಾ ಮತ್ತು ರಾಜಧಾನಿ ಕೇಂದ್ರದಲ್ಲಿ ಸರ್ಕಾರ ಮತ್ತು ಅಧಿಕಾರಿ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲ್ಲೂಕು ಅಧ್ಯಕ್ಷ ಮಹೇಶ ಕಾಶಿ ಎಚ್ಚರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.