ಭಾನುವಾರ, ಜೂನ್ 20, 2021
21 °C

ಅವರ್ನ್‌ ಬಿಟ್ ಇವರ‌್ಯಾರು?

ಶಿವರಂಜನ್ ಸತ್ಯಂಪೇಟೆ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಲ್ಲಿನ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇಎಸ್) ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಗೆ ಇನ್ನೊಂದೇ ದಿನ ಬಾಕಿಯಿದ್ದು, ಚುನಾವಣೆ ಕಣ ತೀವ್ರ ರಂಗೇರಿದಂತೆ ಕಂಡು ಬರುತ್ತಿದೆ.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಂಸ್ಥೆಯ ಹಾಲಿ ಅಧ್ಯಕ್ಷ ಶಶೀಲ ಜಿ. ನಮೋಶಿ, ಉಪಾಧ್ಯಕ್ಷ ಡಾ. ಸೂರ್ಯಕಾಂತ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜಪ್ಪ ಅಪ್ಪ ಅವರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದರಿಂದ, ಮತದಾರ ಸದಸ್ಯರು ಸೇರಿದಂತೆ ಇಲ್ಲಿನ ಜನತೆ ದಂಗಾಗಿದ್ದಾರೆ. ತಮ್ಮ ತಮ್ಮ ಪ್ಯಾನಲ್‌ಗಳೊಂದಿಗೆ ತಾವು ಮಾಡಿರುವ ಸಾಧನೆ, ಕಟ್ಟಿಕೊಂಡ ಕನಸು, ಮಾಡಬೇಕೆಂಬ ಇರಾದೆಗಳನ್ನು ಮತದಾರರಿಗೆ ಪ್ರಚುರಪಡಿಸುತ್ತ ಅವರ ಮನವೊಲಿಕೆಯಲ್ಲಿ ತೊಡಗಿರುವ ಈ ಮೂವರು ಶತಾಯಗತಾಯ ಗೆದ್ದೇ ತೀರಬೇಕು ಎಂಬ ಉಮೇದಿನಲ್ಲಿದ್ದಾರೆ.ಈವರೆಗೆ ಸಂಸ್ಥೆಯ ಚುನಾವಣೆಯ ವಿಶ್ಲೇಷಣೆಯನ್ನು ಅತ್ಯಂತ ಪರಿಣಾಮಕಾರಿ ಎನ್ನುವಂತೆ  ವರದಿ ಮಾಡುತ್ತಿದ್ದ ಪತ್ರಕರ್ತ ಕ್ರಾಂತಿಕುಮಾರ ಸಹ ಅಧ್ಯಕ್ಷ ಸ್ಥಾನಕ್ಕೆ `ಒಂಟಿ ಸಲಗ~ದಂತೆ ಚುನಾವಣಾ ಕಣದಲ್ಲಿ ಧುಮುಕಿದ್ದಾರೆ. ಒಬ್ಬರು ಅಭಿವೃದ್ಧಿಗೆ ಮತನೀಡಿ ಎಂದು ಬೇಡಿಕೊಂಡರೆ ಇನ್ನೊಬ್ಬರು ಹೊಸ ಮುಖಕ್ಕೆ ಅವಕಾಶ ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಮತ್ತೊಬ್ಬರು ಪಾರದರ್ಶಕ ಆಡಳಿತದ ಭರವಸೆ ನೀಡುತ್ತ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.ವದಂತಿಗಳ ಬೆನ್ನುಹತ್ತಿ: ಚುನಾವಣೆಯ ಕಾವು ಏರುತ್ತಿರುವಂತೆ, ಶಶೀಲ ನಮೋಶಿ ತಮ್ಮ ಅವಧಿಯಲ್ಲಿ 150 ಕೋಟಿ ಅವ್ಯವಹಾರ ಮಾಡಿದ್ದಾರೆ. ಬಸವರಾಜಪ್ಪ ಅಪ್ಪ ಅವರನ್ನು ನಮೋಶಿಯವರೇ ಚುನಾವಣೆಗೆ ನಿಲ್ಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪ್ರತಿ ಮತದಾರನಿಗೆ ತಲಾ ಐದು ಲಕ್ಷ ರೂಪಾಯಿ ನೀಡಲಾಗುತ್ತಿದೆ. ಚಿನ್ನದ ಉಂಗುರಗಳನ್ನು ನೀಡಲಾಗುತ್ತಿದೆ. ಹಣ, ಔತಣಕೂಟಗಳ ಭರಾಟೆಯೇ ನಡೆದಿದೆ ಎಂಬ ಆರೋಪಗಳು ಈಗ ಸ್ಪರ್ಧಿಸಿರುವವರ ವಿರುದ್ಧ ಕೇಳಿ ಬರುತ್ತಿವೆ. ಆದರೆ ಸಂಬಂಧಿಸಿದವರು ಈ ವದಂತಿಗಳನ್ನು  ಸಾರಾಸಗಟಾಗಿ ತಳ್ಳಿ ಹಾಕುತ್ತಿದ್ದಾರೆ.ಒಲವು-ನಿಲುವು: ಈ ಮೊದಲು 918 ಮತದಾರರಿದ್ದ ಈ ಸಂಸ್ಥೆಯಲ್ಲಿ ಈಗಿರುವ ಸದಸ್ಯರ ಕುಟುಂಬದವರಿಗೆ ಮತ್ತೊಂದು ಸದಸ್ಯತ್ವ ನೀಡಬೇಕೆಂಬ (ಈಗ ಒಟ್ಟು 1,825 ಸದಸ್ಯರು) ಮಹತ್ವದ ನಿರ್ಧಾರವನ್ನು ನಮೋಶಿ ಅವರು ತಮ್ಮ ಅವಧಿಯಲ್ಲಿ ತೆಗೆದುಕೊಂಡಿರುವುದರಿಂದ ಅವರ ಬಗ್ಗೆ ಮತದಾರರ ಒಲವು ಕಂಡು ಬರುತ್ತಿದೆ ಎನ್ನಲಾಗುತ್ತಿದೆ. ಸೂರ್ಯಕಾಂತ ಪಾಟೀಲ ಅವರೊಂದಿಗೆ ಜವಳಿ, ಭೀಮಳ್ಳಿ ಇರುವುದರಿಂದ ಈ ಬಾರಿ ಹೊಸಬರಿಗೆ ಅವಕಾಶ ನೀಡಬಹುದು ಎಂದು ಸಹ ಹೇಳಲಾಗುತ್ತಿದೆ. ಇವರಿಬ್ಬರ ಮಧ್ಯೆ ಬಸವರಾಜಪ್ಪ ಅಪ್ಪ ಅವರು ಶುದ್ಧ ಹಸ್ತರಾಗಿದ್ದು ಮತ್ತೊಮ್ಮೆ ಅವರಿಗೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.ಒಂದು ಮಾತಂತೂ ಸತ್ಯ: ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಪರಸ್ಪರ ಆಪಾದನೆಯಲ್ಲಿ ತೊಡಗುವ ಇವರು ಸಂಸ್ಥೆಯನ್ನು ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂಬುದು ಸಾಮಾನ್ಯ ಜನರ ಅಭಿಪ್ರಾಯವಾಗಿದೆ. ಹೀಗಾಗಿಯೇ ಇದೇ ಮೊದಲ ಬಾರಿಗೆ ಎನ್ನುವಂತೆ ಸ್ವತಂತ್ರ ಅಭ್ಯರ್ಥಿಗಳ ಪ್ಯಾನಲ್, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಸದಸ್ಯರ ಮತ್ತು ಹಿತೈಷಿಗಳ ವೇದಿಕೆಗಳು ರಚನೆಯಾಗಿರುವುದು ಈ ಬಾರಿಯ ವಿಶೇಷವಾಗಿದೆ.ಈ ಭಾಗದ ಸರ್ವತೋಮುಖ ಅಭಿವೃದ್ಧಿ ಹಾಗೂ ಉತ್ತಮ ಧ್ಯೇಯದೊಂದಿಗೆ ದಿ. ಮಹಾದೇವಪ್ಪ ರಾಂಪುರೆ ಪ್ರತಿ ಮನೆ ಮನೆಯಿಂದ ಚಂದಾ ಹಣ ಸಂಗ್ರಹಿಸುವ ಮೂಲಕ ಸ್ಥಾಪಿಸಲಾದ ಈ ಶಿಕ್ಷಣ ಸಂಸ್ಥೆ ಈವರೆಗೆ ನಡೆಸಿದ ಸ್ವಜನಪಕ್ಷಪಾತದ ಆಡಳಿತದಿಂದಾಗಿ ಮದ್ದಾನೆಗಳ ತುಳಿತಕ್ಕೊಳಗಾದ ಕಬ್ಬಿನ ಗದ್ದೆಯಂತೆ ಬಣಗುಡುತ್ತಿದೆ ಎಂಬ ಆರೋಪ ಕೇಳಿಸಿದೆ. ಹೀಗಾಗಿ ಕದಲ್ ಬದಲ್ ಕವಡೆಕಾಯಿ ಅವರ್ನ್‌ ಬಿಟ್ ಇವರ‌್ಯಾರ್? ಎನ್ನುವಂತಾಗಿದೆ. ಆದರೂ ನಮೋಶಿ ಮತ್ತು ಸೂರ್ಯಕಾಂತ ಪಾಟೀಲರ ಮಧ್ಯೆ ನೇರ ಸ್ಪರ್ಧೆ ಇರುವುದನ್ನು ಮೇಲ್ನೋಟಕ್ಕೆ ಗುರುತಿಸಬಹುದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.